ಸುದ್ದಿಮೂಲ ವಾರ್ತೆ
ಮೈಸೂರು, ಜು.8: ವಿಪಕ್ಷ ನಾಯಕನಿಲ್ಲದೆ ಬಜೆಟ್ ಮಂಡನೆ ಆಗಿರುವುದು ನಾಚಿಕೆಯ ಸಂಗತಿ ಮಾತ್ರವೆ ಅಲ್ಲ, ಇದು ಬಿಜೆಪಿಯಲ್ಲಿನ ಅರಾಜಕತೆಗೆ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಟೀಕಾ ಪ್ರಹಾರ ನಡೆಸಿದ್ದಾರೆ.
ಶನಿವಾರ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನಿಲ್ಲದೆ ಬಜೆಟ್ ಮಂಡನೆಯಾಗಿದೆ ಎಂದರೆ ನಾಚಿಕೆಯ ಸಂಗತಿ. ಬಿಜೆಪಿಯಲ್ಲಿ ಅರಾಜಕತೆ ಇದೆ. ಗ್ಯಾರಂಟಿಗಳನ್ನು ಟೀಕೆ ಮಾಡುವ ಬಿಜೆಪಿಗೆ ಈ ರೀತಿ ಆಗಿರುವುದು ನಾಚಿಕೆಗೇಡು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಪ್ರತಿಕ್ರಿಯೆ ಎಂಬುದು ದೊಡ್ಡ ವಿಷಯ. ವೈವಿಧ್ಯತೆಯಲ್ಲಿ ಏಕತೆ, ಏಕತೆಯಲ್ಲಿ ವೈವಿಧ್ಯತೆ. ಎಲ್ಲಾ ರಾಜ್ಯಗಳು ಒಪ್ಪಬೇಕು. ಮುಂದಿನ ಲೋಕಸಭಾ ಚುನಾವಣೆ ವೋಟ್ ಬ್ಯಾಂಕ್ಗಾಗಿ ಚಾಲ್ತಿಗೆ ತರಲಾಗಿದೆ. ಅಷ್ಟೇ, ಇದು ಜಾರಿಯಾಗುವುದು ಕಷ್ಟ ಎಂದು ವ್ಯಾಖ್ಯಾನಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಹಿರಿಯ ನಾಯಕ, 2 ಬಾರಿ ಮುಖ್ಯಮಂತ್ರಿ ಆಗಿದ್ದವರು. ಮಾಜಿ ಪ್ರಧಾನಿಗಳ ಮಗ, ಅವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಪೆನ್ ಡ್ರೈವ್ಅನ್ನು ತೋರಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು, ಇದು ಬ್ಲಾಕ್ ಮೇಲ್. ಇದ್ದರೆ ತೋರಿಸಲಿ, ಅದನ್ನು ಬಿಟ್ಟು ಮಿಮಿಕ್ರಿ ತರ ಕುಮಾರಸ್ವಾಮಿ ಮಾಡಬಾರದು ಟೀಕಿಸಿದರು.
ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕುಮಾರಸ್ವಾಮಿಗೆ ಯಡಿಯೂರಪ್ಪ ಶಹಬ್ಬಾಷ್ ಗಿರಿ ಹೇಳಾಗಿದೆ. ಎರಡು ಪಕ್ಷಗಳು ಒಟ್ಟಾಗಿ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ಒಳ್ಳೆಯ ಬಜೆಟ್ ನೀಡಿದ್ದಾರೆ:
ಮುಖ್ಯಮಂತ್ರಿ ಸಿದ್ದರಾಮಯ್ಯನವರು 2023-24 ನೇ ಸಾಲಿನ ಬಜೆಟ್ ಉತ್ತಮವಾಗಿದ್ದು. ಅಕ್ಷರ, ಅನ್ನ, ಆರೋಗ್ಯಕ್ಕೆ ಒತ್ತು ನೀಡಿದ್ದು, ಮೂರು ಕ್ಷೇತ್ಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಯಾವ ಜಾತಿ, ಧರ್ಮ ನೋಡದೇ ಎಲ್ಲರಿಗೂ ಗ್ಯಾರಂಟಿ ಯೋಜನೆ ನೀಡಿರುವುದು ದೇಶದಲ್ಲೇ ಮಾದರಿ ಎಂದು ಬಣ್ಣಿಸಿದರು.
ಮಾಜಿ ಸಚಿವ ಈಶ್ವರಪ್ಪ 17 ಜನರಿಂದ ಬಿಜೆಪಿ ಪಕ್ಷ ಹಾಳಾಯಿತು ಎಂದು ಹೇಳಿರುವ ಬಗ್ಗೆ ತೀವ್ರ ಸಮಾಧಾನ ವ್ಯಕ್ತಪಡಿಸಿದ ಅವರು, ನಮ್ಮಿಂದಲೇ ಅಧಿಕಾರ ಪಡೆದು ಸುಖಪಟ್ಟವರು ಈಶ್ವರಪ್ಪ. ಕೊನೆಗೆ ಲೂಟಿ ಮಾಡಿ ಅಧಿಕಾರ ಕಳೆದುಕೊಂಡರು ಎಂದು ತಿರುಗೇಟು ನೀಡಿದರು.