ಸುದ್ದಿಮೂಲ ವಾರ್ತೆ
ಮೈಸೂರು, ಅ. 22 : ಬೆಲೆ ಏರಿಕೆಯ ಬಿಸಿ ನಡುವೆ ನಾಡಿನ ಜನತೆ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬ ಆಚರಣೆಗೆ ಸಿದ್ದತೆ ನಡೆಸಿದ್ದಾರೆ. ಮಾರುಕಟ್ಟೆಗಳಲ್ಲಿ ಜನ ಜಂಗುಳಿ, ಅಲ್ಲೆಲ್ಲಾ ವ್ಯಾಪಾರದ ಭರಾಟೆ ಜೋರಾಗಿಯೇ ನಡೆಯಿತು. ಜನರು ಬೇರೆ ದಾರಿಯಲ್ಲಿದೆ ದುಬಾರಿ ಬೆಲೆ ತೆತ್ತು ಬೇಕಾದ ವಸ್ತುಗಳನ್ನು ಖರೀದಿಸಿದರು.
ನಗರದ ಪ್ರಮುಖ ಮಾರುಕಟ್ಟೆಗಳು, ರಸ್ತೆ ಬದಿಗಳಲ್ಲಿ ವ್ಯಾಪಾರಸ್ಥರು ವ್ಯಾಪಾರ ನಡೆಸಿದರು. ರಸ್ತೆ ಬದಿಗಳಲ್ಲಿ ಹಳ್ಳಿಗಳಿಂದ ರೈತರು ಬೂದಗುಂಬಳ ಮತ್ತು ಬಾಳೆಕಂಬಗಳು, ಹಳದಿ ಮತ್ತು ಬಿಳಿಬಣ್ಣದ ಸೇವಂತಿಗೆ ಹೂಗಳನ್ನು ರಸ್ತೆಬದಿಯಲ್ಲಿ ಮಾರಾಟ ಮಾಡಿದರು. ಹೂ ಮತ್ತು ತರಕಾರಿಗಳ ಬೆಲೆ ಗಗನಕ್ಕೆ ಏರಿದ್ದು ಒಂದು ಮಾರು ಸೇವಂತಿಗೆ 110 ರು.ನಿಂದ 120 ರು., ಮಾರಾಟ, ಮಲ್ಲಿಗೆ 100 ರಿಂದ 150 ರು., ಕನಕಂಬಾರ 150 ರಿಂದ 200 ರೂಗೆ ಮಾರಾಟವಾದವು. ಗುಲಾಬಿ ಮತ್ತಿತರ ಹೂವುಗಳು ಹಬ್ಬದ ಹಿನ್ನೆಲೆಯಲ್ಲಿ ಸಾಮಾನ್ಯ ದಿನದ ಬೆಲೆಗಿಂತ ದುಪ್ಪಟ್ಟಾಗಿದ್ದವು.
ಏಲಕ್ಕಿ ಬಾಳೆ ಪ್ರತಿ ಕೆಜಿಗೆ 15 ರು.ಗೆ ಏರಿಕೆ ಆಗಿತ್ತು. 75 ರಿಂದ 80 ರು. ಇದ್ದದ್ದು 100 ರಿಂದ 115 ರು.ವರೆಗೆ ಮಾರಾಟವಾಯಿತು. ತರಕಾರಿ ಬೆಲೆ ಅಷ್ಷೇನು ಏರಿಕೆ ಆಗದೆ ಇದ್ದದ್ದು ಜನರಿಗೆ ಕೊಂಚ ನೆಮ್ಮದಿ ಆಗಿತ್ತು. ಕಳೆದ ಎರಡು ಮೂರು ದಿನಗಳ ಹಿಂದೆಯೇ ಕಾಯಿಗಳನ್ನು ಪ್ರಮುಖ ರಸ್ತೆ, ವೃತ್ತಗಳಲ್ಲಿ ತಂದು ಗುಡ್ಡೆ ಹಾಕಿದ್ದ ರೈತರು ಭರ್ಜರಿ ವ್ಯಾಪಾರ ನಡೆಸಿದರು. ಬೂದುಗುಂಬಳ ಪ್ರತಿ ಕೆಜಿಗೆ 20 ರು.ನಿಂದ 40 ರು.ಗೆ. ಮಾರಾಟ ಆಯಿತು. ಇನ್ನೂ ನಿಂಬೆ ಹಣ್ಣು 10 ರೂ.ಗೆ ಎರಡು ಮತ್ತು ಮೂರು ದೊರೆಯಿತು. ವಿಭೂತಿ, ಅರಿಶಿಣ-ಕುಂಕುಮ, ಧೂಪ ಸೇರಿದಂತೆ ಪೂಜಾ ಸಾಮಾಗ್ರಿಗಳು ಸಹ ತುಟ್ಟಿಯಾಗಿದ್ದವು.
