ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.9: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಕಾರ್ಯಾಧ್ಯಕ್ಷರನ್ನಾಗಿ ಮಾಜಿ ಸಂಸದ ಚಂದ್ರಪ್ಪ ನೇಮಕ ಮಾಡಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್, ಧ್ರುವ ನಾರಾಯಣ್ ನಿಧನದ ನಂತರ ಒಂದು ಹುದ್ದೆ ಖಾಲಿಯಾಗಿತ್ತು.
ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು, ಚಂದ್ರಪ್ಪ ಅವರ ನೇಮಕದ ಮೂಲಕ ದಲಿತ ಎಡಗೈ ಸಮುದಾಯಕ್ಕೆ ಅವಕಾಶ ನೀಡಲಾಗಿದೆ.
ಚಂದ್ರಪ್ಪ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಕ್ಷೇತ್ರದಿಂದ 2014 -2019ರವರೆಗೆ ಸಂಸದರಾಗಿದ್ದರು. ಅಲ್ಲದೇ ಸಂಸತ್ತಿನ ರಾಸಾಯನಿಕ ಮತ್ತು ರಸಗೊಬ್ಬರದ ಸ್ಥಾಯಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಈ ಬಾರಿ ಪಾವಗಡ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿ ಸಹ ಆಗಿದ್ದಾರೆ.
ಮೂಲತ: ಚಿಕ್ಕಮಗಳೂರು ಜಿಲ್ಲೆಯವರಾದ ಚಂದ್ರಪ್ಪ ಎಂಬತ್ತರ ದಶಕದಲ್ಲಿ ಹಿಂದಿನ ಜಿಲ್ಲಾ ಪರಿಷತ್ತಿಗೆ ಆಯ್ಕೆಯಾಗಿದ್ದರು. ಮಲ್ಲಿಕಾರ್ಜುನ ಖರ್ಗೆಯವರಂತೆ ಚಂದ್ರಪ್ಪ ಕೂಡ ರಾಜ್ಯದ ಚರ್ಮೋದ್ಯಮದ ಅಂಗಸಂಸ್ಥೆಯಾದ ಲಿಡ್ಕರ್ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಚಂದ್ರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.