ಸುದ್ದಿಮೂಲ ವಾರ್ತೆ
ಬೆಂಗಳೂರು,ನ.01: ಸರ್ವರಿಗೂ ಗುಣಮಟ್ಟದ ಶಿಕ್ಷಣ ನಮ್ಮ ಸರ್ಕಾರದ ಆದ್ಯತೆಯಾಗಿದೆ.ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಂದಿನಿಂದಲೇ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ಕುಡಿಯುವ ನೀರು ಸೌಕರ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಇಲ್ಲಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಸರ್ಕಾರ ಹಾಗೂ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 68 ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ರಾಷ್ಟ್ರ ಹಾಗೂ ನಾಡಧ್ವಜಾರೋಹಣ ನೆರವೇರಿಸಿ ,ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪೌಷ್ಟಿಕತೆ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ರಮ ಮುಂದುವರೆಸಲಾಗುವುದು.
ಕೇಂದ್ರ ಸರ್ಕಾರ ಇಂದಿಗೂ ಕೂಡ ಹಿಂದಿ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಮಾತ್ರ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತಿದೆ.ವಿದ್ಯಾರ್ಥಿಗಳಿಗೆ ಸ್ಥಳೀಯ ಮಾತೃ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಬೇಕು.ಈ ಕುರಿತು ಪ್ರಧಾನಮಂತ್ರಿಯವರಿಗೆ ಪತ್ರ ಬರೆಯುತ್ತೇನೆ ಎಂದರು.
ಕನ್ನಡವು ಉದ್ಯೋಗ, ಅನ್ನ ನೀಡುವ ಭಾಷೆಯಾಗಬೇಕು.ಅನೇಕ ವಿಜ್ಞಾನಿಗಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಉನ್ನತ ಸಾಧನೆ ಮಾಡಿದ ಸಾಕಷ್ಟು ಉದಾಹರಣೆಗಳಿವೆ.ಪೋಷಕರು ಆಂಗ್ಲ ಮಾಧ್ಯಮ ವ್ಯಾಮೋಹ ಕಡಿಮೆ ಮಾಡಿಕೊಳ್ಳಬೇಕು.ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪಣ ತೊಡಬೇಕು.ಗುಣಮಟ್ಟದ ಉತ್ತಮ ಶಿಕ್ಷಣ ಒದಗಿಸಲು ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಸುಧಾರಣೆ ತರಲು ಶ್ರಮಿಸಲಾಗುತ್ತಿದೆ .ಕನಿಷ್ಠ ಪಕ್ಷ ಎಸ್ಎಸ್ಎಲ್ಸಿಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಮಕ್ಕಳಿಗೆ ಸಿಗಬೇಕು.
ವರ್ಷವಿಡೀ ಕರ್ನಾಟಕ ಸಂಭ್ರಮಾಚರಣೆ
1956 ರಲ್ಲಿ ವಿಶಾಲ ಮೈಸೂರು ರಾಜ್ಯದಡಿ ಕನ್ನಡ ಭಾಷಿಕ ಪ್ರದೇಶಗಳೆಲ್ಲಾ ಏಕೀಕರಣಗೊಂಡವು.1973 ರ ನ.1 ರಂದು ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಿದರು.ಕರ್ನಾಟಕ ಎಂದು ಹೆಸರಾಗಿ 50 ವರ್ಷಗಳಾಗಿವೆ.ಕರ್ನಾಟಕ ಸಂಭ್ರಮ ಹೆಸರಿನಲ್ಲಿ ನಾಡಿನ ಕಲೆ,ಇತಿಹಾಸ,ಜನಪದ,ಸಂಸ್ಕೃತಿ ,ಪರಂಪರೆ ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದಾದ್ಯಂತ ಹಮ್ಮಿಕೊಂಡಿದ್ದೇವೆ.ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ವರ್ಷವಿಡೀ ಕರ್ನಾಟಕ ಸಂಭ್ರಮಾಚರಣೆಯನ್ನು ಬರುವ ಒಂದು ವರ್ಷದ ಅವಧಿಯುದ್ದಕ್ಕೂ ಸಂಭ್ರಮಾಚರಣೆ,ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.ಈ ಮೂಲಕ ಕನ್ನಡ ನಾಡಿನ ಪಾರಂಪರಿಕ ಶ್ರೀಮಂತಿಕೆಯನ್ನು ಬಿಂಬಿಸಲಾಗುವುದು ಎಂದರು.