ಆಯುಧ ಪೂಜೆಗೆ ಬೇಕಾಗಿರುವ ಬಾಳೆ ಕಂದು, ಮಾವಿನ ಎಲೆಗಳು ಸಹ ನಿಗಧಿತ ಬೆಲೆಗೆ ಮಾರಾಟವಾದವು. ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮತ್ತು ಮಂಡಿ ಮಾರುಕಟ್ಟೆ, ನಂಜು ಮಳಿಗೆ, ಎಂ.ಜಿ.ರಸ್ತೆ ಮಾರುಕಟ್ಟೆ ಸೇರಿದಂತೆ ಧನ್ವಂತ್ರಿ ರಸ್ತೆ, ಆಗ್ರಹಾರ ವೃತ್ತ, ಆರ್ಎಂಸಿ, ವಿನೋಭಾ ರಸ್ತೆ, ಸಯ್ಯಾಜಿರಾವ್ ರಸ್ತೆ, ಜೆಕೆ ಮೈದಾನ ಸೇರಿದಂತೆ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವ್ಯಾಪಾರ ನಡೆಯಿತು. ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದ ಸ್ವೀಟ್ ಅಂಗಡಿಗಳಲ್ಲಿ ಜನಜಂಗುಳಿ ಕಂಡು ಬಂತು. ಸ್ವೀಟ್ ಮಳಿಗೆಗಳು ಸಹ ಭರ್ಜರಿ ವ್ಯಾಪಾರ ವಹಿವಾಟು ನಡೆಸಿದವು. ಗಾರೆ ಕೆಲಸದವರು ಸೇರಿದಂತೆ ಹಲವರು ಬಟ್ಟೆಗಳನ್ನು ಉಡುಗೊರೆ ಕೊಡುವುದರಿಂದ ಬಟ್ಟೆ ಅಂಗಡಿಗಳಲ್ಲೂ ಜನಜಂಗುಳಿ ಕಂಡು ಬಂತು.
ಜನರು ಮನೆಗಳಲ್ಲಿ ಹಬ್ಬವನ್ನು ಆಚರಿಸಲು ಸಿದ್ದತೆ ನಡೆಸಿದರೆ ಸರ್ಕಾರ ಆರ್ಥಾತ್ ಜಿಲ್ಲಾಡಳಿತ ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿಸಲು ಸಜ್ಜಾಗುತ್ತಿದೆ. ಕಾರು, ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ಬಗೆಯ ವಾಹನಗಳನ್ನು ನೀರಿನಿಂದ ಸ್ವಚ್ಚಗೊಳಿಸಲು ಗ್ಯಾರೇಜ್ ಗಳು ಹೌಸ್ ಪುಲ್ ಆಗಿದ್ದವು. ಜನರು ತಮ್ಮ ವಾಹನಗಳನ್ನು ತೊಳೆದು ಪೂಜೆ ಸಲ್ಲಿಸಲು ಭರದ ಸಿದ್ದತೆ ಮಾಡಿಕೊಂಡರು.