ಮೈಸೂರು, ಮೇ 11: ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 143 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮೇ 13 ರಂದು ಮತಪೆಟ್ಟಿಯೊಳಗಿರುವ ಗುಟ್ಟು ಬಯಲಾಗಲಿದೆ. ಈ ಮಧ್ಯೆ ಮತ ಹಾಕಿದ ಮತ್ತು ರಾಜಕೀಯ ಪಕ್ಷಗಳ ಮುಖಂಡರು ಸುಮ್ಮನೆ ಇಲ್ಲ. ಜಯ=ಅಪಜಯಗಳ ಲೆಕ್ಕಾಚಾರದಲ್ಲಿ ಮುಳುಗಿ ತೇಲುತ್ತಿದ್ದಾರೆ. ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂಬುದರ ಜೊತೆಗೆ ಅವರು ಹೇಗೆ ಗೆಲ್ಲುತ್ತಾರೆ ಎಂಬುದನ್ನೂ ಸಹ ತಮ್ಮದೇ ಬಗೆಯಲ್ಲಿ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸೋಲೆ ಇಲ್ಲ ಗೆಲುವೇ ಎಲ್ಲಾ… ಎಂದು ವಾದಿಸುತ್ತಿದ್ದರೆ, ಮತ್ತೊಂದು ಕಡೆ ಸಾವಿರಾರು ರೂಪಾಯಿಗಳ ಬೆಟ್ಟಿಂಗ್ ಕಟ್ಟುತ್ತಿದ್ದು, ಜಿಲ್ಲೆಯಾದ್ಯಂತ ಬೆಟ್ಟಿಂಗ್ ಅಬ್ಬರ ಜೋರಾಗಿದೆ.
ಜೆಡಿಎಸ್ 25 ಸೀಟುಗಳ ಮೇಲೆ ದಾಟಲ್ಲ, ಸಮಿಶ್ರ ಸರ್ಕಾರ ಆಗುತ್ತಾ.. ಇಲ್ಲವಾ, ಒಂದೇ ಪಕ್ಷ ಸರ್ಕಾರ ಮಾಡುತ್ತಾ.. ಮಾಡಿದರೆ ಯಾವ ಪಕ್ಷ ಮಾಡುತ್ತೇ ಎಂಬ ಬಗ್ಗೆ ಬೆಟ್ಟಿಂಗ್ ನಡೆಯುತ್ತಿದೆ.
ಇದೇ ವೇಳೆ ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯನವರಿಗೆ ಪ್ರಬಲ ಪೈಪೋಟಿ ನೀಡಿರುವ
ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮುಖಂಡರು ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ತಮ್ಮ ಅಭ್ಯರ್ಥಿಯೇ ಗೆಲ್ಲುವುದು ನೂರಷ್ಟು ಖಚಿತ ಎಂದೇಳುತ್ತಿದ್ದಾರೆ. ಯಾರು ಏನೇ ಹೇಳಿದರೆ ಮತ ಪೆಟ್ಟಿಗೆ ತೆರೆದ ನಂತರವೇ ಗೊತ್ತಾಗುತ್ತದೆ ಎಂಬ ಸತ್ಯ. ಆದರೂ ನಡೆಯುತ್ತಿರುವ ಸೋಲು ಗೆಲುವಿನ ಲೆಕ್ಕಾಚಾರ ಏನು? ಎಂಬುದನ್ನು ಇಲ್ಲಿ ಕ್ಷೇತ್ರವಾರು ವಿವರಿಸಲಾಗಿದೆ.
ವರುಣ
ವರುಣದಲ್ಲಿ ಕಳೆದ ಬಾರಿ ಬಾದಾಮಿಯಿಂದ ಗೆದ್ದಿದ್ದ ಸಿದ್ದರಾಮಯ್ಯನವರು ಮತ್ತು ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಗೆದ್ದಿದ್ದ ವಿ. ಸೋಮಣ್ಣ ಹೊಸ ಕ್ಷೇತ್ರದಲ್ಲಿ ಗೆಲ್ಲುವರೇ ? ಸಿದ್ದರಾಮಯ್ಯ ಗೆದ್ದು 9ನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡುತ್ತಾರಾ ? ಎಂಬ ಪ್ರಶ್ವೆಗಳ ಮೇಲೆ ಲೆಕ್ಕಾಚಾರ ನಡೆಯುತ್ತಿದೆ.
ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಲಿಂಗಾಯಿತರ ಶೇ.80 ರಷ್ಷು ಮತಗಳು ಮತ್ತು ಒಕ್ಕಲಿಗರ ಶೇ. 70 ರಷ್ಟು ಮತಗಳು ಮತ್ತು ನಾಯಕರ ಶೇ. 60 ರಷ್ಚು ಮತಗಳು ಬಿಜೆಪಿಗೆ ಹೋಗಿವೆ. ಕಾಂಗ್ರೆಸಿಗೆ ಕುರುಬ ಸಮಾಜದ ಶೇ.90, ಮುಸ್ಲಿಂನ ಶೇ.80, ಉಪ್ಪಾರ ಸಮಾಜದ ಶೇ. 60 ಮತ್ತು ಪರಿಶಿಷ್ಟ ಜಾತಿಗೆ ಶೇ. 80 ಮತಗಳು ಬಂದಿವೆ. ಆದರೆ ಪರಿಶಿಷ್ಟ ಜಾತಿಯ ಮತಗಳು ಬಿಜೆಪಿ ಚದುರಿ, ಹಾರಿ ಹೋಗಿದ್ದರೇ ಸಿದ್ದರಾಮಯ್ಯನವರ ಗೆಲುವು ಕಷ್ಟ. ಏನೇ ಇರಲಿ ಸಿದ್ದರಾಮಯ್ಯನವರು 5 ಸಾವಿರ ಲೀಡ್ನಲ್ಲಿಯಾದರೂ ಗೆಲ್ಲುತ್ತಾರೆ ಎಂಬ ವಿಶ್ಲೇಷಣೆ ನಡೆಯುತ್ತಿದೆ.
ಇಲ್ಲಿನ 2,34,533 ಮತಗಳ ಪೈಕಿ 1,98,740 ಮತಗಳು ಚಲಾವಣೆ ಆಗಿವೆ. ಅದರಲ್ಲಿ 1,00,174 ಪುರುಷರು, 98,564 ಮಹಿಳೆಯರು ಮತ ಹಾಕಿದ್ದು, ಶೇ.84.74 ರಷ್ಟು ಮತದಾನವಾಗಿದೆ.
ಟಿ. ನರಸೀಪುರ
ಈ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಮತ್ತು ಜೆಡಿಎಸ್ನ
ಅಶ್ವಿನ್ ನೇರ ಸ್ಫರ್ಧೆ ಎಂದು ಹೇಳುತ್ತಿದ್ದರೂ ಬಿಜೆಪಿಯ ಡಾ.ರೇವಣ್ಣ ಸ್ಥರ್ಧೆ ಒಡ್ಡಿದ್ದಾರೆ. ಬನ್ನೂರು ಹೋಬಳಿಯಲ್ಲಿ ಅಶ್ವಿನ್ ಹೆಚ್ಚು ಮತ ಗಳಿಸಬಹುದು. ಮಹಾದೇವಪ್ಪನವರು ಕೂಡ ಇತರ ಕಡೆ ಹೆಚ್ಚು ಮತಗಳನ್ನು ಪಡೆಯುವ ಸಾಧ್ಯತೆಗಳಿವೆ. ಒಂದು ವೇಳೆ ಡಾ. ರೇವಣ್ಣ ಲಿಂಗಾಯಿತರ ಮತಗಳನ್ನು ಹೆಚ್ಚು ಪಡೆದರೆ ಅಶ್ವಿನಿಗೆ ತೊಂದರೆ ಎನ್ನಲಾಗಿದೆ. ಒಂದು ವೇಳೆ ರೇವಣ್ಣನವರಿಗೆ ಮತ ಹಾಕಿದರೆ ಗೆಲುವ ಕಷ್ಟ ಎಂದು ಭಾವಿಸಿ ಅಶ್ವಿನಿಗೆ ಮತಹಾಕಿದ್ದರೆ ಮಹಾದೇವಪ್ಪನವರಿಗೆ ಕಷ್ಷ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಒಟ್ಟು 2,88,710 ಮತಗಳಲ್ಲಿ 1,83,659 ಮತಗಳು ಚಲಾವಣೆಯಾಗಿದೆ. ಅದರಲ್ಲಿ 90,461 ಪುರುಷರು, 93,188 ಮಹಿಳೆಯರು ಮತದಾನ ಮಾಡಿದ್ದಾರೆ. ಶೇ.63.61 ರಷ್ಟು ಮತದಾನವಾಗಿದೆ.
