ಸುದ್ದಿಮೂಲ ವಾರ್ತೆ
ತುಮಕೂರು, ಅ.26: ರೈತರು ಏಕ ಬೆಳೆ ಪದ್ದತಿಗಿಂತ ಬಹು ಬೆಳೆ ಪದ್ದತಿಯ ಜೊತೆಗೆ,ಹೈನುಗಾರಿಕೆ ಮತ್ತು ರೇಷ್ಮೆಯನ್ನು ಅಳವಡಿಸಿಕೊಂಡರೆ ಹೆಚ್ಚಿನ ಲಾಭಗಳಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಜಿ.ಪ್ರಭು ತಿಳಿಸಿದ್ದಾರೆ.
ನಗರದ ಅಮರಜೋತಿ ನಗರದ ರೇಷ್ಮೆ ಇಲಾಖೆಯ ಕಚೇರಿಯಲ್ಲಿ ರೇಷ್ಮೆ ಇಲಾಖೆ, ರೇಷ್ಮೆ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ, ಪ್ರಧಾನ ಮಂತ್ರಿಗಳ ಕೃಷಿ ಸಿಂಚಯ್ ಯೋಜನೆಯಡಿ ರೇಷ್ಮೆ ತಾಕುಗಳಿಗೆ ಹನಿನೀರಾವರಿ ಅಳವಡಿಸುವುದರ ಕುರಿತ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃಷಿಯೊಂದಿಗೆ ತೋಟಗಾರಿಕೆ,ಹೈನುಗಾರಿಕೆ ಇದ್ದರೆ ಮಾತ್ರ ಇಂದು ಕೃಷಿ ಲಾಭದಾಯಕವಾಗಿ ಪರಿಣಮಿಸಲಿದೆ ಎಂದರು.
ತೋಟಗಾರಿಕೆಯಲ್ಲಿ ಡ್ರಾಗನ್ ಪ್ರೂಟ್, ಕಿರುದಾನ್ಯಗಳನ್ನು ಬೆಳೆದು, ಲಾಭ ಗಳಿಸಬಹುದು. ಬಹು ಬೆಳೆ ಪದ್ದತಿಯಲ್ಲಿ ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ಕೈ ಹಿಡಿಯಲಿದೆ. ಹಾಗಾಗಿ ರೈತರು,ಅದರಲ್ಲಿಯೂ ಯುವ ರೈತರು ಈ ನಿಟ್ಟಿನಲ್ಲಿ ಆಲೋಚಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕೆವಿಕೆ ಹಿರೇಹಳ್ಳಿ
ಕೃಷಿ ವಿಜ್ಞಾನಿ ಡಾ.ಪ್ರಶಾಂತ್, ಕೊಡತಿ ಆರ್.ಎಸ್.ಆರ್.ಎಸ್ನ ಡಾ.ಕುಲಕರ್ಣಿ,
ರೇಷ್ಮೆ ಸಹಾಯಕ ನಿರ್ದೇಶಕರಾದ ಚೇತನ್, ಜಿಲ್ಲೆಯ ವಿವಿಧ ತಾಲೂಕುಗಳ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರುಗಳಾದ ಎ.ಸಿ.ನಾಗೇಂದ್ರ, ಬೊಮ್ಮಯ್ಯ, ಆರ್.ರಂಗನಾಥ್, ನಾಗರಾಜು,ಮುರುಳೀಧರ್, ರಾಜ್ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
ನೂರಾರು ರೇಷ್ಮೆ ಬೆಳೆಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.