ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.11; ರಾಷ್ಟ್ರೀಯ ಷೇರು ಸೂಚ್ಯಂಕ – ಎನ್.ಎಸ್.ಇ ವೇದಿಕೆಗೆ ಕರ್ನಾಟಕದ ಕನ್ನಡಿಗರ ಮಾಲೀಕತ್ವದ ಕ್ಯಾನರಿಸ್ ಆಟೋಮೇಷನ್ಸ್ ಲಿಮಿಟೆಡ್ ಸಂಸ್ಥೆ ಸೇರ್ಪಡೆಯಾಗಿದ್ದು, ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸಿದೆ.
ಸಂಸ್ಥೆಯ ಸಿ.ಎಫ್.ಒ ಮತ್ತು ಪೂರ್ಣಾವಧಿ ನಿರ್ದೇಶಕ ರಘು ಚಂದ್ರಶೇಖರಯ್ಯ, ಕ್ಯಾನರಿಸ್ ಆಟೋಮೇಷನ್ಸ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಮನ್ ಸುಬ್ಬಾರಾವ್, ಕ್ಯಾನರಿಸ್ ಆಟೋಮೇಷನ್ಸ್ ಲಿಮಿಟೆಡ್ ನ ಸಿಇಒ ಶೇಷಾದ್ರಿ ಶ್ರೀನಿವಾಸ್, ಎನ್.ಎಸ್.ಇ ಉಪಾಧ್ಯಕ್ಷ ಗೌರಿ ಶಂಕರ್ ಮತ್ತು ಕ್ಯಾನರಿಸ್ ಆಟೋಮೇಷನ್ಸ್ ಲಿಮಿಟೆಡ್ ನ ಸ್ವಾಯತ್ತ ನಿರ್ದೇಶಕ ಮುರಳಿಕೃಷ್ಣ ಅವರ ಸಮುಖದಲ್ಲಿಂದು ವಿಧ್ಯುಕ್ತವಾಗಿ ಕಂಪೆನಿ ಷೇರು ವಹಿವಾಟಿಗೆ ಸೇರ್ಪಡೆಯಾಯಿತು.
ಕ್ಯಾನರಿಸ್ ಆಟೋಮೇಷನ್ಸ್ ಲಿಮಿಟೆಡ್ ಎನ್ಎಸ್ಇ ಎಸ್ಎಂಇಯಲ್ಲಿ ಸಕಾರಾತ್ಮಕ ಪಾದಾರ್ಪಣೆ ಮಾಡಿದ ನಂತರ ಷೇರು ಬೆಲೆ ಇಂದು ಪ್ರತಿ ಷೇರಿಗೆ ₹ 43.45 ಎಂದು ಪಟ್ಟಿ ಮಾಡಲಾಗಿದೆ, ಇದು ₹ 31 ರ ವಿತರಣಾ ಬೆಲೆಗಿಂತ 40.2% ಹೆಚ್ಚಾಗಿದೆ. ಕ್ಯಾನರಿಸ್ ಆಟೋಮೇಷನ್ಸ್ ಐಪಿಒ ಸೆಪ್ಟೆಂಬರ್ 27 ರ ಬುಧವಾರ ಚಂದಾದಾರಿಗಾಗಿ ಮುಕ್ತವಾಗಿ ತೆರೆಯಲ್ಪಟ್ಟಿತು ಮತ್ತು ಅಕ್ಟೋಬರ್ 3 ರ ಮಂಗಳವಾರ ಈ ಪ್ರಕ್ರಿಯೆ ಕೊನೆಗೊಂಡಿತು. ಕಂಪನಿಯು ಪ್ರತಿ ಷೇರಿಗೆ ₹ 29 ರಿಂದ ₹ 31 ರ ವ್ಯಾಪ್ತಿಯಲ್ಲಿ ಬೆಲೆ ಬ್ಯಾಂಡ್ ಅನ್ನು ನಿಗದಿಪಡಿಸಿತು.
