ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.27: ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ‘ಪ್ರಸಾದ್’ ಯೋಜನೆಯಡಿ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನ ಅಭಿವೃದ್ಧಿಪಡಿಸುವ ಸಂಬಂಧ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಆಡಳಿತಾತ್ಮಕ ಅನುಮೋದನೆ ನೀಡಿದೆ.
ತೀರ್ಥಯಾತ್ರೆಯ ಪುನರುಜೀವನ ಮತ್ತು ಆಧ್ಯಾತ್ಮಿಕ ವರ್ಧನೆಯ ಡ್ರೈವ್ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ‘ಪ್ರಸಾದ್’ ಯೋಜನೆಯನ್ನು ಜೂನ್ 2014 ರಂದು ಕೇಂದ್ರ ಪುವಾಸೋದ್ಯಮ ಮಂತ್ರಾಲಯವು ಪ್ರಕಟಿಸಿದ್ದು, ಇದೊಂದು ಧಾರ್ಮಿಕ ಗಮ್ಯ ಸ್ಥಾನಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ, ಪ್ರಚಾರ ಪಡಿಸುವ ಯೋಜನೆಯಾಗಿದೆ.
ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನವನ್ನು ಅಭಿವೃದ್ಧಿಪಡಿಸಲು ಹಾಗೂ ವಿವಿಧ ಮೂಲ ಸೌಕರ್ಯಗಳನ್ನು ಒದಗಿಸಲು ಅಭಿವದ್ಧಿ ಕಾಮಗಾರಿಗಳಿಗಾಗಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯಕ್ಕೆ ‘ಪ್ರಸಾದ್’ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವು ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಈ ಯೋಜನೆಯಡಿಯಲ್ಲಿ ಚಾಮುಂಡೇಶ್ವರಿ ದೇವಿ ದೇವಸ್ಥಾನ ಸನ್ನಿಧಿಯಲ್ಲಿ ಮಹಿಶಾಸುರ ಪ್ರತಿಮೆ ಸುತ್ತಲಿನ ಪ್ರಾಂಗಣ, ದೇವಿಕೆರೆ, ನಂದಿ ಪ್ರತಿಮೆ, ದೇವಿ ಪಾದ, ಪ್ರವಾಸಿಗರ ವೀಕ್ಷಣಾ ಪ್ರದೇಶಗಳ ಸುತ್ತಲಿನ ಅಭಿವೃದ್ಧಿಗೆ ಮತ್ತು ಭಕ್ತರು ಸರದಿ ಸಾಲಿನಲ್ಲಿ ನಿಲ್ಲುವ ಪ್ರದೇಶವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ದೇವಾಲಯದ ಮುಂಭಾಗದ ಸಭಾಂಗಣ, ಶೌಚಾಲಯಗಳಿಗೆ ಹೊಸ ರೂಪ ನೀಡುವ ಹಾಗೂ ಪಾದರಕ್ಷೆ ಸ್ಟ್ಯಾಂಡ್, ಕ್ಲಾಕ್ ರೂಂ ನಿರ್ಮಾಣ, ಮಹಿಷಾಸುರ ಪ್ರತಿಮೆ ಸುತ್ತಲಿನ ಪೊಲೀಸ್ ಬೂತ್, ಮಾಹಿತಿ ಕೇಂದ್ರ, ಕಂಟ್ರೋಲ್ ರೂಂ, ಭಕ್ತರಿಗೆ ಆಸನ ವ್ಯವಸ್ಥೆ, ಕುಡಿಯುವ ನೀರಿನ ಘಟಕ, ಕಾರಂಜಿ, ಕಲ್ಲಿನ ಮಾದರಿಯ ಪ್ರವೇಶ ದ್ವಾರ, ಕಲ್ಲಿನ ನಾಮಫಲಕಗಳು ಹಾಗೂ ಮೆಟ್ಟಿಲು ಮಾರ್ಗದ ದೇವಿಪಾದದ ಬಳಿ ಕಂಬಿಗಳ ಅಳವಡಿಕೆ, ನೀರಿನ ಕೊಳವೆಗಳ ಅಳವಡಿಕೆ ಜೊತೆಗೆ ಸುತ್ತಲಿನ ಪ್ರದೇಶ ಅಭಿವೃದ್ಧಿ ಸೇರಿದಂತೆ ಸಾರ್ವಜನಿಕರಿಗೆ ಮಾಹಿತಿ ಇತ್ಯಾದಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಪ್ರವಾಸೋದ್ಯಮ, ಮಂತ್ರಾಲಯವು ಅನುಮೋದನೆ ನೀಡಿದ್ದು, ಒಟ್ಟು ರೂ.45.70 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾದ ಡಾ.ವಿ.ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ.