ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.7:ರಾಜ್ಯದ ಅರ್ಥವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿರುತ್ತದೆ. ಕೇಂದ್ರ ಸಾಂಖ್ಯಿಕ ಕಛೇರಿಯು ಬಿಡುಗಡೆ ಮಾಡಿರುವ ಮುಂಗಡ ಅಂದಾಜುಗಳ ಪ್ರಕಾರ ರಾಜ್ಯದ ಜಿ.ಎಸ್.ಡಿ.ಪಿ ಯು 2022-23ರಲ್ಲಿ ಶೇ. 7.9 ರಷ್ಟು ಬೆಳವಣಿಗೆ ದಾಖಲಿಸಿದೆ. 2021-22 ರಲ್ಲಿ ರಾಜ್ಯದ ಜಿ.ಎಸ್.ಡಿ.ಪಿ ಬೆಳವಣಿಗೆಯು ಶೇ.11 ರಷ್ಟು ದಾಖಲಾಗಿತ್ತು. 2022-23ರ ವಲಯವಾರು ಬೆಳವಣಿಗೆಯನ್ನು ಗಮನಿಸಿದರೆ, ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿನ ಬೆಳವಣಿಗೆಯು ಶೇ. 5.5, 5.1 ಮತ್ತು 9.2 ರಷ್ಟು ಬೆಳವಣಿಗೆಯನ್ನು ದಾಖಲಿಸಿರುತ್ತದೆ.
25. ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಅಂದರೆ, 2013-14 ರಿಂದ 2017-18ರವರೆಗೆ ಕೈಗಾರಿಕಾ ವಲಯದಲ್ಲಿ ಶೇ. 8.70 ರಷ್ಟು ಬೆಳವಣಿಗೆ (CAGR) ಹಾಗೂ ಸೇವಾ ವಲಯದಲ್ಲಿ ಶೇ. 9.69 ರಷ್ಟು ಬೆಳವಣಿಗೆ (CAGR) ದಾಖಲಾಗಿರುತ್ತದೆ. ಆದರೆ, 2019-20 ರಿಂದ
2022-23ರ ವರೆಗೆ ಕೈಗಾರಿಕಾ ವಲಯದಲ್ಲಿ ಶೇ. 3.86 ರಷ್ಟು ಬೆಳವಣಿಗೆ (CAGR) ಹಾಗೂ ಸೇವಾ ವಲಯದಲ್ಲಿ ಶೇ. 4.25 ರಷ್ಟು ಬೆಳವಣಿಗೆ (CAGR) ದಾಖಲಾಗಿದ್ದು, ಇದು ಕೋವಿಡ್ನಿಂದ ತತ್ತರಿಸಿದ ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಈ ಹಿಂದಿದ್ದ ಸರ್ಕಾರವು ವಿಫಲವಾಗಿರುವುದನ್ನು ಎತ್ತಿ ತೋರಿಸುತ್ತದೆ.
26. 2022-23ರಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮತ್ತು ತೈಲ ಬೆಲೆಯ ಏರಿಕೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ. ತೀವ್ರ ಹಣದುಬ್ಬರದಿಂದ ಜನ ಸಾಮಾನ್ಯರು ಕಂಗಾಲಾಗಿದ್ದು, ಅವರನ್ನು ಇಂತಹ ಪ್ರತಿಕೂಲ ವಾತಾವರಣದಿಂದ ರಕ್ಷಿಸುವುದೇ ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಪ್ರೇರಣೆಯಾಗಿದೆ.
27. 2021-22 ರಲ್ಲಿ ರಾಜ್ಯಕ್ಕೆ 22 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹೂಡಿಕೆ ಹರಿದು ಬಂದಿದ್ದು, 2022-23ರಲ್ಲಿ ಇದು 10 ಬಿಲಿಯನ್ ಡಾಲರ್ಗೆ ಇಳಿದಿದೆ. ರಾಜ್ಯಕ್ಕೆ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯನ್ನು ಸೆಳೆಯಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರ್ಕಾರವು ಬದ್ಧವಾಗಿದೆ.
