ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.23: ಮಹತ್ವದ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿರುವುದರಿಂದ ಜು.1ರಿಂದ ಆರಂಭವಾಗಬೇಕಿದ್ದ ಯೋಜನೆ ಮುಂದೆ ಹೋಗುವುದು ನಿಚ್ಚಳವಾವಾಗಿದೆ. ಮತ್ತೊಂದೆಡೆ ಸರ್ವರ್ ಸಮಸ್ಯೆಯಿಂದಾಗಿ ಗೃಹಲಕ್ಷ್ಮೀ ಯೋಜನೆ ಸಹ ವಿಳಂಬವಾಗುವ ಲಕ್ಷಣಗಳು ಕಾಣಿಸುತ್ತಿವೆ.
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಪ್ರತಿ ತಿಂಗಳಿಗೆ ತಲಾ 10ಕೆ.ಜಿ. ಅಕ್ಕಿ ಕೊಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಇದಕ್ಕೆ ಅಕ್ಕಿ ಹೊಂದಿಸುವ ಸಂಬಂಧ ಸ್ವತಃ ಮುಖ್ಯಮಂತ್ರಿ ಸಿದ್ದರಾಯ್ಯ ಮತ್ತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ದೆಹಲಿಯಲ್ಲಿ ಬೀಡು ಬಿಟ್ಟು ಎರಡು ಮೂರು ದಿನಗಳಿಂದ ಪ್ರಯತ್ನಿಸಿದರೂ ಅಗತ್ಯ ಅಕ್ಕಿ ಲಭ್ಯವಾಗಿಲ್ಲ.
ಈ ಮಧ್ಯೆ ಕೇಂದ್ರ ಆಹಾರ ಸಚಿವ ಪಿಯುಷ್ ಗೋಯಲ್ ಅವರನ್ನು ಭೇಟಿ ಮಾಡುವ ಉದ್ದೇಶದಿಂದಲೇ ಎರಡು ದಿನ ಕಾದು ಮೂರನೇ ದಿನ ಭೇಟಿ ಯಾದ ಕೆ.ಎಚ್. ಮುನಿಯಪ್ಪ ಅವರು ಅಕ್ಕಿ ನೀಡುವ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ಇದಕ್ಕೆ ಪಿಯುಷ್ ಗೋಯಲ್ ಸಮ್ಮತಿ ನೀಡಿಲ್ಲ. ಮತ್ತೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಕಿ ವಿತರಣೆಯಲ್ಲಿ ರಾಜಕೀಯ ಮಾಡಬೇಡಿ ಎಂಬ ಮನವಿಗೆ, ಅಮಿತ್ ಶಾ ಸ್ಪಂದಿಸಿ ಪಿಯುಶ್ ಗೋಯಲ್ ಜೊತೆ ಚರ್ಚಿಸುವುದಾಗಿ ತಿಳಿಸಿದ್ದರು. ಆದರೆ, ಇದು ಫಲ ನೀಡದೆ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ಅಸಮ್ಮತಿ ನೀಡಿದೆ.
ಈ ಸಂಬಂದ ನವದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ, ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಒದಗಿಸಲು 1.35 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ನೀಡಲು ನಾವು ವಿನಂತಿಸಿದ್ದೇವೆ. ಆದರೆ ಕೇಂದ್ರ ಆಹಾರ ಸಚಿವರು ಅಕ್ಕಿಯನ್ನು ನೀಡಲು ನಿರಾಕರಿಸಿದ್ದಾರೆ ಎಂದು ತಿಳಿಸಿದರು.
ಇಂದು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ರವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರದ ಅನ್ಯಭಾಗ್ಯ ಯೋಜನೆಗೆ ಅಕ್ಕಿಯನ್ನು ನೀಡಲು ಮನವಿ ಮಾಡಿದೆವು. ಆದರೆ, ಕೇಂದ್ರ ಸಚಿವರು 300 ಲಕ್ಷ ಟನ್ ಇತರೆ ವಿವಿಧ ಯೋಜನೆಗಳಿಗೆ ಮೀಸಲಿಡಲಾಗಿದೆ. ಆದ್ದರಿಂದ ರಾಜ್ಯಕ್ಕೆ ಅಕ್ಕಿ ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು ಎಂದು ಮುನಿಯಪ್ಪ ವಿವರಿಸಿದರು.
ಆದರೆ, ರಾಜ್ಯ ಸರ್ಕಾರವು ಅನ್ನಭಾಗ್ಯದ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತದೆ. ಈಗಾಗಲೇ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮುನಿಯಪ್ಪ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಹೀಗೆ ಕೇಂದ್ರ ಸರ್ಕಾರದ ಅಕ್ಕಿ ನಿರಾಕರಣೆಯ ಹಿನ್ನೆಲೆಯಲ್ಲಿ ಜು.1ರಿಂದ ಪ್ರಾರಂಭವಾಗಬೇಕಿದ್ದ ಅನ್ನಭಾಗ್ಯ ಯೋಜನೆ ವಿಳಂಬ ಆಗಲಿದೆ. ಪಂಜಾಬ್, ಛತ್ತೀಸ್ಘಡ, ತೆಲಂಗಾಣ ಸೇರಿದಂತೆ ಈಗಾಗಲೇ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದರೂ ಸಹ ನಿಗದಿತ ಪ್ರಮಾಣದಷ್ಟು ಅಕ್ಕಿ ಸಿಗುವುದು ದುರ್ಲಭ. ಅಲ್ಲದೆ, ಸಾಗಣೆ ವೆಚ್ಚ ಹೆಚ್ಚಾಗುತ್ತಿರುವುದರಿಂದ ಸರ್ಕಾರವೂ ಸಹ ಹಿಂದುಮುಂದು ನೋಡುತ್ತಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸರ್ಕಾರ ಅಕ್ಕಿ ಬದಲಾಗಿ ಪರ್ಯಾಯ ವ್ಯಸ್ಥೆಗಳತ್ತ ಚಿಂತನೆ ಸಹ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.