ಸುದ್ದಿಮೂಲವಾರ್ತೆ
ಕೊಪ್ಪಳ ಜು 07: ಗ್ಯಾರೆಂಟಿ ಯೋಜನೆಗಳ ಭಾರ ಸಾಮಾನ್ಯ ಜನರ ಮೇಲೆ ಹಾಕಿದ್ದಾರೆ. ರಾಜ್ಯವನ್ನು ಸಾಲದ ಸುಳಿಗೆ ನೂಕುವ ಬಜೆಟ್ ಇದಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಜೆಟ್ ನಲ್ಲಿ ಕೊಪ್ಪಳ ಜಿಲ್ಲೆಯನ್ನು ಸಂಪೂರ್ಣ ವಾಗಿ ಕಡೆಗಣಿಸಲಾಗಿದೆ. ಅಂಜನಾದ್ರಿ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ನೀರಾವರಿ ಯೋಜನೆಗೆ ಹಣ ಒದಗಿಸಿಲ್ಲ. ಜಿಲ್ಲೆಯಿಂದ ಮೂವರು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಜಿಲ್ಲೆಗೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಗ್ಯಾರೆಂಟಿ ಯೋಜನೆಗಳ ಜಾರಿಯ ಹೆಸರಲ್ಲಿ ಈ ಬಜೆಟ್ ಸಾಮಾನ್ಯರ ಮೇಲೆ ದೊಡ್ಡ ಹೊರೆ ಹೊರೆಸಿದೆ. ನಮ್ಮದು 77 ಸಾವಿರ ಕೋಟಿ ಸಾಲ ಇದ್ದದ್ದು, ಈಗ 88 ಸಾವಿರ ಕೋಟಿಗೆ ಹೆಚ್ಚಿಸಿದ್ದಾರೆ. ಬಜೆಟ್ ಗಾತ್ರ 3.27 ಲಕ್ಷ ಕೋಟಿ ಮಾಡಿದ್ದಾರೆ. ಈ ಸಾಲ ಸೇರಿಸಿದರೆ ರಾಜ್ಯದ ಸಾಲ ಆರೂವರೆ ಲಕ್ಷ ಕೋಟಿ ರೂ. ಆಗಲಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಕೃಷಿ, ನೀರಾವರಿ ಗೆ ಕಡಿಮೆ ಅನುದಾನ ಇಡಲಾಗಿದೆ.
ಬಜೆಟ್ ಮಂಡನೆ ಎನ್ನುವುದು ರಾಜ್ಯದ ಅಭಿವೃದ್ಧಿ, ಮುನ್ಸೂಚನೆ ನೀಡುವ ದಾಖಲೆ. ಅದಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ನಾವೆಲ್ಲ ಚುನಾವಣೆ ಸಮಯದಲ್ಲಿ ಹಾಗೂ ಸದನದ ಹೊರತೆ ಆರೋಪ ಪ್ರತ್ಯಾರೋಪ ಮಾಡಿದರೂ ಬಜೆಟ್ ಮಂಡನೆ ಎನ್ನುವುದು ರಾಜಕೀಯದಿಂದ ಹೊರತಾದ ಪವಿತ್ರ ಕರ್ತವ್ಯ. ಸದನದಲ್ಲಿ ಬಜೆಟ್ ಮಂಡನೆಗೆ ಅವಕಾಶ ಸಿಗುವುದು ಪುಣ್ಯದ ಫಲ. ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ 14 ಬಾರಿ ಬಜೆಟ್ ಮಂಡನೆಗೆ ಅವಕಾಶ ಸಿಕ್ಕಿರುವುದು ಈ ರಾಜ್ಯ ಹಾಗೂ ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರಣಕ್ಕೆ, ಒಕ್ಕೂಟ ವ್ಯವಸ್ಥೆಯ ಕಾರಣಕ್ಕೆ.
ಆದರೆ ಈ ಬಾರಿ ಸಿದ್ದರಾಮಯ್ಯ ಅವರು ತಮ್ಮ ಕರ್ತವ್ಯದಲ್ಲಿ ವಿಮುಖರಾಗಿದ್ದಾರೆ. ಬಜೆಟ್ನ ಪ್ರತಿ ಅಂಶದಲ್ಲೂ ಬಿಜೆಪಿಯನ್ನು ಟೀಕಿಸಲು ಒಂದಷ್ಟು ಅಂಶವನ್ನು ಮೀಸಲಿಟ್ಟಿದ್ದಾರೆ. ಇದು ರಾಜ್ಯದ ಅಭಿವೃದ್ಧಿ ಬಜೆಟ್ ಅಲ್ಲ. ಬದಲಾಗಿ ರಾಜ್ಯಕ್ಕೆ ಮಾರಕವಾಗಿದೆ. ಜನರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪಾಠ ಕಲಿಸಲಿದ್ದಾರೆ ಎಂದು ಆರೋಪಿಸಿದರು.