ಸುದ್ದಿಮೂಲ ವಾರ್ತೆ
ಮೈಸೂರು, ಸೆ.4 : ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ದಿನೇ ದಿನೇ ತೀವ್ರತೆ ಪಡೆದುಕೊಳ್ಳುತ್ತಿದೆ.
ರೈತ ಸಂಘ ಮತ್ತಿತರ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಸೋಮವಾರ ಕೆಆರ್ಎಸ್ ಡ್ಯಾಂಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ಬಂಧಿಸಿದರು. ಇದೇ ವೇಳೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಕಚೇರಿ ಬಳಿ ಪ್ರತಿಭಟನೆ ನಡೆದರೆ, ಮಂಡ್ಯದಲ್ಲಿ ಹಣೆಗೆ ನಾಮ ಹಾಕಿಕೊಂಡು ಜಾಗಟೆ ಬಾರಿಸುತ್ತಾ ಆಕ್ರೋಶ ವ್ಯಕ್ತಪಡಿಸಿದರು., ಮತ್ತೊಂದು ಕಡೆ ನದಿಗಿಳಿದು ಪ್ರತಿಭಟನೆ ನಡೆಸಲಾಯಿತು. ಎಲ್ಲಾ ಬಗೆಯ ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯುತ್ತಿವೆ.
ಕಾವೇರಿ ಮಾತೆಗೆ ಜಲಾಭಿಷೇಕ
ತಮಿಳುನಾಡಿಗೆ ನಿರಂತರ ನೀರು ಹರಿಯುವುದನ್ನು ನಿಲ್ಲಿಸುವ ಬಗ್ಗೆ ಸರ್ಕಾರದ ಮೇಲಿನ ನಂಬಿಕೆ ಹುಸಿಯಾದ ಹಿನ್ನಲೆಯಲ್ಲಿ ಮಂಡ್ಯದ ಡಿಸಿ ಕಚೇರಿ ಮುಂದಿರುವ ಕಾವೇರಿ ಮಾತೆಯ ಪ್ರತಿಮೆಗೆ ಕಸ್ತೂರಿ ಕನ್ನಡ ಜನಪರ ವೇದಿಕೆ ಕಾರ್ಯಕರ್ತರು, ನೀರಿನ ಮೂಲಕ ಜಲಾಭಿಷೇಕ ಮಾಡಿ, ಹಾಲು, ಅರಿಶಿನ- ಕುಂಕುಮ ತುಪ್ಪ, ಸಕ್ಕರೆ, ಜೇನುತುಪ್ಪ ಮತ್ತು ಎಳನೀರು ಅಭಿಷೇಕ ಮಾಡಿ ಹಸಿರು ಸೀರೆ ಹೊದಿಸಿ ಪುಷ್ಪಾರ್ಚನೆ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ತೀರ್ಪು ಕರ್ನಾಟಕದ ಪರ ಬರಲಿ ಎಂದು ಪ್ರಾರ್ಥಿಸಿದರು. ವೇದಿಕೆ ರಾಜ್ಯಾಧ್ಯಕ್ಷ ರಮೇಶ್ಗೌಡ, ರಾಜ್ಯ ಉಪಾಧ್ಯಕ್ಷ ರಂಜಿತ್ಗೌಡ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಜಿಲ್ಲಾಧ್ಯಕ್ಷ ಉಮಾ ಶಂಕರ್, ಯೋಗೇಶ್ ಗೌಡ, ಅಜಯ್, ಗೌಡಗೆರೆ ಧನಂಜಯ, ಸಿ.ನಿರ್ಮಲ, ಮಂಗಳಮ್ಮ, ರಾಜಮ್ಮ ಚಿಕ್ಕೇನಹಳ್ಳಿ ಸಿದ್ದಪ್ಪಾಜಿ, ನಂದನ್ಗೌಡ ನೇತೃತ್ವ ವಹಿಸಿದ್ದರು.
ಮುತ್ತಿಗೆ ಯತ್ನ- ರೈತರ ಬಂಧನ
ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಕನ್ನಂಬಾಡಿ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕರ್ನಾಟಕ ರಾಜ್ಯ ರೈತ ಸಂಘದ ರೈತ ಬಣದ ರೈತ ಮುಖಂಡರನ್ನು ಪೋಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು.
