ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.19: ಸಿಎಂ ಸಿದ್ದರಾಮಯ್ಯನವರು ತಕ್ಷಣ ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿಬಿಐ ತನಿಖೆ ಮುಂದುವರೆಯುವ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರು ತಡಮಾಡದೆ ರಾಜೀನಾಮೆ ಸಲ್ಲಿಸಬೇಕು. ಸಿಬಿಐ ತನಿಖೆ ನಡೆಯಲಿದೆ. ಉನ್ನತ ಹುದ್ದೆಯಲ್ಲಿರುವ ಡಿ.ಕೆ.ಶಿವಕುಮಾರರು ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕುವ ಎಲ್ಲ ಸಾಧ್ಯತೆ- ಸಂದರ್ಭಗಳಿವೆ. ಅವರು ಪ್ರಭಾವಿ ವ್ಯಕ್ತಿಯಾದ ಕಾರಣ ಸಾಕ್ಷಿ ನಾಶ ಮಾಡುವ ಸಾಧ್ಯತೆ ಎದ್ದು ಕಾಣುತ್ತದೆ ಎಂದು ನುಡಿದರು.
ಶಿವಕುಮಾರ್ ಅವರು ರಾಜೀನಾಮೆ ಕೊಡದಿದ್ದರೆ ಸಿಎಂ ಅವರ ರಾಜೀನಾಮೆ ಪಡೆಯಲಿ. ಇಲ್ಲವಾದರೆ ನಾವು ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ. ಇವತ್ತಿನ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಕೊಡದಿದ್ದರೆ ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಕೊಟ್ಟು ಒತ್ತಾಯಿಸಲಿದ್ದೇವೆ ಎಂದು ವಿವರಿಸಿದರು.
ಇವತ್ತು ಹೈಕೋರ್ಟಿನಲ್ಲಿ ಒಂದು ಆದೇಶ ಹೊರಗೆ ಬಂದಿದೆ. ಡಿಸಿಎಂ ಡಿ.ಕೆ.ಶಿವಕುಮಾರರ ವಿರುದ್ಧ ಸಿಬಿಐನಲ್ಲಿ ದಾಖಲಾಗಿದ್ದ ಕೇಸಿನ ತನಿಖೆ ಮಾಡಲು ತಡೆಯಾಜ್ಞೆ ತಂದಿದ್ದರು. ಇವತ್ತು ಆ ತಡೆಯಾಜ್ಞೆ ತೆರವುಗೊಳಿಸಿ ತನಿಖೆ ಮುಂದುವರೆಸಲು ಹೈಕೋರ್ಟ್ ಆದೇಶ ಕೊಟ್ಟಿದೆ ಎಂದು ತಿಳಿಸಿದರು.
ಇದರಿಂದ ಇವತ್ತು ನ್ಯಾಯಕ್ಕೆ ಬೆಲೆ ಸಿಕ್ಕಿದೆ. ಈ ಆದೇಶದಿಂದ ಡಿ.ಕೆ.ಶಿವಕುಮಾರರಿಗೆ ಹಿನ್ನಡೆ ಆಗಿರಬಹುದು ಅಥವಾ ಬೇಸರ ಆಗಿರಬಹುದು. ಆದರೆ, ಮಾನ್ಯ ಸಿದ್ದರಾಮಯ್ಯರಿಗೆ ತುಂಬ ಖುಷಿಯಾಗಿದೆ. ಸಿದ್ದರಾಮಯ್ಯರನ್ನು ಹೇಗಾದರೂ ಮನೆಗೆ ಕಳುಹಿಸಿ ನಾನು ಸಿಎಂ ಆಗಬೇಕೆಂದು ಡಿ.ಕೆ.ಶಿವಕುಮಾರ್ ಪ್ರಯತ್ನ, ಈತ ಹೇಗಾದರೂ ಮತ್ತೆ ಜೈಲಿಗೆ ಹೋದರೆ ನನಗೆ ಅನುಕೂಲ ಎಂದು ಮಾನ್ಯ ಮುಖ್ಯಮಂತ್ರಿಗಳು ಹೇಳುತ್ತಿರುವುದಾಗಿ ನಿನ್ನೆವರೆಗೂ ಮಾತುಗಳು ಕೇಳಿಸಿದ್ದವು. ಇವತ್ತು ಸಿದ್ದರಾಮಯ್ಯನವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಕಾಣುತ್ತಿದೆ ಎಂದರು.
ಬಿಜೆಪಿ ನಾಯಕರು ಸುಳ್ಳಮಳ್ಳ ನಾಯಕರು ಎಂಬ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸುಳ್ಳ ಯಾರು ಮಳ್ಳ ಯಾರೆಂದು ಬೆಂಗಳೂರಿನ ಜನರು ಹೇಳುತ್ತಾರೆ. ಮೆತ್ತಮೆತ್ತಗೆ ಏನೇನು ಮಾಡುತ್ತಾರೋ ಅವರನ್ನು ಮಳ್ಳ ಎನ್ನುತ್ತಾರೆ. ರಾಮಲಿಂಗಾರೆಡ್ಡಿಯವರೇ ನಿಮ್ಮನ್ನೇ ಎಲ್ಲರೂ ಮಳ್ಳ ಎಂದು ಹೇಳುತ್ತಿದ್ದಾರೆ. ಸುಳ್ಳ ಎಂದು ಸಿದ್ದರಾಮಯ್ಯ ಮತ್ತು ಕ್ಯಾಂಪ್ ಪ್ರಸಿದ್ಧಿ ಪಡೆದಿದೆ ಎಂದು ತಿರುಗೇಟು ನೀಡಿದರು. ಸುಳ್ಳಮಳ್ಳ ಪಟ್ಟ ನಿಮಗೇ ಇರಲಿ ಎಂದು ತಿಳಿಸಿದರು.