ರಾಜ್ಯದ ಹಣಕಾಸು ಪರಿಸ್ಥಿತಿ
28. ಹಿಂದಿನ ಸರ್ಕಾರವು ವಿತ್ತೀಯ ಶಿಸ್ತಿನ ನೀತಿಗಳನ್ನು ಗಾಳಿಗೆ ತೂರಿ ಪ್ರಮುಖ ಇಲಾಖೆಗಳಲ್ಲಿ ಬಾರಿ ಸಂಖ್ಯೆಯ ಕಾಮಗಾರಿಗಳಿಗೆ ಮಂಜೂರಾತಿ ನೀಡಿರುತ್ತದೆ. ಹಿಂದಿನ ಸರ್ಕಾರವು ತನ್ನ ಅಧಿಕಾರಾವಧಿಯಲ್ಲಿ ಒಟ್ಟಾರೆ 94,933 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ಜಲಸಂಪನ್ಮೂಲ, ನಗರಾಭಿವೃದ್ಧಿ, ಲೋಕೋಪಯೋಗಿ ಮತ್ತು ಇತರೆ ಇಲಾಖೆಗಳಲ್ಲಿ ಅನುಮೋದಿಸಿರುತ್ತದೆ. ಈ ಮೇಲ್ಕಂಡ ಇಲಾಖೆಗಳಿಗೆ 2022-23ರ ಆಯವ್ಯಯದಲ್ಲಿ ಕೇವಲ 33,616 ಕೋಟಿ ರೂ.ಗಳ ಅನುದಾನವನ್ನು ನೀಡಿದ್ದರೂ ಹಾಗೂ 2021-22ರ ಅಂತ್ಯಕ್ಕೆ 2,05,986 ಕೋಟಿ ರೂ.ಗಳಷ್ಟು ಮೊತ್ತದ ಬಾಕಿ ಕಾಮಗಾರಿಗಳಿದ್ದರೂ ಸಹ ಹಿಂದಿನ ಸರ್ಕಾರವು ಇದನ್ನು ಲೆಕ್ಕಿಸದೇ 49,116 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ವಿವೇಚನಾರಹಿತವಾಗಿ ಅನುಮೋದಿಸಿರುತ್ತದೆ. 2022-23ರ ಅಂತ್ಯಕ್ಕೆ ಬಾಕಿ ಉಳಿಸಿರುವ ಕಾಮಗಾರಿಗಳ ಒಟ್ಟು ಮೊತ್ತವು 2,55,102 ಕೋಟಿ ರೂ.ಗಳಾಗಿದ್ದು, ಇದನ್ನು ಪೂರ್ಣಗೊಳಿಸಲು ಕನಿಷ್ಟ ಆರು ವರ್ಷಗಳು ಬೇಕಾಗಿದ್ದು, ನಮ್ಮ ಸರ್ಕಾರಕ್ಕೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.
29. ಕರ್ನಾಟಕ ರಾಜ್ಯವು ಆರ್ಥಿಕ ಶಿಸ್ತನ್ನು ಪಾಲಿಸುವ ರಾಜ್ಯವೆಂದೇ ಹೆಸರಾಗಿದೆ. ಆದರೆ ಹಿಂದಿನ ಸರ್ಕಾರವು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸೋತಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಗಳು 2017-18ರ ಅಂತ್ಯಕ್ಕೆ 2,45,737 ಕೋಟಿ ರೂ.ಗಳಷ್ಟಿದ್ದು, 2022-23ರ ಅಂತ್ಯಕ್ಕೆ 5,16,788 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ ಹಾಗೂ ರಾಜ್ಯ ಸರ್ಕಾರದ ಸಾಲದ ಮೇಲಿನ ಬಡ್ಡಿ ಪಾವತಿಯು 2017-18ರಲ್ಲಿ ರಾಜಸ್ವ ಸ್ವೀಕೃತಿಗಳ ಶೇ.9.5 ರಷ್ಟಿದ್ದರೆ, 2023-24ರಲ್ಲಿ ರಾಜಸ್ವ ಸ್ವೀಕೃತಿಯ ಶೇ.15.06 ಕ್ಕೆ ಹೆಚ್ಚಳವಾಗಿರುತ್ತದೆ.
30. ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕವು ಪ್ರಮುಖ ರಾಜ್ಯವಾಗಿದ್ದರೂ ಸಹ ಕೇಂದ್ರ ಸರ್ಕಾರ ಹಂಚಿಕೆ ಮಾಡುವ ಒಟ್ಟು ತೆರಿಗೆಯಲ್ಲಿ ಶೇ. 3.65 ರಷ್ಟು ಮಾತ್ರ ರಾಜ್ಯಕ್ಕೆ ನೀಡಲಾಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಿಂದಾಗಿ ನಮ್ಮ ರಾಜ್ಯಕ್ಕೆ ಅತೀ ಹೆಚ್ಚು ನಷ್ಟವಾಗಿದ್ದು, ಇದು ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಕ್ಕೆ ದ್ರೋಹ ಬಗೆದಂತಾಗಿದೆ. ಇದರಿಂದಾಗಿ 2023-24ರ ಆರ್ಥಿಕ ವರ್ಷದಲ್ಲಿ 10,858 ಕೋಟಿ ರೂ.ಗಳಷ್ಟು ತೆರಿಗೆ ಪಾಲು ಕಡಿಮೆಯಾಗಿರುತ್ತದೆ ಹಾಗೂ ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟಾರೆ 26,140 ಕೋಟಿ ರೂ.ಗಳ ನಷ್ಟವಾಗಿರುತ್ತದೆ. ೧೫ನೇ ಹಣಕಾಸು ಆಯೋಗವು ತನ್ನ ವರದಿಯನ್ನು ಸಲ್ಲಿಸುವಾಗ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ಸಹ ಹಿಂದಿನ ಸರ್ಕಾರವು ರಾಜ್ಯ ವಿರೋಧಿಯಾಗಿರುವ ಆಯೋಗದ ವರದಿಯನ್ನು ಒಪ್ಪಿಕೊಳ್ಳದಿರುವಂತೆ, ಒತ್ತಡವನ್ನು ತರದೆ ಮೂಕ ಪ್ರೇಕ್ಷಕರಾಗಿದ್ದು, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ.
31. 2019-20ಕ್ಕೆ ಹೋಲಿಸಿದರೆ 2020-21ರಲ್ಲಿ ನಮ್ಮ ರಾಜ್ಯದ ತೆರಿಗೆ ಪಾಲು ಕಡಿಮೆಯಾದ್ದರಿಂದ 15ನೇ ಹಣಕಾಸು ಆಯೋಗವು
2020-21ಕ್ಕೆ ಅನ್ವಯವಾಗುವಂತೆ ನಮ್ಮ ರಾಜ್ಯಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವಂತೆ ಮಧ್ಯಂತರ ವರದಿಯಲ್ಲಿ ಶಿಫಾರಸ್ಸು ಮಾಡಿರುತ್ತದೆ. ಆದರೆ, ಕೇಂದ್ರ ಸರ್ಕಾರವು, ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ ಈ ವಿಶೇಷ ಅನುದಾನವನ್ನು ನಮ್ಮ ರಾಜ್ಯಕ್ಕೆ ನೀಡಿರುವುದಿಲ್ಲ. ಅಲ್ಲದೆ,
15ನೇ ಹಣಕಾಸು ಆಯೋಗವು ತನ್ನ ಅಂತಿಮ ವರದಿಯಲ್ಲಿ ರಾಜ್ಯ ಕೇಂದ್ರಿತ ಕಾಮಗಾರಿಗಳ/ಯೋಜನೆಗಳಿಗೆ ಅನುದಾನವನ್ನು ಶಿಫಾರಸ್ಸು ಮಾಡಿರುತ್ತದೆ. ನಮ್ಮ ರಾಜ್ಯಕ್ಕೆ 3,000 ಕೋಟಿ ರೂ.ಗಳ ಅನುದಾನವನ್ನು ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ಮತ್ತು 3,000 ಕೋಟಿ ರೂ.ಗಳನ್ನು ಬೆಂಗಳೂರು ನಗರದ ಪೆರಿಫೆರಲ್ ರಿಂಗ್ ರಸ್ತೆಗಾಗಿ ಎಂದು ರಾಜ್ಯ-ಕೇಂದ್ರಿತ ಅನುದಾನವನ್ನು ಶಿಫಾರಸ್ಸು ಮಾಡಿರುತ್ತದೆ. ಆದರೆ, ಕೇಂದ್ರ ಸರ್ಕಾರವು ಈ ಅನುದಾನವನ್ನು ನಮ್ಮ ರಾಜ್ಯಕ್ಕೆ ನೀಡಿರುವುದಿಲ್ಲ. ಕೇಂದ್ರದ ವಿತ್ತ ಮಂತ್ರಿಯವರು ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿದ್ದರೂ, ನಮ್ಮದು ಡಬಲ್ ಇಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರವಿದ್ದರೂ ಸಹ, ಕೇಂದ್ರದಿಂದ ಈ ಅನುದಾನವನ್ನು ಪಡೆಯುವಲ್ಲಿ ಹಿಂದಿನ ಸರ್ಕಾರವು ಅಸಮರ್ಥವಾಗಿರುತ್ತದೆ.
