ಸುದ್ದಿಮೂಲ ವಾರ್ತೆ
ಮೈಸೂರು, ಸೆ.27:ಕಾವೇರಿ ನೀರು ನಿರ್ವಹಣಾ ಸಮಿತಿ ತಮಿಳುನಾಡಿಗೆ 18 ದಿನಗಳವರೆಗೆ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಚಾಮರಾಜನಗರ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಇಲ್ಲದ ಕಾರಣ ನೀರು ಇಲ್ಲ ಈಗಾಗಲೇ ಕಾನೂನು ತಜ್ಞರ ಸಲಹೆ ಪಡೆಯಲಾಗಿದೆ. ಹಂಚಿಕೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ಮಾಡುತ್ತಿವೆ ಎಂದು ಕಿಡಿಕಾರಿದ ಸಿಎಂ, ಮಾದಪ್ಪನಲ್ಲಿ ಪ್ರಾರ್ಥಿಸಿರುವೆ, ತೀವ್ರ ಬರಗಾಲದ ಹಿನ್ನೆಲೆ ಮಳೆಗಾಗಿ ಮೊರೆ ಹೋಗಿರುವೆ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿರುವೆ. ಮಾದಪ್ಪನ ಮೇಲೆ ನನಗೆ ನಂಬಿಕೆ ಇದೆ. ಉತ್ತಮ ಮಳೆ ಬೀಳುವ ನೀರೀಕ್ಷೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೆಳ್ಳಿರಥದ ಸೇವೆ
ಇದಕ್ಕೂ ಮೊದಲು ಸಚಿವರಾದ ಕೆ.ವೆಂಕಟೇಶ್, ಎಚ್.ಸಿ.ಮಹಾದೇವಪ್ಪ ಜೊತೆಗೂಡಿ ಬಂದ ಸಿದ್ದರಾಮಯ್ಯ ಮಲೆ ಮಹದೇಶ್ವರ ಸ್ವಾಮಿಗೆ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ, ಬೆಳ್ಳಿ ದಂಡ ಹಿಡಿದು ಬೆಳ್ಳಿ ರಥ ಸೇವೆ ನಡೆಸಿದರು.