ಪರಿಣಾಮಕಾರಿ ಆಡಳಿತಕ್ಕೆ ಕನ್ನಡವೇ ಮದ್ದು
ಆಡಳಿತವು ಪರಿಣಾಮಕಾರಿಯಾಗಿ ಜನರನ್ನು ತಲುಪಲು ಜನಸಾಮಾನ್ಯರ ಮಾತೃಭಾಷೆಯಲ್ಲಿ ಆಡಳಿತ ನಿರ್ವಹಣೆಯಾಗಬೇಕು.ಕೇವಲ ಘೋಷಣೆಗಳಿಂದ ಆಡಳಿತ ಭಾಷೆ ಜಾರಿಯಾಗಲು ಸಾಧ್ಯವಿಲ್ಲ. ಪರಿಣಾಮಕಾರಿಯಾಗಿ ವ್ಯವಹರಿಸಿದಾಗ ಮಾತ್ರ ಉತ್ತಮ ಆಡಳಿತ ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯದೊಳಗಿನ ಎಲ್ಲ ವ್ಯವಹಾರಗಳನ್ನು ಕನ್ನಡದಲ್ಲಿ ನಿರ್ವಹಿಸಲು ಸೂಚಿಸಲಾಗಿದೆ.ಕೇಂದ್ರ ಮತ್ತು ಹೊರರಾಜ್ಯಗಳ ಸಮನ್ವಯಕ್ಕೆ ಇತರೆ ಭಾಷೆಗಳನ್ನು ಬಳಸಬಹುದು ಎಂದರು.
ನಾವೆಲ್ಲ ಕನ್ನಡ ಭಾಷೆಯಲ್ಲಿ ಮಾತ್ರ ವ್ಯವಹರಿಸುತ್ತೇವೆ ಅನ್ಯ ಭಾಷೆಗಳಲ್ಲಿ ವ್ಯವಹರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕಾಗಿದೆ.ಪ್ರತಿಯೊಬ್ಬ ಕನ್ನಡಿಗನೂ ಕೂಡ ತಾಯಿನಾಡು,ನೆಲದ ಋಣ ತೀರಿಸಬೇಕಾದರೆ,ನೆಲ-ಜಲ-ಭಾಷೆ-ಸಂಸ್ಕೃತಿ ಎತ್ತಿ ಹಿಡಿದು ಅಭಿಮಾನ ಮೆರೆಯಬೇಕು.ನೆರೆಯ ರಾಜ್ಯಗಳಂತೆ ಅಷ್ಟೊಂದು ಪ್ರಮಾಣದಲ್ಲಿ ಭಾಷಾ ಅಭಿಮಾನ ಇರದಿದ್ದರೂ ,ಇತರೆ ಭಾಷೆಗಳ ವ್ಯವಹಾರಗಳ ಬಗೆಗೆ ಬಹಳ ಧಾರಾಳತನ ಇರಬಾರದು.ತಮಿಳುನಾಡಿನಲ್ಲಿ ತಮಿಳು ಮಾತನಾಡದೇ ಬದುಕಲು ಸಾಧ್ಯವಿಲ್ಲ.ಆದರೆ ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡದೇ ಬದುಕಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ, ಇದು ಬದಲಾಗಬೇಕು.ಇತರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ ಆದರೆ ಕನ್ನಡ ಭಾಷೆ ಮರೆಯುವುದು,ನಿರ್ಲಕ್ಷಿಸುವುದು ಅಕ್ಷಮ್ಯ ಎಂದರು.
