ಸುದ್ದಿಮೂಲ ವಾರ್ತೆ
ಮಂಡ್ಯ, ಅ. 31 ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಜವಾಬ್ದಾರಿ ಅತ್ಯಂತ ಸೂಕ್ಷ್ಮ ಹಾಗು ಪ್ರಮುಖವಾದದ್ದು ಎಂದು ಕೃಷಿ ಸಚಿವರಾದ ಎನ್ .ಚಲುವರಾಯಸ್ವಾಮಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಂಡ್ಯ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಏಳು ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಅಂತರ ಜಿಲ್ಲಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ದೇಶದ ಹಿತ ಕಾಪಾಡುವ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರ ಪ್ರಮುಖವಾದದ್ದು.ಹಾಗಾಗಿ, ಮಾಧ್ಯಮ ವರದಿಗಳು ಎಂದಿಗೂ ಪೂರ್ವಗ್ರಹ ಪೀಡಿತವಾಗಿರಬಾರದು. ಪಕ್ಷಪಾತದಿಂದ ಕೂಡಿರಬಾರದು ಎಂದರು.
ಪತ್ರಿಕಾ ರಂಗ ಇದೀಗ ಉದ್ಯಮವಾಗಿ ಬದಲಾಗಿದೆ. ಒಳ್ಳೆಯ ವಿಚಾರಗಳಿಗಿಂತ ನಕಾರಾತ್ಮಕ ಸುದ್ದಿಗೆ ಆದ್ಯತೆ ಹೆಚ್ಚಿದೆ. ಮಾಧ್ಯಮಗಳು ವಿವೇಚನೆಯಿಂದ ಕೆಲದ ಮಾಡಬೇಕಿದೆ. ಮಾಧ್ಯಮಗಳು ಸತ್ಯದ ಪರ, ವ್ಯವಸ್ಥೆಯ ಪರ, ಜನಪರ ಕಾಳಜಿಯ ಪರ, ನೊಂದವರ ಪರ ಕೆಲಸ ಮಾಡಬೇಕಿದೆ ಎಂದು ಸಚಿವರು ಕರೆ ನೀಡಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮದ ಜವಾಬ್ದಾರಿ, ಮಹತ್ವ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಬಗ್ಗೆ ವಿವರಿಸಿದರು.
ಅಂತರ ಜಿಲ್ಲಾ ಪತ್ರಕರ್ತರ ಸಮಾವೇಶದಲ್ಲಿ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲನಂದನಾಥ ಸ್ವಾಮಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಾಸಕ ರವಿಕುಮಾರ್ ಗೌಡ, ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮದ್ದೂರು ಶಾಸಕ ಉದಯ್ ಗೌಡ, ವಿಧಾನಪರಿಷತ್ ಸದಸ್ಯರಾದ, ಮರಿತಿಬ್ಬೇಗೌಡ, ಮಧು ಮಾದೇಗೌಡ, ದಿನೇಶ್ ಗೂಳಿಗೌಡ, ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಶಿವನಂದ ತಗಡೂರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಪ್ರಭಾಕರ್ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.
ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ತುಮಕೂರು, ಹಾಗು ರಾಮನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.