ಚಾಮರಾಜ ಕ್ಷೇತ್ರ
ಒಕ್ಕಲಿಗರ ಮೀಸಲು ಕ್ಷೇತ್ರವೆಂದು ಗುರುತಿಸಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಹರೀಶ್ ಗೌಡ ಮತ್ತು
ಬಿಜೆಪಿಯಿಂದ ನಾಗೇಂದ್ರ ಅವರ ನೇರ ಸ್ಫರ್ಧೆ ಇದೆ. ಜೆಡಿಎಸ್ನ ಎಚ್.ಕೆ. ರಮೇಶ್ ಹೋರಾಟ ನೀಡಿದ್ದಾರೆ.
ಬಿಜೆಪಿ ಸಂಪ್ರದಾಯಿಕ ಮತಗಳು ಬಂದರೂ ಒಕ್ಕಲಿಗರ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದರೆ ಜಯ.
ಒಂದು ವೇಳೆ ರಮೇಶ್ ಹೆಚ್ಚು ಪಡೆದರೆ ಸುಲಭವಾಗದು. ಹರೀಶ್ ಗೌಡರಿಗೆ ಮುಸ್ಲಿಂ ಮತಗಳನ್ನು ಹೆಚ್ಚು
ಪಡೆಯುವುದು ಖಚಿತ. ಇದೇ ವೇಳೆ ಈ ಕ್ಷೇತ್ರದಲ್ಲಿ ಕಡಿಮೆ ಸಂಖ್ಯೆಯಲ್ಲಿ ಇರುವ ದಲಿತರು, ಕುರುಬರ ಮತಗಳನ್ನುಪಡೆಯುವುದರ ಜೊತೆಗೆ ಅನುಕಂಪದ ಅಲೆ ತೇಲಿದರೆ ಗೆಲುವು. ಇಲ್ಲದಿದ್ದರೆ ಇಲ್ಲ . ಒಕ್ಕಲಿಗರ ಸಂಘದಲ್ಲಿ ಹಲವು ಬಾರಿ ನಿರ್ದೇಶಕರಾಗಿದ್ದ ರಮೇಶ್ ನಿರೀಕ್ಷೆಗಿಂತ ಹೆಚ್ಚಿನ ಮತಗಳನ್ನು ಪಡೆಯುವ ಸಾಧ್ಯತೆಗಳಿವೆ.
ಇಲ್ಲಿ2,46,243 ಮತಗಳ ಪೈಕಿ 1,50, 322 ಮತಗಳು ಚಲಾವಣೆಯಾಗಿದೆ. ಪುರುಷರು-74,368, ಮಹಿಳೆಯರು- 74,947 ಮಂದಿ ಮತದಾನವಾಗಿದೆ. ಶೇ.61.05 ಮತದಾನ.
