ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.18: ಕಳೆದ ಒಂದು ವಾರದಿಂದ ರಾಜ್ಯದಾದ್ಯಂತ ಮಹಿಳೆಯರು ಸರಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇಂದು ಭಾನುವಾರ, ಅಷಾಢ ಅಮವಾಸ್ಯೆ ಮಹಿಳೆಯರು ಧಾರ್ಮಿಕ ಸ್ಥಳಕ್ಕೆ ತಂಡ ತಂಡವಾಗಿ ಭೇಟಿ ನೀಡುತ್ತಿದ್ದಾರೆ.ಇದರಿಂದಾಗಿ ಬಸ್ ನಿಲ್ದಾಣಗಳಲ್ಲಿ ಜನಜಂಗುಳಿ. ಆದರೆ ಬಸ್ ಗಳ ಸಂಖ್ಯೆ ಮೊದಲಿನಂತೆ ಇರುವದರಿಂದ ಅದರ ಸೈಡ್ ಎಫೆಕ್ಟ್ ಬಹಳವಾಗುತ್ತಿದೆ. ಸರಕಾರ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಮಹಿಳೆಯರೇ ಆಗ್ರಹಿಸುತ್ತಿದ್ದಾರೆ.
ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುವದಕ್ಕೆ ಈಗ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣವಾಗಿದೆ. ಇಂದು ಭಾನುವಾರ ಬಹುತೇಕ ರಜೆ, ಇಂದೇ ಅಮವಾಸ್ಯೆ ಬಂದಿದೆ. ಅಮವಾಸ್ಯೆಯ ದಿನ ಭಕ್ತರು ದೇವಸ್ಥಾನಕ್ಕೆ ಹೋಗುವುದು ವಾಡಿಕೆ. ಈ ಅಮವಾಸ್ಯೆಯಂದು ಬಹುತೇಕ ದೇವಸ್ಥಾನಗಳಲ್ಲಿ ಮಹಿಳೆಯರೇ ತುಂಬಿದ್ದರು. ಮುಂಜಾನೆಯಿಂದ ಮಕ್ಕಳೊಂದಿಗೆ ಹೆಣ್ಮಕ್ಕಳು ಬಸ್ ಗೆ ಕೊಪ್ಪಳದ ಗವಿಮಠಕ್ಕೆ ಬಂದಿದ್ದರು. ಗವಿಮಠಕ್ಕೆ ಪ್ರತಿ ಅಮವಾಸ್ಯೆಗೆ ಜನ ಬರುತ್ತಾರೆ. ಈ ಬಾರಿ ಅಮವಾಸ್ಯೆ ಅಧಿಕವಾಗಿ ಮಹಿಳೆಯರೇ ತುಂಬಿದ್ದರು. ಶ್ರೀಗವಿಸಿದ್ದೇಶ್ವರ ಕರ್ತೃ ಗದ್ದುಗೆ ದರ್ಶನ ಪಡೆದು ವಾಪಸ್ಸಾದರು. ದೂರ ದೂರದಿಂದ ಕೊಪ್ಪಳಕ್ಕೆ ಬಂದು ಹೋಗುವವರೆ ಸಂಖ್ಯೆ ಹೆಚ್ಚಾಗಿದ್ದು. ಬಸ್ ನಿಲ್ದಾಣದಲ್ಲಿ ಬಸ್ ಬರುತ್ತಲೇ ಓಡೋಡಿ ಬಂದು ಬಸ್ ಹತ್ತಿದರು.
ಈ ಮಧ್ಯೆ ಸರಕಾರ ಫ್ರೀ ಬಸ್ ಪ್ರಯಾಣ ಮಾಡಿದೆ ಆದರೆ ವಯಸ್ಕರು ಬಸ್ ನಲ್ಲಿ ಬರಲು ಆಗುತ್ತಿಲ್ಲ. ಹೆಣ್ಣುಮಕ್ಕಳಿಗೆ ಮಾನ ಮಾರ್ಯಾದೆ ಇಲ್ಲದಂತಾಗಿದೆ. ಅದಕ್ಕೆ ಸರಕಾರ ಮಹಿಳೆಯರಿಗೆ ಅರ್ಧ ದರ ಅಥವಾ ಬಸ್ ಗಳ ಸಂಖ್ಯೆ ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ.
ಈಗ ಕೊಪ್ಪಳ ಸೇರಿ ಉತ್ತರ ಕರ್ನಾಟಕದಲ್ಲಿ ಬರ ಆವರಿಸಿದೆ. ಕೃಷಿ ಕಾರ್ಯಗಳಿಲ್ಲ. ಜನರ ಕೈಯಲ್ಲಿ ಹಣವಿಲ್ಲ. ಹಣವಿಲ್ಲದಿದ್ದರೂ ಬಸ್ ನಲ್ಲಿ ಫ್ರೀ ಹೋಗಿ ಬರಬಹುದು ಎಂಬ ಕಾರಣಕ್ಕೆ ಮಹಿಳೆಯರು ದೇವರು ದಿಂಡರು ಎಂದು ಸಂಚರಿಸುತ್ತಿದ್ದಾರೆ. ಜನರ ಕೈಯಲ್ಲಿ ಹಣವಿಲ್ಲದೆ ಇರುವದರಿಂದ ವ್ಯಾಪಾರ ಅಷ್ಟಕಷ್ಟೆ ಬಸ್ ನಲ್ಲಿ ಬಂದಷ್ಟು ಜನ ವ್ಯಾಪಾರವಾಗುತ್ತಿಲ್ಲ. ಕೇವಲ ಕುಡಿವ ನೀರು ಹಾಗು ಬಿಸ್ಕಿಟ್ ಮಕ್ಕಳಿಗೆ ಕುರೆಕುರೆ ಅಂಥ ಐಟಂಗಳು ಮಾರಾಟವಾಗುತ್ತಿವೆ ಎಂದು ಬಸ್ ನಿಲ್ದಾಣದಲ್ಲಿಯ ಮಿಠಾಯಿ ಮಾರಾಟಗಾರ ಅಬ್ದುಲ್ ರಷೀದ್ ಹೇಳುತ್ತಾರೆ.
ಕಳೆದ ಒಂದು ವಾರದಿಂದ ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಉಚಿತ ಪ್ರಯಾಣದ ಮಧ್ಯೆ ಪರದಾಟದಿಂದಾಗಿ ಸರಕಾರ ಕ್ರಮವನ್ನು ವಿರೋಧಿಸುತ್ತಿದ್ದಾರೆ.