32. ರಾಜ್ಯದಲ್ಲಿ ಜಿ.ಎಸ್.ಟಿ. ತೆರಿಗೆಯನ್ನು ಜಾರಿಗೆ ತರುವ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜ್ಯದ ಜಿ.ಎಸ್.ಟಿ ತೆರಿಗೆಯು ವರ್ಷವಾರು ಶೇ.14 ರಷ್ಟು ಬೆಳವಣಿಗೆಯಾಗಲಿದೆ ಎಂದು ಭರವಸೆ ನೀಡಿತ್ತು. ಆದರೆ ಕಳೆದ ಐದು ವರ್ಷಗಳ ರಾಜ್ಯದ ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯನ್ನು ಗಮನಿಸಿದರೆ ಕೇಂದ್ರ ಸರ್ಕಾರದ ಭರವಸೆ ಹುಸಿಯಾಗಿರುವುದು ಸಾಬೀತಾಗಿದೆ. ಅಲ್ಲದೇ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುತ್ತಿದ್ದ ಜಿ.ಎಸ್.ಟಿ. ಪರಿಹಾರವನ್ನು 2022 ಜುಲೈನಿಂದ ಸ್ಥಗಿತಗೊಳಿಸಿರುತ್ತದೆ. ಇದರಿಂದಾಗಿ 2023-24ರ ಆರ್ಥಿಕ ವರ್ಷದಲ್ಲಿಯೇ ಸುಮಾರು 26,954 ಕೋಟಿ ರೂ.ಗಳಷ್ಟು ಜಿ.ಎಸ್.ಟಿ. ಕೊರತೆ ಉಂಟಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಇದು ಬಹುದೊಡ್ಡ ಆಘಾತ ಉಂಟು ಮಾಡಿದೆ.
33. ಕೇಂದ್ರ ಸರ್ಕಾರ ವಿಧಿಸುವ ಸೆಸ್ (Cess) ಮತ್ತು ಸರ್ಚಾರ್ಜ್ (Surcharge) ರಾಜ್ಯಗಳಿಗೆ ಹಂಚಿಕೆ ಮಾಡದೆ ತನ್ನ ಬಳಿಯೇ ಉಳಿಸಿಕೊಳ್ಳುತ್ತದೆ. ತೆರಿಗೆಗಳ ಮೇಲೆ ವಿಧಿಸುವ ಸೆಸ್ ಮತ್ತು ಸರ್ಚಾರ್ಜ್ ಹೆಚ್ಚುತ್ತಿರುವುದರಿಂದ ರಾಜ್ಯಗಳಿಗೆ ಸಂದಾಯವಾಗುವ ತೆರಿಗೆ ಪಾಲು ಕಡಿಮೆಯಾಗಿರುತ್ತದೆ. 2022-23ರಲ್ಲಿ ಎಲ್ಲಾ ರಾಜ್ಯಗಳಿಂದ ಒಟ್ಟು 5,20,570 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರವು ಸೆಸ್ ಮತ್ತು ಸರ್ಚಾರ್ಜ್ ಮೂಲಕ ಸಂಗ್ರಹಿಸಿರುವುದರಿಂದ ನಮ್ಮ ರಾಜ್ಯಕ್ಕೆ ಸುಮಾರು 7,780 ಕೋಟಿ ರೂ.ಗಳಷ್ಟು ನಷ್ಟವಾಗಿರುತ್ತದೆ. ನಮ್ಮ ಸರ್ಕಾರವು ಕೇಂದ್ರದ ಈ ನಡೆಯನ್ನು ಬಲವಾಗಿ ವಿರೋಧಿಸುತ್ತದೆ.
