ಸುದ್ದಿಮೂಲವಾರ್ತೆ ಮಾನ್ವಿ ಏ-8
ಪೋತ್ನಾಳ್ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಅಲೆಮಾರಿ ಸಮುದಾಯಗಳ ಜೊತೆ ತ್ಯಾಗ, ದಾನ, ರಕ್ಷಣೆಯ ಸಂಕೇತ ಯೇಸು ಕ್ರಿಸ್ತನ ಪುನರುತ್ಥಾನ ( ಈಸ್ಟರ್) ಹಬ್ಬವನ್ನು ಶನಿವಾರ ಆಚರಿಸಿದರು.
ತಮ್ಮ ಗ್ರಾಮಗಳನ್ನು ಬಿಟ್ಟು ಹೊಟ್ಟೆ ಪಾಡಿಗಾಗಿ ಬದುಕು ಸಾಗಿಸಲಿಕ್ಕೆ ಬೇರೆ ಗ್ರಾಮಗಳಿಗೆ ವಲಸೆ ಹೋಗುವ ಸಮುದಾಯಗಳ ಜೊತೆ ಟ್ರಸ್ಟಿನ ನಿರ್ದೇಶಕ ಫಾ.ಡಾ.ಸತೀಶ ಫರ್ನಾಂಡೀಸ್ ಅವರು ಕೆಲವು ಸಮಯ ಕಳೆದು ಅವರಿಗೆ ಆರೋಗ್ಯ, ಮಕ್ಕಳ ರಕ್ಷಣೆ ಕುರಿತಾಗಿ ತಿಳಿ ಹೇಳಿದರು. ಕ್ರಿಸ್ತನು ಈ ಭುವಿಗೆ ಬಂದು ನರಮಾನವನಾಗಿ ಜೀವಿಸಿ, ಮನುಕುಲದ ಪಾಪಕ್ಕಾಗಿ ಪ್ರಾಣ ತ್ಯಾಗ ಮಾಡಿ, ಮನುಕುಲದ ಪಾಪವನ್ನು ತೊಳೆದು, ಮೂರನೇ ದಿನ ಜೀವಂತರಾಗಿ ಎದ್ದು ಬಂದರು. ಈ ಹಬ್ಬವನ್ನು ತ್ಯಾಗದ ಮತ್ತು ರಕ್ಷಣೆಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮನುಷ್ಯನು ಬೇರೆಯವರಲ್ಲಿ ಹಂಚಿಕೊಳ್ಳುವುದನ್ನು ಕಲಿಯಬೇಕು. ಕೊಡುವುದರಲ್ಲಿ ಇರುವ ಸಂತೋಷ ಮತ್ತು ಶಾಂತಿ ಎಲ್ಲಿಯೂ ಸಿಗುವುದಿಲ್ಲ ಎಂದರು.
ಸದಾ ಬಡವರ, ಮಕ್ಕಳ, ಶೋಷಿತರ ಬಗ್ಗೆ ಕಾಳಜಿ ಹೊಂದಿರುವ ಸಂಸ್ಥೆಯ ನಿರ್ದೇಶಕರು ಅವರ ಜೊತೆ ಸಹ ಭೋಜನ ಸವಿದು, ಹೊಸ ಬಟ್ಟೆ ಮತ್ತು ಮಕ್ಕಳಿಗೆ ಆಟದ ಸಾಮಾಗ್ರಿಗಳನ್ನು ನೀಡಿ ಅವರ ಸಂತೋಷದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಜಯಶೀಲ ದೋತರಬಂಡಿ, ಚಾರ್ಲಿ ಉದ್ಬಾಳ್, ಆರೋಗ್ಯಪ್ಪ ದುಮತಿ, ಜೆಸ್ಸಿಂತಮ್ಮ ಮುದ್ದಂಗುಡ್ಡಿ, ಶಿಲ್ಪಾ ವಲ್ಕಂದಿನ್ನಿ, ಕು. ಮಮತಾ, ಕು. ಮುತ್ತುರಾಜ ಮತ್ತು ಮಕ್ಕಳು ಉಪಸ್ಥಿತರಿದ್ದರು.