ಭವ್ಯ ಕರ್ನಾಟಕ ನಿರ್ಮಾಣಕ್ಕಾಗಿ ನಾವು ನುಡಿದಂತೆ ನಡೆಯುತ್ತಿದ್ದೇವೆ.ಗೃಹಜ್ಯೋತಿ,ಗೃಹಲಕ್ಷ್ಮಿ,ಶಕ್ತಿ,ಅನ್ನಭಾಗ್ಯ ,ಯುವನಿಧಿ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿ, ಕನ್ನಡ-ಕನ್ನಡಿಗ-ಕರ್ನಾಟಕ ನಮ್ಮ ಹೃದಯದ ಹಾಗೂ ಮನದಾಳದ ಮಿಡಿತವಾಗಬೇಕು.
ತುಂಗೆ,ಭದ್ರೆ,ಕಾವೇರಿ,ಕೃಷ್ಣೆಯರು ಹರಿಯುವ ಈ ನಾಡು ಪವಿತ್ರ ಭೂಮಿಯಾಗಿದೆ.2 ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ನಾಡನ್ನು ಮರೆತರೆ ,ನಾವು ನಮ್ಮ ಹೆತ್ತ ತಾಯಿಯನ್ನು ಮರೆತಂತೆ ಎಂದು ಎಚ್ಚರಿಸಿದರು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ನೆನೆಯಬೇಕು ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಮಾತನಾಡಿ, ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ಖಾಲಿ ಇರುವ ಸುಮಾರು 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.ಉಳಿದ ಖಾಲಿ ಹುದ್ದೆಗಳ ಭರ್ತಿಗೂ ಸರ್ಕಾರ ಕ್ರಮವಹಿಸುತ್ತಿದೆ.ಸುಮಾರು 8311 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ.ರಾಜ್ಯದಲ್ಲಿ 2000 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣದ ಗುರಿ ಹೊಂದಲಾಗಿದ್ದು ಪ್ರಸಕ್ತ ಸಾಲಿನಲ್ಲಿ 600 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು.ಸಸ್ಯಶಾಮಲ ಕಾರ್ಯಕ್ರಮದಡಿ 50 ಲಕ್ಷ ಸಸಿಗಳನ್ನು ಶಾಲೆಗಳ ಆವರಣದಲ್ಲಿ ನೆಡಲಾಗುತ್ತಿದೆ.ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಮಕ್ಕಳ ಕ್ಷಮತೆ ಹೆಚ್ಚಿಸಲು ಮುಖ್ಯ ಪರೀಕ್ಷೆಗರ ಮುನ್ನ ಮೂರು ಬಾರಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿ ಸಿದ್ಧಗೊಳಿಸಲಾಗುತ್ತಿದೆ.ಗುಣಮಟ್ಟದ ಶಿಕ್ಷಣ ಸರ್ಕಾರದ ಧ್ಯೇಯವಾಗಿದೆ.ಜೊತೆಗೆ ಉದಾತ್ತ ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಶಾಸಕ ರಿಜ್ವಾನ್ ಅರ್ಷದ್ ಸಮಾರಂಭದ ಅಧ್ಯಕ್ಷತೆ ವಹಿಸಿ,ಮಾತನಾಡಿ ಕನ್ನಡ ನಾಡಿನ ಅಸ್ಮಿತೆ ಬಿಂಬಿಸುವ ನಮ್ಮದೇ ಆದ ಕರ್ನಾಟಕದ ಧ್ವಜಕ್ಕೆ ಕೇಂದ್ರ ಸರ್ಕಾರದ ಅಧಿಕೃತ ಮಾನ್ಯತೆ ದೊರೆಯಬೇಕು.ಇದು ಸಮಸ್ತ ಕನ್ನಡಿಗರ ಅಭಿಮಾನ ,ಹೆಮ್ಮೆಯನ್ನು ಸಾರುವ ಸಂಗತಿಯಾಗಿದೆ .ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ಸಿ) ಹಾಗೂ ಕೇಂದ್ರ ಸರ್ಕಾರದ ಅರೆಸೇನಾ ಪಡೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಅವಕಾಶ ಕಲ್ಪಿಸಬೇಕು ಎಂದರು.