ರಾಜ್ಯಾದ್ಯಕ್ಷ ಇಂಗಲಕುಪ್ಪೆ ಇ.ಎನ್.ಕೃಷ್ಣೇಗೌಡ, ರಾಜ್ಯ ವರಿಷ್ಠ ಹೆಮ್ಮಿಗೆ ಚಂದ್ರಶೇಖರ್ ಹಾಗೂ ಜಿಲ್ಲಾಧ್ಯಕ್ಷ ಕಾಳೇನಹಳ್ಳಿ ರಮೇಶ್ ನೇತೃತ್ವದಲ್ಲಿ ಇನ್ನೂರಕ್ಕೂ ಹೆಚ್ಚು ರೈತರು ಹಾಗೂ ಮಹಿಳೆಯರು ಖಾಲಿ ಕೊಡ ಹಿಡಿದು ಕನ್ನಂಬಾಡಿ ಅಣೆಕಟ್ಟೆ ಎದುರು ಪ್ರತಿಭಟನೆ ನಡೆಸಿದರು.
ಹಣೆಗೆ 3 ನಾಮ, ನೀರು ಗೋವಿಂದ- ಗೋವಿಂದ
ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ಹಣೆಗೆ ನಾಮ ಹಾಕಿಕೊಂಡು, ಜಾಗಟೆ ಬಾರಿಸುತ್ತ ಶ್ರೀರಂಗಪಟ್ಟಣದಲ್ಲಿ ರೈತಸಂಘ ವಿನೂತನವಾಗಿ ಪ್ರತಿಭಟನೆ ನಡೆಸಿದೆ. ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಜಾಗಟೆ ಬಾರಿಸುತ್ತ, ಗೋವಿಂದ ಗೋವಿಂದ ನೀರು ಗೋವಿಂದ ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ಸರ್ಕಾರ ನಮಗೆ ನಾಮ ಹಾಕಿದೆ. ಕುಡಿಯಲು ನೀರಿಲ್ಲದಂತೆ ಮಾಡಿದೆ ಎಂದು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು ಸಂಸದರ ಕಚೇರಿಗೆ ಮುತ್ತಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಮೈಸೂರು ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಇರುವ ಬಿಜೆಪಿ ಸಂಸದ ಪ್ರತಾಪ್ಸಿಂಹ ಅವರ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಒತ್ತಾಯ ಪತ್ರ ಸಲ್ಲಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ರಾಜ್ಯದಲ್ಲಿ ಬರಗಾಲ ಸೃಷ್ಟಿಯಾಗಿದ್ದರೂ, ಕಾವೇರಿಕೊಳ್ಳದ ಜಲಾಶಯಗಳ ನೀರು ಖಾಲಿಯಾಗುತ್ತಿದೆ. ಮಹದಾಯಿ ನದಿ ನೀರಿನ ವಿವಾದ ಕುರಿತು ಯಾವುದೇ ಗಂಭೀರ ಚಿಂತನೆ ನಡೆಯುತ್ತಿಲ್ಲ. ಈ ಬಗ್ಗೆ ಯಾವುದೇ ಮಾತನಾಡದೆ ಮೂಕರಂತೆ ಇದ್ದಾರೆ ಎಂದು ಖಂಡಿಸಿದರು.
ಇದೇ ವೇಳೆ ರಾಜ್ಯದ ಚಾಮರಾಜನಗರ, ಧಾರವಾಡ , ಬೆಳಗಾವಿ, ಬೆಂಗಳೂರು ದಕ್ಷಿಣ, ಹಾವೇರಿ , ಗುಲ್ಬರ್ಗ, ಬಿಜಾಪುರ ಮತ್ತಿತರ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಪದಾಧಿಕಾರಿಗಳಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಬಸವರಾಜ್ ಪಾಟೀಲ್ ಗುರುಸಿದ್ದಪ್ಪ, ರಮೇಶ್ ಹುಗಾರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜೈಕರ್ನಾಟಕ ಜನಪರ ವೇದಿಕೆ ಕುಮಾರಸ್ವಾಮಿ, ಉಳುವಪ್ಪ ಬಳಗೇರ, ಪರಶುರಾಮ್, ಕಮಲಮ್ಮ ಪ್ರತಿಭಟನೆಯಲ್ಲಿ ಇದ್ದರು.