34. ಕೇಂದ್ರ ಸರ್ಕಾರವು, ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ನೀಡುವ ಸಹಾಯಾನುದಾನವನ್ನು ಕಡಿಮೆ ಮಾಡುತ್ತಾ ಬಂದಿದೆ. ಕೇಂದ್ರದ ಪಾಲು ಕಡಿಮೆಯಾಗಿರುವುದರಿಂದ ರಾಜ್ಯದ ಜನರ ಹಿತದೃಷ್ಟಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲನ್ನು ಹೆಚ್ಚಿಸುವ ಅನಿವಾರ್ಯತೆ ಉಂಟಾಗಿದೆ ಹಾಗೂ ಇದರಿಂದಾಗಿ ರಾಜ್ಯದ ಹೊಸ ಯೋಜನೆಗಳಿಗೆ ಅನುದಾನದ ತೀವ್ರ ಕೊರತೆ ತಲೆದೋರಿದೆ.
35. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯದ 14.13 ಲಕ್ಷ ಫಲಾನುಭವಿಗಳಿಗೆ ಮಾತ್ರ ಪಿಂಚಣಿಯನ್ನು ನೀಡುತ್ತಿದ್ದು, ರಾಜ್ಯ ಸರ್ಕಾರವು ತನ್ನ ಸ್ವಂತ ಸಂಪನ್ಮೂಲಗಳಿಂದ ಹೆಚ್ಚುವರಿ 64.21 ಲಕ್ಷ ಫಲಾನುಭವಿಗಳಿಗೆ ಪಿಂಚಣಿಯನ್ನು ನೀಡುತ್ತಿದೆ. 2022-23 ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೇವಲ 447 ಕೋಟಿ ರೂ. ನೀಡಿದರೆ, ರಾಜ್ಯ ಸರ್ಕಾರವು 8,636 ಕೋಟಿ ರೂ.ಗಳನ್ನು ನೀಡಿರುತ್ತದೆ. ಅಂದರೆ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಕೇಂದ್ರ ಸರ್ಕಾರವು ಕೇವಲ ಶೇ.4.9 ರಷ್ಟು ಅನುದಾನ ನೀಡಿದರೆ ಬಾಕಿ ಶೇ.95.1 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ.
36. ಹಿಂದಿನ ಸರ್ಕಾರವು ಬದ್ಧ ವೆಚ್ಚಗಳಿಗೆ ಕಡಿವಾಣ ಹಾಕಿ ಜನಕಲ್ಯಾಣ ಕಾರ್ಯಕ್ರಮಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ವಿಫಲವಾಗಿರುತ್ತದೆ. ಆಯವ್ಯಯ ಗಾತ್ರವು 2018-19 ರಿಂದ 2023-24ರವರೆಗೆ ಶೇ.50ರಷ್ಟು ಹೆಚ್ಚಳವಾಗಿರುತ್ತದೆ. ಆದರೆ, ಬದ್ಧ ವೆಚ್ಚಗಳಾದ ವೇತನ, ಬಡ್ಡಿ ಪಾವತಿ ಮತ್ತು ಪಿಂಚಣಿ ವೆಚ್ಚಗಳು ಈ ಐದು ವರ್ಷಗಳಲ್ಲಿ ಶೇ.81ರಷ್ಟು ಹೆಚ್ಚಾಗಿರುತ್ತದೆ.
