ಸುದ್ದಿಮೂಲ ವಾತೆ
ಬೀದರ್, ಏ.20: ಜನ ಶಕ್ತಿ ಮತ್ತು ದರ್ಪದ ಶಕ್ತಿ ಮಾಧ್ಯೆ ಸ್ಪರ್ಧೆ ನಡೆಯುತ್ತಿದ್ದು, ಜನ ಶಕ್ತಿ ವಿರೋಧಿಗಳು ಮಣ್ಣು ಮುಕ್ಕುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಭಾಲ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆಯವರ ನಾಮಪತ್ರ ಸಲ್ಲಿಕೆ ನಂತರ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಬೀದರ್ ನಲ್ಲಿ 6 ಶಾಸಕರು ಆಯ್ಕೆಯಾಗುತ್ತಾರೆ. ವಿಶೇಷವಾಗಿ ಭಾಲ್ಕಿಯಲ್ಲಿ ಬಿಜೆಪಿ ಆಯ್ಕೆಯಾಗಲಿದ್ದು, ಯಾರು ಜನರ ವಿರುದ್ದ ಆಡಳಿತ ನಡೆಸುತ್ತಿದ್ದಾರೊ ಅವರು ಅವನತಿ ಹೊಂದುವ ಕಾಲ ಬಂದಿದೆ ಎಂದರು.
ಜನರ ಜೋಶ್ ನಮಗೆ ವಿಜಯದ ಪತಾಕೆ ಹಾರಿಸಲು ಅನುಕೂಲ. ರಾಜ್ಯದಲ್ಲಿ ಕಮಲವನ್ನು ಅರಳಿಸಲು ಬಸವಣ್ಣನ ನಾಡು, ಭಾಲ್ಕಿ ಪಟ್ಟಣ ದೇವರ ನಾಡಿಗೆ ಬಂದಿರುವುದಾಗಿ ತಿಳಿಸಿದರು.
ಪ್ರಕಾಶ ಖಂಡ್ರೆ ಅವರು ಯಾರಿಗೂ ಅನ್ಯಾಯ ಬಯಸುವುದಿಲ್ಲ. ಅವರು ಈ ಭಾಗದ ಪ್ರಥಮ ಬಿಜೆಪಿ ಶಾಸಕರು, ಅವರೊಂದಿಗೆ ಟಿಕೆಟ್ ಆಕಾಂಕ್ಷಿಗಳು ಎಲ್ಲರೂ ಒಗ್ಗಟ್ಟಾಗಿ ಅವರನ್ನು ಗೆಲ್ಲಿಸಿಕೊಂಡು ಬರಲು ತೀರ್ಮಾನಿಸಿದ್ದಾರೆ ಎಂದರು.
ಪ್ರಕಾಶ ಖಂಡ್ರೆ ಸಜ್ಜನ ವ್ಯಕ್ತಿ. ಇನ್ನೊಬ್ಬರು ಈಶ್ವರ ಖಂಡ್ರೆ ಇದ್ದಾರೆ. ಅವರು ಸ್ವಾರ್ಥ ರಾಜಕಾರಣ ಮಾಡಿದ್ದಾರೆ. ಎಲ್ಲರನ್ನು ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಈ ಬಾರಿ ಸಜ್ಜನರು ಮತ್ತು ದುರ್ಜನರ ನಡುವೆ ಸಂಘರ್ಷ ನಡೆದಿದೆ. ಈ ಬಾರಿ ಸಜ್ಜನರ ಗೆಲುವಾಗಲಿದೆ ಎಂದರು.
ಈ ಭಾಗದಲ್ಲಿ ರಸ್ತೆ, ನೀರಾವರಿಗೆ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 1000 ಕೋಟಿ ರೂ ಮೀಸಲಿಟ್ಟು, ಕೇವಲ 300 ಕೋಟಿ ಖರ್ಚು ಮಾಡುತ್ತಾರೆ. ಚುನಾವಣೆಗೂ ಮುನ್ನ ಭರವಸೆಗಳನ್ನು ನೀಡುತ್ತ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ವಿಜಿಟಿಂಗ್ ಕಾರ್ಡ್ ಕೊಡುತ್ತಿದ್ದಾರೆ. ಅದಕ್ಕೆ ಯಾವುದೇ ಬೆಲೆ ಇಲ್ಲ. ಇವರು ಕೊಡುತ್ತಿರುವುದು ಬೋಗಸ್ ಕಾರ್ಡ್, 200 ಯುನಿಟ್ ವಿದ್ಯುತ್ ಉಚಿವಾಗಿ ನೀಡುವುದಾಗಿ ಹೇಳುತ್ತಾರೆ. ಜನರು ಬಳಕೆ ಮಾಡುವುದೇ 70-80 ಯುನಿಟ್. ಇವರು 200 ಯುನಿಟ್ ಕೊಡುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದರು.