ಚಾಮುಂಡೇಶ್ವರಿ
ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಹ್ಯಾಟ್ರಿಕ್ ಸಾಧಿಸಿ, 5ನೇ ಬಾರಿ ವಿಧಾನಸಭೆ ಪ್ರವೇಶಿಸುವುದು
ಖಚಿತವಾಗಿದೆ. ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ನ ಸಿದ್ಧೇಗೌಡ ನಿರೀಕ್ಷೆಯಂತೆ ಪೈಪೋಟಿ ನೀಡಿಲ್ಲ. ಬಿಜೆಪಿಯ ಕವೀಶ್ ಗೌಡ 2ನೇ ಸ್ಥಾನಕ್ಕೇರುವ ಸಾಧ್ಯತೆಗಳು ಕಾಣುತ್ತಿದೆ. ಸಿದ್ದರಾಮಯ್ಯನವರೇ ತಮ್ಮ ಅಭ್ಯರ್ಥಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
3,29,141 ಮತಗಳಲ್ಲಿ 2,44,938 ಮತಗಳು ಚಲಾವಣೆ ಆಗಿದ್ದು, 1,22,969 ಪುರುಷರು, 1,21,966 ಮಹಿಳೆಯರಿಂದ ಮತದಾನವಾಗಿದೆ. ಶೇ.74.42 ಮತದಾನ.
ನರಸಿಂಹರಾಜ
ಇದು ಮುಸ್ಲಿಂ ಬಾಹುಳ್ಯದ ಕ್ಷೇತ್ರ. ಕಾಂಗ್ರೆಸ್ನ ಭದ್ರಕೋಟೆ. ಜೊತೆಗೆ ಅಜೀಜ್ ಸೇಠ್ ಮತ್ತವರ ಪುತ್ರ ತನ್ವೀರ್
ಸೇಠ್ ಮತ್ತು ಮಾಜಿ ಮೇಯರ್ ಸಂದೇಶ ಸ್ವಾಮಿ ನಡುವೆ ಹೋರಾಡ ಇದ್ದಂತೆ ಕಂಡರೂ ಕಣದಲ್ಲಿರುವ ಎಸ್ಡಿಪಿಐ ಹಾಗೂ ಜೆಡಿಎಸ್ ಪಕ್ಷಗಳೇ ಕಾಂಗ್ರೆಸ್ನ ನೇರ ಎದುರಾಳಿಗಳು. ಎಸ್ಡಿಪಿಐ ಹೆಚ್ಚಿನ ಮತಗಳನ್ನು ಪಡೆದರೆ ತನ್ವೀರ್ ಹಾದಿ ಕಷ್ಟ. ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಖಾದರ್ ಒಕ್ಕಲಿಗರ ಮತ ಹೆಚ್ಚು ಮತ ಪಡೆದರೆ ಸಂದೇಶ್ ಸ್ವಾಮಿಗೆ ಕಷ್ಟವೆನ್ನಲಾಗಿದೆ.
2,88,710 ಮತಗಳಲ್ಲಿ 1,83, 659 ಮತಗಳು ಚಲಾವಣೆ ಆಗಿದೆ. 90,461 ಪುರುಷರು, 93,188 ಮಹಿಳೆಯರಿಂದ ಮತ ಚಲಾವಣೆಯಾಗಿದೆ. ಶೇ. 63.61 ಮತದಾನ ಆಗಿದೆ.
ಹುಣಸೂರು ಕ್ಷೇತ್ರ
ಇಲ್ಲಿ ಜೆಡಿಎಸ್ನ ಹರೀಶ್ ಗೌಡ, ಕಾಂಗ್ರೆಸ್ನ ಹಾಲಿ ಶಾಸಕ ಎಚ್ ಪಿ ಮಂಜುನಾಥ್ ನಡುವೆ ಜಿದ್ದಾಜಿದ್ದಿ ನಡೆದಿದೆ. ಬಿಜೆಪಿಯ ದೇವರಹಳ್ಳಿ ಸೋಮಶೇಖರ್ ಸ್ಪರ್ಧಿಸಿದ್ದಾರೆ. ಹರೀಶ್ ಗೌಡ ಒಕ್ಕಲಿಗರು, ಲಿಂಗಾಯಿತರ ಜೊತೆಗೆ ಇತರನ ಸಮೂದಾಯದ ಮತಗಳನ್ನು ಪಡೆದಿದ್ದರೆ ಗೆಲುವು. ಹಾಗೇಯೇ ಮಂಜುನಾಥ್ ಪರಿಶಿಷ್ಟಜಾತಿ , ಕುರುಬಸಮಾಜದ ಜೊತೆಗೆ ಇತರರ ಮತಗಳನ್ನು ಪಡೆದಿದ್ದರೆ ಹಾದಿ ಸುಗಮ.