37. ರಾಜ್ಯದ ಆರ್ಥಿಕತೆಯ ಬೆನ್ನೆಲುಬಾದ ವಿದ್ಯುಚ್ಛಕ್ತಿ ವಲಯವನ್ನು ಮುತುವರ್ಜಿಯಿಂದ ನಿರ್ವಹಿಸಿ ಸದೃಢಗೊಳಿಸುವ ಬದಲು ಹಿಂದಿನ ಸರ್ಕಾರವು ವಿದ್ಯುಚ್ಛಕ್ತಿ ವಲಯವನ್ನು ತೀವ್ರ ಸಂಕಷ್ಟಕ್ಕೆ ನೂಕಿದೆ. ದಿನಾಂಕ: 31.03.2018ರ ಅಂತ್ಯಕ್ಕೆ ವಿದ್ಯುತ್ ಉತ್ಪಾದಕ, ಪ್ರಸರಣ ಮತ್ತು ಸರಬರಾಜು ಕಂಪನಿಗಳ ಒಟ್ಟಾರೆ ಸಾಲದ ಬಾಕಿ ಮೊತ್ತವು 51,087 ಕೋಟಿ ರೂ.ಗಳಿದ್ದು, ಹಿಂದಿನ ಸರ್ಕಾರವು ದಿನಾಂಕ: 31.03.2023 ರ ಅಂತ್ಯಕ್ಕೆ ಒಟ್ಟು 91,911 ಕೋಟಿ ರೂ.ಗಳ ಸಾಲದ ಬಾಕಿ ಉಳಿಸಿರುತ್ತದೆ. ಜೊತೆಗೆ ವಿದ್ಯುತ್ ಸರಬರಾಜು ಕಂಪನಿಗಳ ಸಂಚಿತ ನಷ್ಟ (Cumulative loss) ದಿನಾಂಕ: 31.03.2018ರ ಅಂತ್ಯಕ್ಕೆ 4,725 ಕೋಟಿ ರೂ.ಗಳಿದ್ದು, ದಿನಾಂಕ: 31.03.2023ರ ಅಂತ್ಯಕ್ಕೆ 17,056 ಕೋಟಿ ರೂ.ಗಳಿಗೆ ಹೆಚ್ಚಾಗಿದ್ದು, ಹಿಂದಿನ ಸರ್ಕಾರದ ದುರಾಡಳಿತಕ್ಕೆ ಇದು ನಿದರ್ಶನವಾಗಿದೆ.
38. ಹಿಂದಿನ ಸರ್ಕಾರದಿಂದ ರಾಜ್ಯದ ಆರ್ಥಿಕತೆಯು ಕತ್ತಲೆಯಲ್ಲಿ ಮುಳುಗಿದ್ದರೂ, ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ದೃಢ ನಿಲುವನ್ನು ತೆಗೆದುಕೊಳ್ಳಲು ನಾನು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ರಾಜ್ಯದ ಜನತೆಯು ನಮ್ಮ ಸರ್ಕಾರದ ಮೇಲೆ ನಂಬಿಕೆಯನ್ನಿರಿಸಿ ಸ್ಪಷ್ಟ ಬಹುಮತವನ್ನು ನೀಡಿರುತ್ತಾರೆ. ಜನರ ಆಶೋತ್ತರಗಳನ್ನು ಈಡೇರಿಸಲು ನಾನು ಕಂಕಣಬದ್ಧನಾಗಿರುತ್ತೇನೆ. ನಮ್ಮ ಸರ್ಕಾರವು ಎಲ್ಲಾ ಐದು ಗ್ಯಾರಂಟಿಗಳನ್ನು ಪೂರೈಸಲು, ಅಗತ್ಯವಿರುವ ಆದಾಯವನ್ನು ಸೃಜಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರಸಕ್ತ ಸಾಲಿನಲ್ಲಿ ಬಂಡವಾಳ ಹೂಡಿಕೆ ಹಾಗೂ ನೇರ ನಗದು ವರ್ಗಾವಣೆಯಿಂದ ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಿ, ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಸ್ಪಷ್ಟ ಯೋಜನೆಗಳನ್ನು ರೂಪಿಸಲಾಗುವುದು.