ಅತ್ಯುತ್ತಮ ಶಾಲಾ ಪ್ರಶಸ್ತಿ ಪ್ರದಾನ
ಇದೇ ಸಂದರ್ಭದಲ್ಲಿ ಉತ್ತಮ ಸರ್ಕಾರಿ ಶಾಲೆಗಳಾದ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ನಿಂಬಳಗೆರೆ ಗ್ರಾಮದ ಬಿಕೆವಿ ಸರ್ಕಾರಿ ಪ್ರೌಢಶಾಲೆ ಹಾಗೂ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮಲೆನಾಡ ಗಾಂಧಿ ಹಾಗೂ ಮಾಜಿಶಿಕ್ಷಣ ಸಚಿವರಾದ ದಿ.ಹೆಚ್.ಜಿ.ಗೋವಿಂದೇಗೌಡ ಸ್ಮರಣಾರ್ಥ ಅತ್ಯುತ್ತಮ ಶಾಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು, ರಾಜ್ಯಸಭಾ ಸದಸ್ಯ ಲೆಹರ್ಸಿಂಗ್ ಶಾಸಕರಾದ ಆರ್.ವಿ.ದೇಶಪಾಂಡೆ,ಎನ್. ಎ.ಹ್ಯಾರಿಸ್, ಎ.ದೇವೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ಕುಮಾರ್ ಮತ್ತಿತರ ಗಣ್ಯರು,ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ವೇದಿಕೆಯಲ್ಲಿದ್ದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸ್ವಾಗತಿಸಿದರು, ಆಯುಕ್ತೆ ಬಿ.ಬಿ.ಕಾವೇರಿ ವಂದಿಸಿದರು.
ಕನ್ನಡ ನಾಡು,ನುಡಿ,ಸಂಸ್ಕೃತಿ ಹಾಗೂ ಇಲಾಖಾ ಪ್ರೋತ್ಸಾಹಕ ಯೋಜನೆಗಳನ್ನು ಪ್ರತಿಬಿಂಬಿಸುವ ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.ವಿವಿಧ ಶಾಲಾ-ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕನ್ನಡ ನಾಡಗೀತೆಗಳ ಗಾಯನ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಆಕರ್ಷಕ ಪಥಸಂಚಲನ
ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಪಥಸಂಚಲನದಲ್ಲಿ ಭಾಗವಹಿಸಿದ ತಂಡಗಳು:
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ,ವೆಂಕಟಪುರ,ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೊರಣುಸೆ, ತಿಲಕ್ ಮೆಮೋರಿಯಲ್ ಶಾಲೆ, ಚಾಮರಾಜಪೇಟೆ ಬಾಲಕೀಯರ ಪ್ರೌಢಶಾಲೆ, ಕೆಪಿಎಸ್ ಸಾರಕ್ಕಿ, ಜಿಜೆಸಿ ಕಾಡುಗೋಡಿ, ಕೈರಾಳಿ ನಿಲಯಂ,ಸಿ ಶಾಲೆ ಕೆ.ಆರ್.ಪುರಂ,ಕೆಂಗೇರಿ ಎಜ್ಯುಕೇಶನ್ ಟ್ರಸ್ಟ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ಆರ್.ಟಿ.ನಗರ ಪಬ್ಲಿಕ್ ಸ್ಕೂಲ್, ನ್ಯೂ ಕೆಂಬ್ರಿಡ್ಜ್ ಶಾಲೆ ಆರ್.ಪಿ.ಸಿ.ಲೇಔಟ್, ನವಭಾರತ ನಿರ್ಮಾಣ ವಿದ್ಯಾಮಂದಿರ,ವೀವರ್ಸ್ ಕಾಲೋನಿ ಶಾಲೆಗಳ ತಂಡಗಳಿಂದ ಆಕರ್ಷಕ ಪಥಸಂಚಲನ ಜರುಗಿತು.