ಸುದ್ದಿಮೂಲ ವಾರ್ತೆ
ದೇವನಹಳ್ಳಿ, ನ.20: ಕಾಂತರಾಜು ಆಯೋಗ ಮತ್ತು ಸದಾಶಿವ ಆಯೋಗದ ವರದಿಯನ್ನು ಕೂಡಲೇ ಸರಕಾರ ಜಾರಿಗೊಳಿಸಿ, ಇಲ್ಲವಾದರೆ ಖುರ್ಚಿ ಖಾಲಿ ಮಾಡಿ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್ ಆಗ್ರಹಿಸಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಸದಾಶಿವ ಆಯೋಗದ ವರದಿ ಜಾರಿ ಮಾಡಿ ಒಳಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳ ಪೈಕಿ ಮಾದಿಗ ಮತ್ತು ಮಾದಿಗ ಸಂಬಂಧಿತ 49 ಜಾತಿಗಳಿದ್ದು, ಇದೇ ಅಧಿಕವಾಗಿದೆ. ಕೆಲವು ಐತಿಹಾಸಿಕ ಕಾರಣಗಳಿಂದ ಈ ಸಮಾಜಕ್ಕೆ ಶಿಕ್ಷಣ, ಸರಕಾರಿ ಸೇವೆ ಮತ್ತು ರಾಜಕೀಯ ಮತ್ತಿತರ ರಂಗಗಳಲ್ಲಿ ಪ್ರಾತಿನಿಧ್ಯ ಇಲ್ಲದೆ ಹಿಂದುಳಿಯವಂತೆ ಆಗಿದೆ. ಈ ಅನ್ಯಾಯವನ್ನು ಇನ್ನೂ ಸಹಿಸಲಾಗುವುದಿಲ್ಲ. ಈಗಾಗಲೇ ರಾಜ್ಯದಲ್ಲಿ ಕಳೆದ 30 ವರ್ಷಗಳಿಂದ ವಿವಿಧ ಚಳುವಳಿ, ಪಾದಯಾತ್ರೆ ಮಾಡಲಾಗಿದೆ ಎಂದು ಹೇಳಿದರು.
ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಕಾಂತರಾಜು ಆಯೋಗ ಮತ್ತು ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಚರ್ಚಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲವಾದರೆ ಸರಕಾರದ ವಿರುದ್ಧ ಇದೇ ನ.21ರಂದು ರಾಜ್ಯದಾದ್ಯಂತ ಎಲ್ಲಾ ಜಿಲ್ಲಧಿಕಾರಿಗಳ ಕಛೇರಿ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ದೇವಪ್ಪ, ಗೋವಿಂದರಾಜ್, ತಾಲೂಕು ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ದೇವರಾಜ್, ಕಾರ್ಯದರ್ಶಿ ನರಸಿಂಹಮೂರ್ತಿ, ಗಂಗಪ್ಪ, ಮಲ್ಲೇಪುರ ರಾಮಾಂಜಿನಪ್ಪ, ವಿಜಯಪುರ ಜಗದೀಶ್, ತೂಬಗೆರೆ ನಾರಾಯಣಪ್ಪ, ಮಂಜುನಾಥ್, ವಿಜಯಪುರ ನಾಗರಾಜ್, ಉಪಾಧ್ಯಕ್ಷೆ ರಾಧಮ್ಮ, ತುಬುಗೆರೆ ನರಸಮ್ಮ, ದೇವರಾಜ್ ಮುನಿರಾಜು, ಚನ್ನರಾಯಪಟ್ಟಣ ಮಂಜುನಾಥ್ ಮತ್ತಿತರರು ಇದ್ದರು.