ಸುದ್ದಿಮೂಲ ವಾರ್ತೆ,
ಮೈಸೂರು, ಆ.31:ಮಳೆ ಇಲ್ಲದೇ ಜಲಾಶಯಗಳು ಖಾಲಿ ಆಗುತ್ತಿರುವುದನ್ನು ಲೆಕ್ಕಿಸದೇ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುತ್ತಿರುವುದು ದುರಂತ ಎಂದು ಖಂಡಿಸಿ ಹಳೇ ಮೈಸೂರು ಭಾಗದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ.
ಇದೇ ವೇಳೆ ಆರಂಭದಿಂದಲೇ ತಮಿಳುನಾಡಿನ ಜಜಪ್ರತಿನಿಧಿಗಳಂತೆ ದೆಹಲಿಯಲ್ಲಿ ಮೊಕ್ಕಾಂ ಹೂಡಿ ಕಾನೂನು ಹೋರಾಟ ಮಾಡದೇ ಈಗ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿ ವಕೀಲರನ್ನು ಭೇಟಿಯಾಗಿದ್ದಾರೆ. ಇದು ಕಣ್ಣೋರೆಸುವ ತಂತ್ರ ಎಂದು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ರೈತರು ಬೀದಿಗಿಳಿದಿದ್ದಾರೆ. ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ನ್ಯಾಯದ ತಕ್ಕಡಿ ಹಿಡಿದುಕೊಂಡು, ಅರೆಬೆತ್ತಲೆ ಪ್ರತಿಭಟನೆ ಮತ್ತು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
100 ಅಡಿಗೆ ಇಳಿದ ಕೆಆರ್ಎಸ್
ಈ ನಡುವೆ ಕೆಆರ್ಎಸ್ ನೀರಿನ ಮಟ್ಟ 100 ಅಡಿಗಳಿಗೆ ಕುಸಿದರೆ, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳ ನೀರಿನ ಮಟ್ಟವೂ ಕೆಳಮಟ್ಟಕ್ಕೆ ದಿನೇ ದಿನೇ ಇಳಿಯುತ್ತಿದೆ. ಹಾಸನದಲ್ಲಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಹೋರಾತ್ರಿ ಧರಣಿ
ಸರ್ಕಾರವು ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸದೆ, ರಾಜ್ಯದ ರೈತರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಆಹೋರಾತ್ರಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಮಂಡ್ಯ ಜಿಲ್ಲೆ ಕೆಆರ್ಎಸ್ ಆಣೆಕಟ್ಟೆಯ ಬಳಿ ಬುಧವಾರ ಮಧ್ಯಾಹ್ನದಿಂದ ಆಹೋರಾತ್ರಿ ಸತ್ಯಾಗ್ರಹ ಆರಂಭಿಸಲಾಗಿದೆ. ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮತ್ತು ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸತ್ಯಾಗ್ರಹಿಗರು ಮೈಸೂರು ನೀರಾವರಿ ದಕ್ಷಿಣ ವಲಯ ಮುಖ್ಯ ಅಭಿಯಂತರರು ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮತ್ತಿತರರು ಭಾಗವಹಿಸಿದ್ದರು.
ಕಣ್ಣಿಗೆ ಕಪ್ಪು ಬಟ್ಟೆ
ಮಂಡ್ಯ ಯೂತ್ ಗ್ರೂಪ್ ಸಂಘಟನೆ ಕಾವೇರಿ ನೀರು ಹಂಚಿಕೆ ಖಂಡಿಸಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಂಡ್ಯ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಕಾವೇರಿಗಾಗಿ ನಡಿಗೆ ಎಂದು ಪ್ರತಿಭಟನೆ ನಡೆಸಿದ್ದಾರೆ.
ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ಆಗಮಿಸಿ ಕೆಲಕಾಲ ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ದರ್ಶನ್, ನವೀನ್, ಪ್ರವೀಣ್, ಸೈಯದ್ ಇಮ್ರಾನ್, ಆರ್ಷದ್, ಖಾಸಿಂ, ವಿನಯ್ಗೌಡ, ಮಂಜು, ವಿನಯ್, ಪ್ರತಾಪ್, ದೀಪು ಇತರರಿದ್ದರು.