ಮೋದಿಯವರ 30 ರೂ. ಕೆಜಿ ಅಕ್ಕಿಗೆ ಸಿದ್ದರಾಮಯ್ಯ ಅವರ 3 ರೂ. ಸಿದ್ದರಾಮಯ್ಯ ಚೀಲ ಮಾತ್ರ. ಕಾಂಗ್ರೆಸ್ ಮುಳುಗುವ ಹಡಗು, ಅದರಲ್ಲಿ ನಮ್ಮವರು ಇಬ್ಬರು ಹತ್ತುತ್ತಿದ್ದಾರೆ. ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ದಲಿತರ ಮೀಸಲಾತಿ ಹೆಚ್ಚಳ ಮಾಡಿದೆವು. ಕಾಂಗ್ರೆಸ್ ನವರು ಯಾಕೆ ಮಾಡಲಿಲ್ಲ. ಒಳ ಮೀಸಲಾಯಿಯನ್ನು ಮೂವತ್ತು ವರ್ಷದಿಂದ ಕೇಳುತ್ತ ಬಂದರೂ ಕಾಂಗ್ರೆಸ್ ಮಾಡಿರಲಿಲ್ಲ. ಈಗ ನಾವು ಒಳ ಮೀಸಲಾತಿ ನೀಡಿದರೆ ಅದಕ್ಕೆ ವಿರೋಧ ಮಾಡುತ್ತಿದ್ದಾರೆ. ದಲಿತರಿಗೆ ಒಳ ಮೀಸಲಾತಿಯ ಬಗ್ಗೆ ಕಾಂಗ್ರೆಸ್ ನಿಲುವು ಏನು ಎಂದು ಸ್ಪಷ್ಟಪಡಿಸಬೇಕು ಎಂದರು.
ನಾವು ಬಹಳ ವರ್ಷಗಳ ಈ ಜನಾಂಗದ ಬೇಡಿಕೆಯನ್ನು ಈಡೇರಿಸುವ ಮೂಲಕ ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಿದ್ದೇವೆ. ನಾವು ಬಸವ ಪಥದಲ್ಲಿ ಮುನ್ನಡೆಯುತ್ತಿದ್ದೇ. ನಾವು ಎಲ್ಲ ವರ್ಗದವರಿಗಾಗಿ ಕಾರ್ಯಕ್ತಮ ಮಾಡಿದ್ದೇವೆ. ಯಾವುದೇ ಒಂದು ವರ್ಗಕ್ಕೆ ಮಾಡಿಲ್ಲ. ನಮ್ಮ ನಾಯಕ ಯಡಿಯೂರಪ್ಪ ಅವರು ರೂಪಿಸಿದ ಭಾಗ್ಯಲಕ್ಷ್ಮಿ ಯೋಜನೆಯ ಲಾಭವನ್ನು ಎಲ್ಲಾ ಸಮುದಾಯಗಳೂ ಪಡೆದುಕೊಂಡಿವೆ. ದುಡಿಯುವ ವರ್ಗಕ್ಕೆ ಶಕ್ತಿ ತುಂಬಲು ಕಾಯಕ ಯೋಜನೆ ಜಾರಿಗೆ ತಂದಿದ್ದೇವೆ. ಮೂರು ಲಕ್ಷ ಉದ್ಯೋಗ ನೀಡುವ ಸ್ತ್ರೀಸಾಮರ್ಥ್ಯ ಯೋಜನೆ ಜಾರಿಗೆ ತಂದಿದ್ದೇವೆ.ಯುವಕರಿಗೆ ಯುವ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ಗಡಿ ಭಾಗದ ಅಭಿವೃದ್ಧಿ ಗೆ ಹಣ
ಬೆಹರಕರ್ ಏತನೀರಾವರಿ ಯೋಜನೆ 750 ಕೋಟಿ ಯೋಜನೆ ಮುಂದೆ ನಾವೇ ಅಧಿಕಾರಕ್ಕೆ ಬಂದು ಜಾರಿಗೊಳಿಸುತ್ತೇವೆ. ಔರಾದ್ ಏತ ನೀರಾವರಿ ಯೊಜನೆ 650 ಕೋಟ, ನಾರಂಜಾ ಸಕ್ಕರೆ ಕಾರ್ಖಾನೆಗೆ 25 ಕೋಟಿ, ಬೀದರ್ ಸಕ್ಕರೆ ಕಾರ್ಖಾನೆಗೆ 20 ಕೋಟಿ ರೂ. ನೀಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಬಸವ ಕಲ್ಯಾಣದಲ್ಲಿ ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪ ಸ್ಥಾಪನೆ ಮಾಡಿದ್ದೇವೆ ಎಂದರು.
ಈ ಭಾಗದಲ್ಲಿ ದೊಡ್ಡ ದೊಡ್ಡ ಸಮಾಜದ ಮುಖಂಡರು ರಾಜ್ಯಾದ್ಯಂತ ತಿರುಗಾಡುತ್ತಾರೆ. ನಿಮಗೆ ಐದು ವರ್ಷ ಅಧಿಕಾರ ಇದ್ದಾಗ ಯಾಕೆ ಅನುಭವ ಮಂಟಪ ಸ್ಥಾಪನೆ ಮಾಡಲಿಲ್ಲ. ಟಿಪ್ಪು ಸುಲ್ತಾನ ನೆನಪಾಗುತ್ತಾನೆ. ಕನಕದಾಸರ ಕ್ಷೇತ್ರ ಅಭಿವೃದ್ದಿ ವಾಲ್ಮಿಕಿ ಜಯಂತಿಯನ್ನು ನಮ್ಮ ಯಡಿಯೂರಪ್ಪ ಅವರು ಜಾರಿಗೆ ತಂದರು. ಈ ಬಾರಿ ಭಾಲ್ಕಿಯಲ್ಲಿ ಬಿಜೆಪಿ ಆಯ್ಕೆಯಾಗಬೇಕು. ಇಲ್ಲಿ ಎಲ್ಲ ಸಮುದಾಯದವರು ಒಂದಾಗಬೇಕು. ಲಿಂಗಾಯತ ಅಭಿವೃದ್ಧಿ , ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ, ಗಂಗಾ ಕಲ್ಯಾಣ ಯೋಜನೆ ಜಾರಿಗೊಳಿಸಿದ್ದೇವೆ. ಈ ಬಾರಿ ಬಿಜೆಪಿ ಗೆಲ್ಲಿಸಬೇಕು ಎಂದರು.