ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ.14: ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ, ಅನುಗೊಂಡನಹಳ್ಳಿ ಹಾಗೂ ಕಸಬಾ ಹೋಬಳಿಯ ಕೆರೆಗಳಿಗೆ ನೀರು ಹರಿಸುವ ವೆಂಗಯ್ಯನ ಕೆರೆ ಏತನೀರಾವರಿ ಯೋಜನೆಯ ಕಾಮಗಾರಿ ಉದ್ಘಾಟನೆ ಹಂತಕ್ಕೆ ತಲುಪಿದ್ದು ಅಕ್ಟೋಬರ್ ಮಾಸಾಂತ್ಯಕ್ಕೆ ಮೊದಲ ಹಂತದ ಕಾಮಗಾರಿ ಉದ್ಘಾಟನೆ ಮಾಡುತ್ತೇವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಕೊರಳೂರು, ಅಪ್ಪಾಜಿಪುರ, ಬಿಸನಹಳ್ಳಿ, ಕೋಡಿಹಳ್ಳಿ ಬಳಿಯ ಕೆರೆಗಳಿಗೆ ತೆರಳಿ ಪರೀಕ್ಷಾರ್ಥ ನೀರು ಹರಿಸುವುದರ ಮೂಲಕ ಪರಿಶೀಲನ ನಡೆಸಿ ಮಾತನಾಡಿದರು.
ನೀರಾವರಿ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಸರ್ಕಾರ ಬದ್ದವಾಗಿದ್ದು, ಅಗತ್ಯ ಯೋಜನೆಗಳಿಗೆ ಅಗತ್ಯ ಅನುದಾನಗಳಲ್ಲಿ ಬಿಡುಗಡೆ ಮಾಡುವ ಕಾರ್ಯ ಮಾಡಲಾಗುವುದು. ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆ ರೈತರಿಗೆ ವರದಾನವಾಗಲಿದ್ದು ಮೂರು ಹೋಬಳಿಗಳ ಕೆರೆಗಳಿಗೆ ಹರಿಸಲಾಗುವುದು. ಉಳಿದಂತೆ
ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಗಳ ಕೆರೆಗಳಿಗೆ 2ನೇ ಹಂತದ ವೃಷಭಾವತಿ ವ್ಯಾಲಿ ಯೋಜನೆ ಮೂಲಕ ನೀರು ಪೂರೈಕೆ ಮಾಡುವ ಬಗ್ಗೆ ಈಗಾಗಲೆ ಸಣ್ಣ ನೀರಾವರಿ ಸಚಿವರ ಬಳಿ ಚರ್ಚೆ ನಡೆಸಲಾಗಿದ್ದು ಯೋಜನೆ ಅನುಷ್ಠಾನ ಮಾಡುವ ಭರವಸೆ ನೀಡಿದ್ದಾರೆ ಎಂದರು.
43 ಎಂಎಲ್ಡಿ ನೀರು:
ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆಯ ಮೂಲಕ ಹೊಸಕೋಟೆ ತಾಲೂಕಿನ 38 ಕೆರೆಗಳಿಗೆ 43 ಎಂ.ಎಲ್.ಡಿ ಸಂಸ್ಕರಿಸಿದ ನೀರನ್ನು ತುಂಬಿಸುವ 132 ಕೋಟಿ ರೂಪಾಯಿ ವೆಚ್ಚದ ಮಹತ್ತರ ಯೋಜನೆಯ ಇದಾಗಿದ್ದು ಅಕ್ಟೋಬರ್ ಮಾಸಾಂತ್ಯಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಉದ್ಘಾಟಿಸುವ ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಮಿಸಿರುವ ವಾಲ್ಗಳು, ಕೆರೆಯ ಅಭಿವೃದ್ದಿ, ಕಟ್ಟೆಗಳ ವೀಕ್ಷಣೆ ಮಾಡುವ ಕೆಲಸ ಮಾಡಲಾಗಿದೆ.
ಟಿಎಪಿಸಿಎಂಎಸ್ ಮಾಜಿ ಅದ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೋಡಿಹಳ್ಳಿ ಸುರೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸುನಿಲ್, ಯುವ ಮುಖಂಡ ಭೋದನಹೊಸಹಳ್ಳಿ ಪ್ರಕಾಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಹಾಜರಿದ್ದರು.