ಕ್ಯಾನರಿಸ್ ಆಟೋಮೇಷನ್ಸ್ ಲಿಮಿಟೆಡ್ ನ ಸಿಇಒ ಶೇಷಾದ್ರಿ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಮಾತನಾಡಿ, “ಕ್ಯಾನರಿಸ್ ಆಟೋಮೇಷನ್ ಸೊಲ್ಯೂಷನ್ಸ್ ನೊಂದಿಗಿನ ನಮ್ಮ ಪಯಣ ಸವಾಲುಗಳ ಹಾದಿಯಿಂದ ಕೂಡಿದೆ. ಭವಿಷ್ಯದ ಅಡೆತಡೆಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಆದರೂ ಸಮಸ್ಯೆಗಳನ್ನು ನಿವಾರಿಸಿಕೊಂಡು ಪರಿಹಾರಗಳ ವ್ಯವಹಾರದ ಕಡೆಗೆ ನಮ್ಮನ್ನು ಮರುಹೊಂದಿಸಿಕೊಂಡಿದ್ದೇವೆ. ಎಲ್ಲಾ ಅಡೆತಡೆಗಳನ್ನು ದಾಟಿ ಮುನ್ನಡೆಯುತ್ತಿದ್ದೇವೆ. ಬರುವ ೨೦೨೫ರ ಮಾರ್ಚ್ ವೇಳೆಗೆ ಷೇರು ಮಾರುಕಟ್ಟೆ ಪ್ರವೇಶಿಸಲು ಕಳೆದ 2022 ರಲ್ಲಿ ಗುರಿ ನಿಗದಿಪಡಿಸಲಾಗಿತ್ತು. ಆದರೂ ಎರಡು ವರ್ಷಗಳ ಮುಂಚೆ ಈ ಸಾಧನೆ ಮಾಡಿದ್ದು, ಇದಕ್ಕೆ ಸಂಸ್ಥೆಯ ಎಲ್ಲರ ಸಹಕಾರ ಕಾರಣವಾಗಿದೆ. ಎಂದರು.
ತಂತ್ರಜ್ಞಾನದಲ್ಲಿ ವ್ಯಾಪಕ ಬದಲಾವಣೆಗಳಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ಮುಂದಿನ ಹಾದಿಯಲ್ಲಿ ಸಾಗಬೇಕಾಗಿದೆ. ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ, ನಮಗೆ ಈ ಯಶಸ್ಸು ತಂದುಕೊಟ್ಟ ಪ್ರಮುಖ ಮೌಲ್ಯಗಳನ್ನು ನಾವು ಮರೆಯಬಾರದು. ಸಮಗ್ರತೆ, ನಾವೀನ್ಯತೆ, ಸುಸ್ಥಿರತೆ ಮತ್ತು ಒಳಗೊಳ್ಳುವಿಕೆಯ ತತ್ವಗಳು ಕಳೆದ ಮೂರು ದಶಕಗಳಿಂದ ನಮ್ಮೊಂದಿಗಿದ್ದು, ಇವುಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಬದ್ಧತೆ, ಸಮರ್ಪಣೆ ಮತ್ತು ಪ್ರಮುಖ ಮೌಲ್ಯಗಳನ್ನು ಅನುಸರಿಸಿದ ಕಾರಣದಿಂದ ಕ್ಯಾನರಿಸ್ ಆಟೋಮೇಷನ್ ಲಿಮಿಟೆಡ್ ಸಂಸ್ಥೆಗೆ ಇಂದು ಮಹತ್ವದ ಮತ್ತು ಐತಿಹಾಸಿಕ ದಿನವಾಗಿದೆ ಎಂದರು.
ಎನ್.ಎಸ್.ಇ ಉಪಾಧ್ಯಕ್ಷ ಗೌರಿ ಶಂಕರ್ ಮಾತನಾಡಿ, ಕ್ಯಾನರಿಸ್ ಆಟೋಮೇಷನ್ಸ್ ಲಿಮಿಟೆಡ್ ಎನ್.ಎಸ್.ಇ ಗೆ ಸೇರ್ಪಡೆಯಾದ ೩೭೯ನೇ ಕಂಪೆನಿಯಾಗಿದೆ. 47.03 ಕೋಟಿ ರೂ ಬಂಡವಾಳವನ್ನು ಸಂಗ್ರಹಿಸಿ 9.84 ಪಟ್ಟು ಹೆಚ್ಚು ಬಂಡವಾಳ ಸಂಗ್ರಹಿಸಿದೆ. ಇದು ಕಂಪೆನಿಯಲ್ಲಿ ಹೂಡಿಕೆದಾರರು ಇಟ್ಟಿರುವ ನಂಬಿಕೆ, ಉತ್ತರದಾಯಿತ್ವಕ್ಕೆ ಸಾಕ್ಷಿಯಾಗಿದೆ. ಈ ಮಹತ್ವದ ವೇದಿಕೆಗೆ ಸಂಸ್ಥೆಯನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ಎನ್.ಎಸ್.ಇ ಜಾಗತಿಕವಾಗಿ ತನ್ನದೇ ಆದ ಘನತೆ ಹೊಂದಿದ್ದು, ಇದು ವಿಶ್ವದ ನಾಲ್ಕನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇದೇ ರೀತಿಯಲ್ಲಿ ಕ್ಯಾನರಿಸ್ ಆಟೋಮೇಷನ್ಸ್ ಲಿಮಿಟೆಡ್ ಕೂಡ ಮಹತ್ವದ ಸಾಧನೆಯತ್ತ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.