ಬೆಂಗಳೂರು, ಸೆ.6: ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಆದಿಯಾಗಿ ಇಡೀ ಸಚಿವ ಸಂಪುಟ ಕಲಬುರ್ಗಿಗೆ ತೆರಳಲಿದ್ದು, ಸೆ.17ರಂದು ಕಲಬುರ್ಗಿಯಲ್ಲಿಯೇ ಸಚಿವ ಸಂಪುಟ ಸಭೆ ನಡೆಸಲಾಗುತ್ತದೆ.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ದಿಗಾಗಿ ಸಂವಿಧಾನ 371ಜೆ ಕಲಂಗೆ ತಿದ್ದುಪಡಿ ತಂದು ಶಿಕ್ಷಣ, ಉದ್ಯೋಗ ಹಾಗೂ ಅನುದಾನ ಒದಗಿಸುವ ಮಹತ್ವದ ಕೊಡುಗೆ ಜಾರಿಗೆ ಬಂದು ಒಂದು ದಶಕ ಕಳೆದಿದೆ. ಈ ಸಂದರ್ಭದಲ್ಲಿ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ನಡೆಸಲು ಉದ್ದೇಶಿಸಲಾಗಿದ್ದು, ಇದೇ ವೇಳೆ ಸಚಿವ ಸಂಪುಟ ಸಭೆಯನ್ನೂ ಅಲ್ಲಿಯೇ ನಡೆಸುವ ಮೂಲಕ ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗುವಂತ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.