ಸುದ್ದಿಮೂಲ ವಾರ್ತೆ
ತುಮಕೂರು, ಸೆ.9 : ಗರ್ಭಗುಡಿ ಐವಿಎಫ್ ಕೇಂದ್ರದ ಸಹಕಾರದೊಂದಿಗೆ ಗರ್ಭಜ್ಞಾನ್ ಫೌಂಡೇಷನ್ ಹಾಗೂ ಸುವರ್ಣ ದೀಪ ಅಂಧರು ಹಾಗೂ ಬುದ್ಧಿಮಾಂದ್ಯ ಟ್ರಸ್ಟ್ ಸಹಯೋಗದಲ್ಲಿ ಬಂಜೆತನ ಮುಕ್ತ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ದೀಪಕ್ ಆರ್. ಸಾಗರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಮಕ್ಕಳಿಲ್ಲದ ದಂಪತಿಗಳು ಆಧುನಿಕ ಚಿಕಿತ್ಸೆ ಪಡೆಯುವ ಮೂಲಕ ಮಕ್ಕಳನ್ನು ಪಡೆಯುವ ಉದ್ದೇಶದಿಂದ ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಕಲಾವಿದರ ತಂಡದೊಂದಿಗೆ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ರಾಜ್ಯದ 31 ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಯಲಿದ್ದು, ಈಗಾಗಲೆ 28 ಜಿಲ್ಲೆಗಳಲ್ಲಿ ಅಭಿಯಾನ ಮುಕ್ತಯವಾಗಿದ್ದು, ಉಳಿದ ಜಿಲ್ಲೆಗಳಲ್ಲೂ ಇದನ್ನು ನಡೆಸಲಾಗುವುದು. ಬಂಜೆತನಕ್ಕೆ ಮಹಿಳೆಯರನ್ನು ಮಾತ್ರ ದೂಷಿಸುವುದು ನಮ್ಮ ಸಮಾಜದಲ್ಲಿ ಕಂಡು ಬರುತ್ತಿದ್ದು, ಮಹಿಳೆಯರಷ್ಟೆ ಪುರುಷರು ಇದಕ್ಕೆ ಕಾರಣ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗೆ ಪುರುಷರಲ್ಲೇ ಬಂಜೆತನ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿಎಫ್ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಚಿಕಿತ್ಸಾ ಸೌಲಭ್ಯಗಳಿಲ್ಲ ಎಂದ ಅವರು, ನಾವು ಅಭಿಯಾನ ನಡೆಸಿದ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಸಂತಾನರಹಿತ ದಂಪತಿಗಳು ಹೆಚ್ಚಾಗಿ ಇರುವುದು ಕಂಡು ಬಂದಿದೆ ಎಂದರು.
ಮಕ್ಕಳಿಲ್ಲದ ದಂಪತಿಗಳು ಅಂಚೆ ಕಾರ್ಡಿನಲ್ಲಿ ಮಾಹಿತಿ, ಮೊಬೈಲ್ ಸಂಖ್ಯೆ, ತಮ್ಮ ಪ್ರಶ್ನೆಗಳನ್ನು ಬರೆದು ಗರ್ಭಗುಡಿ ಐವಿಎಫ್ ಸೆಂಟರ್ ನಂ.41, 2ನೇ ಮಹಡಿ, ಶುಭಶ್ರೀ ಫ್ರೆಂಡ್, ಸೌತ್ ಎಂಡ್ ರಸ್ತೆ, ಭಾರತಿ ನರ್ಸಿಂಗ್ ಹೋಮ್ ಪಕ್ಕ, ಟಾಟಾ ಸಿಲ್ಕ್ ಫಾರಂ, ಬಸವನಗುಡಿ ಬೆಂಗಳೂರು ಇಲ್ಲಿಗೆ ಕಳುಹಿಸಬಹುದು ಎಂದರು.