ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 22 : ಜನರು ಅದೆಷ್ಟೇ ಬ್ಯುಸಿ ಇದ್ದರೂ ಹಬ್ಬ-ಹರಿದಿನ ಎಂದರೆ ಸಂಭ್ರಮದೊಂದಿಗೆ ಅದ್ಧೂರಿಯಾಗಿ ಆಚರಿಸುತ್ತಾರೆ. ನಾಡಿನಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ ಸಂಭ್ರಮ ಮನೆ ಮಾಡಿದೆ. ಆಯುಧ ಪೂಜೆ ಹಿನ್ನೆಲೆ ಹೂವು-ಹಣ್ಣುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ನಗರದ ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಜಯನಗರ, ಬಸವನಗುಡಿ, ಮಡಿವಾಳ ಮಾರ್ಕೆಟ್ಗಳಲ್ಲಿ ಜನಸ್ತೋಮವೇ ತುಂಬಿ ತುಳುಕುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ರೈತರು ಮಾರಾಟಕ್ಕೆ ಆಗಮಿಸಿದ್ದಾರೆ. ಆಯುಧ ಪೂಜೆಗೆ ಬೂದುಕುಂಬಳಕಾಯಿ ಹಾಗೂ ಬಾಳೆ ಕಂಬಕ್ಕೆ ಫುಲ್ ಡಿಮ್ಯಾಂಡ್ ಇದ್ದು, ಹಬ್ಬದ ಸಂಭ್ರಮದಲ್ಲಿ ಇರುವವರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ.
ಆಯುಧ ಪೂಜೆಗೆ ಮುಖ್ಯವಾಗಿ ಬೇಕಾಗಿರುವ ಬೂದು ಕುಂಬಳಕಾಯಿ ದರವು ಕಳೆದ ಬಾರಿಗಿಂತ ಈ ಬಾರಿ ಏರಿಕೆ ಆಗಿದೆ. ಕೆ.ಜಿಗೆ 30ರೂ ಇದ್ದ ಬೂದುಗುಂಬಳ ಈಗ ಕೆ.ಜಿಗೆ 150 ರಿಂದ 200ರೂವರೆಗೂ ಇದೆ. ತಮಿಳುನಾಡು, ಆಂಧ್ರಪ್ರದೇಶದಿಂದ ಬೂದು ಕುಂಬಳಕಾಯಿ ತರಲಾಗುತ್ತಿದೆ. ಈ ಬಾರಿ ಮಳೆ ಇಲ್ಲದೆ, ಇಳುವರಿ ಕಡಿಮೆಯಾಗಿದ್ದರಿಂದ ದರ ಏರಿಕೆ ಆಗಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ. ಇನ್ನೂ ಬಾಳೆ ಕಂಬಕ್ಕೆ ಜೋಡಿ 100-150ರೂ ವರೆಗೂ ಮಾರಾಟ ಮಾಡಲಾಗುತ್ತಿದೆ.