2,42,753 ಮತಗಳ ಪೈಕಿ 1,99,945ಮತಗಳು ಚಲಾವಣೆ ಆಗಿವೆ. ಇದರಲ್ಲಿ ಪುರುಷರು-1,00,474 ಮತ್ತು ಮಹಿಳೆಯರು-99,464. ಶೇ.82.37ರಷ್ಟು ಮತದಾನ ಆಗಿದೆ.
ಎಚ್ ಡಿ ಕೋಟೆ ಕ್ಷೇತ್ರ
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ಕ್ಷೇತ್ರದಲ್ಲಿ ಬಿಜೆಪಿಯ ಕೆ ಎಂ ಕೃಷ್ಣಾ ನಾಯಕ್, ಕಾಂಗ್ರೆಸ್ನ ಅನಿಲ್
ಚಿಕ್ಕಮಾದು ಹಾಗೂ ಜೆಡಿಎಸ್ನ ಜಯಪ್ರಕಾಶ್ ಸೆಣಿಸಿದ್ದಾರೆ. ಕೃಷ್ಣನಾಯಕ ನಾಯಕ ಸಮಾಜದ ಮತಗಳನ್ನು ಪಡೆದರೆ ಕಾಂಗ್ರೆಸ್ಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಜಯಪ್ರಕಾಶ್ ಗೆಲುವು ಸುಲಭವಾಗಬಹುದು.
2,25,787 ಮತಗಳ ಪೈಕಿ 1,81,475 ಮತಗಳು ಚಲಾವಣೆ, ಪುರುಷರು-91,647 ಮತ್ತು ಮಹಿಳೆಯರಯ 89,822 ಮತದಾನ ಮಾಡಿದ್ದು, ಒಟ್ಟಾರೆ ಶೇ 80.37ರಷ್ಟು ಮತದಾನ ಆಗಿದೆ.
ಪಿರಿಯಾಪಟ್ಟಣ
ಮಗದೊಮ್ಮೆ ಆಯ್ಕೆ ಬಯಸಿರುವ ಜೆಡಿಎಸ್ನ ಕೆ.ಮಹದೇವ್ ಮತ್ತು ಕಾಂಗ್ರೆಸ್ನ ಕೆ.ವೆಂಕಟೇಶ್ ನಡುವೆ ಸ್ಪರ್ಧೆ ನಡೆದಿದೆ. ಬಿಜೆಪಿಯ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಕುರುಬ ಸಮಾಜದ ಅಧಿಕ ಮತಗಳನ್ನು ಪಡೆದಿದ್ದರೆ ವೆಂಕಟೇಶ್ ಗೆಲುವ ಕಷ್ಷ. ಇದಾಗದಿದ್ದರೆ ಮಹಾದೇವ್ ಹಾದಿ ಕಠಿಣ
1,95,458 ಮತಗಳಲ್ಲಿ 1,65,156 ಮತಗಳ ಚಲಾವಣೆಯಾಗಿದೆ. ಇದರಲ್ಲಿ ಪುರುಷರು- 83,725 ಮತ್ತು 82,725 ಮಹಿಳೆಯರು ಮತ ಚಲಾವಣೆ ಮೂಲಕ ಶೇ.84.50ರಷ್ಟು ಮತದಾನ ನಡೆದಿದೆ.
ಕೃಷ್ಣರಾಜ ಕ್ಷೇತ್ರ
ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಶ್ರೀವತ್ಸ ಮತ್ತು ಕಾಂಗ್ರೆಸ್ನ ಮಾಜಿ ಶಾಸಕ ಸೋಮಶೇಖರ್ ನಡುವೆ ಸ್ಪರ್ಧೆ. ಹೆಚ್ಚಿರುವ ಬ್ರಾಹ್ಮಣರು, ಲಿಂಗಾಯಿತರು ಮತ್ತು ದಲಿತ ಸಮುದಾಯದ ಮತಗಳನ್ನು ಪಡೆದರೆ ಗೆಲುವಿನ ಮಾಲೆ. ಇಲ್ಲದಿದ್ದರೆ ಸೋಮಶೇಖರ್ಗೆ ಗೆಲುವು.
