ಸುದ್ದಿಮೂಲ ವಾರ್ತೆ
ತುಮಕೂರು, ಅ. 5 : ತುಮಕೂರು ಜಿಲ್ಲೆಯ ಬರ ಪರಿಸ್ಥಿತಿಯ ವಸ್ತು ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಜಲ ಆಯೋಗದ ನಿರ್ದೇಶಕ ಅಶೋಕ್ ಕುಮಾರ್ ವಿ. ಅವರ ನೇತೃತ್ವದ ಅಧಿಕಾರಿಗಳ ಬರ ಪರಿಶೀಲನಾ ತಂಡ ಇಂದು ತುಮಕೂರು ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಜಿಲ್ಲಾಡಳಿತದ ವತಿಯಿಂದ ತುಮಕೂರು ಜಿಲ್ಲೆಯ ಬರಪರಿಸ್ಥಿತಿ ಕುರಿತು ಸವಿವರವಾಗಿ ತಂಡಕ್ಕೆ ವಿವರಣೆ ನೀಡಿ, ಮಧುಗಿರಿ ತಾಲ್ಲೂಕಿನಿಂದ ಶಿರಾ ತಾಲ್ಲೂಕಿಗೆ ಬೆಳೆಹಾನಿಯಾದ ಪ್ರದೇಶಗಳಿಗೆ ತಂಡವನ್ನು ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ. ತಂಡವನ್ನು ಇಂದು ಮಧ್ಯಾಹ್ನ 1 ಗಂಟೆಗೆ ಕೊರಟಗೆರೆ ತಾಲ್ಲೂಕು ಅರಸಾಪುರದ ಬಳಿ ಬರಮಾಡಿಕೊಳ್ಳಲಾಗುವುದು.
ಬೈರೇನಹಳ್ಳಿಯಲ್ಲಿ ಕಡ್ಲೆಕಾಯಿ, ಜೋಳ ಬೆಳೆ ನಾಶವಾಗಿರುವ ಪ್ರದೇಶಗಳಿಗೆ ಕರೆತರಲಾಗುವುದು. ನಂತರ ಮಧುಗಿರಿ ತಾಲ್ಲೂಕಿನ ಪೂಜಾರಹಳ್ಳಿ ಕಡ್ಲೆಕಾಯಿ ಬೆಳೆ ನಾಶವಾಗಿರುವ ಪ್ರದೇಶ ಭೇಟಿ ಮಾಡಿಸಲಾಗುವುದು. ಮಧುಗಿರಿಯ ಪ್ರವಾಸಿ ಮಂದಿರದಲ್ಲಿ ಸದರಿ ತಂಡಕ್ಕೆ ಉಪಹಾರ ಹಾಗೂ ಜಿಲ್ಲೆಯ ಬರಪರಿಸ್ಥಿತಿಯ ಸಮಗ್ರ ಮಾಹಿತಿ ನೀಡುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.
ತದನಂತರ ಡಿ.ವಿ.ಹಳ್ಳಿ ರಾಗಿ ಮತ್ತು ಜೋಳ ವೀಕ್ಷಣೆ, ಕೈಮರ ಗೋಕಟ್ಟೆ ವೀಕ್ಷಣೆ, ಕೂನಹಳ್ಳಿ ರಾಗಿ ಮತ್ತು ಜೋಳ ವೀಕ್ಷಣೆ, ಶಿರಾ ತಾಲ್ಲೂಕಿನ ಗುಳಿಗೇನಹಳ್ಳಿಯಲ್ಲಿ ಕಡಲೆಕಾಯಿ ಪ್ರದೇಶ, ನ್ಯಾಯಗೆರೆ ನರೇಗಾ ಕಾಮಗಾರಿ, ಯರಗುಂಟೆ ಜೀನಿ ಮತ್ತು ಮಿಲೆಟ್ ಸಂಸ್ಕರಣಾ ಘಟಕ, ಕೊಟ್ಟಗೇಟ್ ರಾಗಿ ಬೆಳೆ ಪ್ರದೇಶ, ಓಜಗುಂಟೆ ನರೇಗಾ ಕಾಮಗಾರಿ ವೀಕ್ಷಣೆ, ಕಲ್ಲುಕೋಟೆ ಕಡಲೆಕಾಯಿ ಹಾಗೂ ರಾಗಿ ವೀಕ್ಷಿಸಿ ತಂಡವನ್ನು ಚಿತ್ರದುರ್ಗ ಗಡಿ ಬಳಿ ಇರುವ ಜವಗೊಂಡನಹಳ್ಳಿ ಬಳಿ ಬೀಳ್ಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 148 ಕೋಟಿ ಬೆಳೆ ಹಾನಿಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಉಪಕರಣಗಳು ಲಭ್ಯವಿದ್ದು, ರೈತರು ಅರೆ ನೀರಾವರಿ ಬೆಳೆಗಳನ್ನು ಬೆಳೆಯುವುದು ಉತ್ತಮವಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 7009070 ಕ್ವಿಂಟಾಲ್ ಒಣಮೇವು ಹಾಗೂ 580625 ಕ್ವಿಂಟಾಲ್ ಹಸಿ ಮೇವು ಲಭ್ಯವಿದ್ದು, ಈ ಹಂಗಾಮಿಗೆ ಒಟ್ಟು 4,17,678 ಮೇವು ಮಿನಿಕಿಟ್ ಬೇಡಿಕೆ ಇದ್ದು, ಕೊಳವೆ ಬಾವಿ ಹೊಂದಿರುವ ರೈತರನ್ನು ಗುರುತಿಸಿ ಸದರಿ ಮಿನಿಕಿಟ್ಗಳನ್ನು ಬೆಳೆಯಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ ಎಂದರು.
ತಂಡದಲ್ಲಿ ಎನ್.ಸಿ.ಎಫ್.ಸಿ. ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕರಣ್ ಚೌದರಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಸಂಗೀತ್ ಕುಮಾರ್ ಹಾಗೂ ರಾಜ್ಯದ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆಯ ಹಿರಿಯ ಸಮಾಲೋಚಕರಾದ ಡಾ. ಜಿ.ಎಸ್. ಶ್ರೀನಿವಾಸ್ ರೆಡ್ಡಿ ಅವರುಗಳು ಉಪಸ್ಥಿತರಿರುವರು ಎಂದು ತಿಳಿಸಿದರು.