ಸುದ್ದಿಮೂಲ ವಾರ್ತೆ
ಆನೇಕಲ್,ನ.2 : ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆನೇಕಲ್ ತಾಲೂಕು ವತಿಯಿಂದ ಗುರುವಾ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಇಲ್ಲಿನ ಎ.ಎಸ್. ಬಿ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವವನ್ನು ತಹಸಿಲ್ದಾರ್ ಮತ್ತು ಶಾಸಕ ಶಿವಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿ ಶಿವಣ್ಣ, ತಾಲ್ಲೂಕಿನ ಕಸಬಾ ಹೋಬಳಿಯ ಸರ್ಕಾರಿ ಜಾಗದಲ್ಲಿ ಕನ್ನಡ ಭವನ ನಿರ್ಮಿಸಿ ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಿ ವೇದಿಕೆ ಕಲ್ಪಿಸಲಾಗುವುದು. ಗಡಿ ಭಾಗಗಳಲ್ಲಿ ಗಡಿಗೋಪುರಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಶಿವಪ್ಪ.ಎಚ್.ಲಮಾಣಿ ಮಾತನಾಡಿ, ಕರ್ನಾಟಕವು ಸಂಗೀತ, ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದೆ. ಅವರ ಆದರ್ಶಗಳು ಉಳಿಯುವಂತೆ ಮಾಡಲು ನಾವೆಲ್ಲರೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು.
ವೈಭವದ ಭುವನೇಶ್ವರಿ ದೇವಿ ಮೆರವಣಿಗೆ
ಧ್ವಜಾರೋಹಣ ನೆರವೇರಿಸಿದ ನಂತರ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.
ಭಾರತಿ ಶಾಲೆ ,ಹಾಗು ವಿಧಾತ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಡೊಳ್ಳುಕುಣಿತ, ಸೋಮನ ಕುಣಿತದ ವೇಷದಲ್ಲಿ ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪ್ರದರ್ಶನ ನೀಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ತಾಲ್ಲೂಕಿನ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡೆ, ಸಾಹಿತ್ಯ, ಜಾನಪದ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ವಿಶೇಷ ತಹಶೀಲ್ದಾರ್ ಕರಿಯನಾಯ್ಕ, ಸಿಡಿಪಿಓ ಕವಿತಾ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ.ಜಯಲಕ್ಷ್ಮೀ, ಎಇಇ ಚಿನ್ನಪ್ಪ, ಭೂದಾಖಲೆಗಳ ಇಲಾಖೆಯ ಎಡಿಎಲ್ಆರ್ ಪ್ರಕಾಶ್, ಪುರಸಭಾ ಮುಖ್ಯಾಧಿಕಾರಿ ಹಾಗು ಪುರಸಭಾ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆದೂರು ಪ್ರಕಾಶ್, ನಾಗವೇಣಿ ಇದ್ದರು.