ಸುದ್ದಿಮೂಲ ವಾರ್ತೆ
ದೇವನಹಳ್ಳಿ,ನ.22:ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಕಾಂತರಾಜು, ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ನೀಡಿದ್ದಆಶ್ವಾಸನೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರು ಅದರ ಬಗ್ಗೆ ಗಮನ ಹರಿಸಿಲ್ಲ ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ. ವೆಂಕಟೇಶ್ ಆರೋಪಿಸಿದರು.
ತಾಲ್ಲೂಕಿನ ಬೀರಸಂದ್ರ ಬಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ ಎದುರು ಬಿಎಸ್ಪಿ ಪಕ್ಷ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕಾಗಿ ಕಾಂತರಾಜು, ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ರಾಜ್ಯದಲ್ಲಿ ಕಾಂತರಾಜು, ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಸರ್ಕಾರ ಜಾರಿಗೆ ತರಬೇಕು, ಇಲ್ಲದಿದ್ದರೇ ರಾಜ್ಯ ಸರ್ಕಾರವೂ ಸಾಮೂಹಿಕವಾಗಿ ರಾಜೀನಾಮೆ ನೀಡಿ ಸರ್ಕಾರ ವಿಸರ್ಜನೆ ಮಾಡಲಿ, ಕುರ್ಚಿ ಖಾಲಿ ಮಾಡಿ ಶೋಷಿತರಿಗೆ ನ್ಯಾಯ ಒದಗಿಸಲು ಬದ್ಧರಾಗಿರುವವರಿಗೆ ಅಧಿಕಾರ ನೀಡಲಿ ಮೇಲ್ಜಾತಿಯ ಸ್ವಾಮೀಜಿಗಳಿಗೆ, ಮಠ ಮಾನ್ಯಗಳು ಸರ್ಕಾರವನ್ನು ನಿಯಂತ್ರಣ ಮಾಡುತ್ತಿದೆ.
ವೈಜ್ಞಾನಿಕವಾಗಿ ಜನಗಣತಿ ಮಾಡಿದ್ದರೂ ಅದನ್ನು ಜಾರಿ ಮಾಡದಂತೆ ತಡೆಯಲಾಗುತ್ತಿದೆ. ರಾಜ್ಯದಲ್ಲಿರುವ 197 ಜಾತಿಗಳ ಪೈಕಿ ಶೇ 40ರಷ್ಟು ಹಿಂದುಳಿದ ವರ್ಗದ ಸಮುದಾಯವಿದೆ ಇವರ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ರಾಜ್ಯದಲ್ಲಿ ಈವರೆಗೂ ಒಬ್ಬ ಮುಸ್ಲಿಂ ಅಥವಾ ದಲಿತರು ಮುಖ್ಯಮಂತ್ರಿಯಾಗಲಿಲ್ಲ, ಸದಾಶಿವ ಆಯೋಗದ ವರದಿಯೂ ರಾಜ್ಯ ಸರ್ಕಾರಕ್ಕೆ ತಲುಪಿ ದಶಕಗಳೇ ಕಳೆದರೂ ಅದರ ಅನುಷ್ಠಾನ ಸಾಧ್ಯವಾಗಿಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸುತ್ತೇವೆ ಎಂದು ಭರವಸೆ ನೀಡುತ್ತಾರೆ ಎಂದರು.
ದೀನ ದಲಿತರು, ಶೋಷಿತರು, ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಸಂವಿಧಾನದ ನಿಜವಾದ ಆಶಯ ಎತ್ತಿ ಹಿಡಿಯಲು ರಾಜ್ಯ ಸರ್ಕಾರವೂ ಕಾಂತರಾಜು ಆಯೋಗ, ಸದಾಶಿವ ಆಯೋಗದ ವರದಿಯನ್ನು ವಿಧಾನ ಸೌಧದಲ್ಲಿ ಮಂಡಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಬಿಎಸ್ಪಿ ಜಿಲ್ಲಾ ಸಂಯೋಜಕ ಬಿ.ಎಲ್. ರಾಜಪ್ಪ,ಜಿಲ್ಲಾಧ್ಯಕ್ಷ ಮಹದೇವ ಪಿ, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ನರಸಿಂಹಯ್ಯ, ದೇವಪ್ಪ, ಚಿಕ್ಕರಂಗಣ್ಣ, ರಾಜಕುಮಾರ್, ಜಿಲ್ಲಾ ಕಚೇರಿ ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಹೇಮಾ ಪದಾಧಿಕಾರಿಗಳಾದ ನಾರಾಯಣಸ್ವಾಮಿ, ದೇವರಾಜ್, ಮುರಳಿ, ನರಸಿಂಹ, ಮೂರ್ತಿ,ನಾಗರಾಜ್, ಜಗದೀಶ್, ನಂಜೇಶ್, ನಾರಾಯಣಪ್ಪ ,ಶ್ರೀನಿವಾಸ್, ರಾಮಾಂಜಿನಪ್ಪ ಇದ್ದರು.