2,50,357 ಮತಗಳ ಪೈಕಿ 1,49,098 ಮತಗಳ ಚಲಾವಣೆ. ಪುರುಷರು-73,346, ಮಹಿಳೆಯರು-75.752, ಶೇ.59.55ರಷ್ಟು ಮತದಾನ ನಡೆದಿದೆ.
ಕೃಷ್ಣರಾಜನಗರ ಕ್ಷೇತ್ರ
ಹ್ಯಾಟ್ಟಿಕ್ ಗೆಲುವ ಸಾಧಿಸಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಜೆಡಿಎಸ್ನಿಂದ ಮತ್ತು ಸಂಪ್ರಾಯಿಕ
ಎದುರಾಳಿ ರವಿಶಂಕರ್ ಕಾಂಗ್ರೆಸ್ನಿಂದ ಸ್ಪರ್ಧೆ ನಡೆದಿದೆ. ಒಕ್ಕಲಿಗರ ಮತಗಳ ಜೊತೆಗೆ ಕುರುಬರು, ಮುಸ್ಲಿಂ ಮತ್ತು ಲಿಂಗಾಯಿತರ ಮತಗಳನ್ನು ಹಿಂದಿನಂತೆ ಪಡೆದರೆ ಗೆಲುವು ಖಚಿತ. ಇಲ್ಲದಿದರೆ ರವಿಶಂಕರ್ಗೆ ಪ್ರಥಮ ಜಯ. ಬಿಜೆಪಿಯ ಹೊಸಹಳ್ಳಿ ವೆಂಕಟೇಶ್ ಒಕ್ಕಲಿಗರ ಮತಗಳಿಗೆ ಕೈ ಹಾಕಿದರೆ . ಮಹೇಶ್ ಗೆಲ್ಲಲು ತಿಣುಕಾಡಬೇಕಾಗುತ್ತದೆ.
2,17,786 ಮತಗಳ ಪೈಕಿ 1,85,529 ಮತಗಳ ಚಲಾವಣೆ. ಪುರುಷರು- 92,764, ಮಹಿಳೆಯರು-92,757. ಶೇ.85.19ರಷ್ಟು ಮತದಾನವಾಗಿದೆ.
ನಂಜನಗೂಡು ಮೀಸಲು ಕ್ಷೇತ್ರ
ಇಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಇತ್ತು. ಮಾಜಿ ಸಚಿವ ವಿ.
ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಮತ್ತು ಪರಿಶಿಷ್ಟ ಜಾತಿ, ನಾಯಕರು ಲಿಂಗಾಯಿತರ ಮತಗಳನ್ನು ಪಡೆದರೆ ಹರ್ಷವರ್ಧನ್ಗೆ ಜಯ. ಇಲ್ಲದಿದ್ದರೆ ಕಾಂಗ್ರೆಸ್ನಿಂದ ಸ್ಪರ್ಧಿಸಿರುವದಿವಂಗತ ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ತುವ ನಾರಾಯಣ ಗೆಲುವು. ಇವರಿಗೆ ಅನುಕಂಪನ ಅಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದು ಕೂಡ ಮುಖ್ಯವಾಗಿದೆ.
ಇಲ್ಲಿ2,20,393 ಮತಗಳಲ್ಲಿ 1,74,838 ಮತಗಳು ಚಲಾವಣೆ ಆಗಿದೆ. ಪುರುಷರು- 83,512 ಮತ್ತು ಮಹಿಳೆಯರು- 86,323 ಮತ ಚಲಾವಣೆ ಮಾಡುವ ಮೂಲಕ ಶೇ.79.33ರಷ್ಟು ಮತದಾನ ನಡೆದಿದೆ.