ಸುದ್ದಿಮೂಲ ವಾರ್ತೆ
ಮೈಸೂರು, ಜೂ. 15 : ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರು ಬೆಳೆಯುವ ಭತ್ತ,, ರಾಗಿ, ಜೋಳವನ್ನು ರಾಜ್ಯ ಸರ್ಕಾರ ಖರೀದಿಸುವ ಮೂಲಕ ರೈತರನ್ನು ರಕ್ಷಿಸಬೇಕು . ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸರ್ಕಾರಕ್ಕೆ ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಅಕ್ಕಿ ಖರೀದಿ ಬೇಡಿಕೆ ಸಲ್ಲಿಸಲಾಗಿದ್ದು, ಅದಕ್ಕೆ ಕೇಂದ್ರ ಸರ್ಕಾರ ಸಮ್ಮತಿ ನೀಡಿಲ್ಲ ಎಂದು ಹೇಳಿದ್ದೀರಿ. ರಾಜ್ಯದ ಜನರ ತೆರಿಗೆ ಹಣವನ್ನು ಕೇಂದ್ರ ಸರ್ಕಾರಕ್ಕೆ ಕೊಡುವ ಬದಲು ರಾಜ್ಯದ ರೈತರಿಂದಲೇ ನೇರವಾಗಿ ಭತ್ತ, ರಾಗಿ, ಜೋಳ ಖರೀದಿ ಮಾಡಿ ಬಡವರಿಗೆ ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸುವ ಯೋಜನೆ ಕೈಗೆತ್ತಿಕೊಂಡರೆ ರೈತರಿಗೂ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಬಡವರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ ಘೋಷಣೆ ಮಾಡಿದ್ದೀರಿ. ಅದರ ಉತ್ಪಾದನೆಗೆ ತಗುಲುವ ವೆಚ್ಚ ಎಷ್ಟು, ಸರ್ಕಾರದಿಂದ ಆಗುವ ಖರ್ಚು ಎಷ್ಟು ಎಂದು ಲೆಕ್ಕ ಹಾಕಬೇಕು.
ಅದರ ಬದಲು ಸಣ್ಣ ಮಟ್ಟದ ಒಂದು ಕೆವಿ ಸಾಮರ್ಥ್ಯದ ಸೋಲಾರ್ ವಿದ್ಯುತ್ ಯೋಜನೆಯನ್ನು ಪ್ರತಿ ಮನೆಗೆ ಕಲ್ಪಿಸಿದರೆ ಶಾಶ್ವತವಾದ ಯೋಜನೆಯಾಗುತ್ತದೆ. ಇದರಿಂದ ಪರಿಸರ ಸಂರಕ್ಷಣೆಯಾಗುತ್ತದೆ. ಸರ್ಕಾರಕ್ಕೂ ಪ್ರತಿ ವರ್ಷ ಹೂರೆಯಾಗುವುದು ಕಡಿಮೆಯಾಗುತ್ತದೆ. ಈ ಬಗ್ಗೆ ಗಂಭೀರವಾಗಿ ಚಿಂತೆನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.