ಬೆಂಗಳೂರು, ಆ.15: ಬೆಂಗಳೂರಿನಿಂದ ಹೊರಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಉತ್ತೇಜನ ನೀಡಲು ಮತ್ತು ಸುಸ್ಥಿರ ಬುದುಕು ರೂಪಿಸಲು ನಮ್ಮ ಸರ್ಕಾರ ಯೋಜನೆಗಳನ್ನು ರೂಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸರ್ಕಾರದಿಂದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ನಾಡಿನ ಜನರನ್ನು ಉದ್ದೇಶಿಸಿ ಮಾತನಾಡಿದರು.
ಮಿಲಿಯನ್ ಪ್ಲಸ್ ನಗರಗಳೆಂದು ಗುರುತಿಸಲಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಮತ್ತು ಬಳ್ಳಾರಿ ನಗರಗಳ ಉಪನಗರಗಳಾಗಿ ಕೈಗಾರಿಕಾ ಟೌನ್ಶಿಪ್ಗಳನ್ನು ಅಭಿವೃದ್ಧಿಪಡಿಸಲಿದೆ. ಕೈಗಾರಿಕೆಗಳ ಸ್ಥಾಪನೆಯನ್ನು ಕೇಂದ್ರವಾಗಿಸಿಕೊಂಡ ಈ ಉಪನಗರಗಳು ಸುಸ್ಥಿರತೆಯನ್ನು ಹೊಂದಿದ್ದು, ನಾಗರಿಕ ಸೌಲಭ್ಯಗಳು, ಶಾಲೆ, ಆರೋಗ್ಯ ಸೇವಾ ಸೌಲಭ್ಯಗಳನ್ನು ಸ್ಥಳೀಯವಾಗಿಯೇ ಒದಗಿಸಲಾಗುವುದು ಎಂದು ಹೇಳಿದರು.
ರಸ್ತೆ, ವಿಮಾನ ನಿಲ್ದಾಣ ಹಾಗೂ ಬಂದರುಗಳ ಅಭಿವೃದ್ಧಿಗೂ ಆಯವ್ಯಯದಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳು ಹಾಗೂ ಪ್ರಗತಿಯಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳು, ಅಂತರರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆಗಳು ಮತ್ತು ಪ್ರವಾಸಿ ತಾಣಗಳ ರಸ್ತೆಗಳನ್ನು ಗುರುತಿಸಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಹೈಬ್ರಿಡ್ ಅನ್ಯೂಟಿ ಮಾಡೆಲ್ನಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಜನೆ ಮಾಡಲು ಹಾಗೂ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಮಾಡಲು ಕೃಷಿ ಸಂಸ್ಕರಣೆ ಉದ್ಯಮಗಳ ಸ್ಥಾಪನೆಗೆ ಬೆಂಬಲ ನೀಡಲಾಗುವುದು. ಇದರಿಂದ ರೈತರ ಆದಾಯ ಹೆಚ್ಚುವುದಲ್ಲದೆ ಗ್ರಾಮೀಣ ಪ್ರದೇಶದ ಬೆಳವಣಿಗೆಗೆ ನೆರವಾಗಲಿದೆ.
ನಮ್ಮ 5 ವರ್ಷಗಳ ಅವಧಿಯಲ್ಲಿ ಅಗತ್ಯ ಇರುವವರಿಗೆ ಸೂರು ನೀಡಲು ಯೋಜಿಸಿದ್ದೇವೆ. ಸರ್ಕಾರಿ ಬಸ್ಸುಗಳ ಟ್ರ್ಯಾಕಿಂಗ್ ವ್ಯವಸ್ಥೆ, ಪ್ಯಾನಿಕ್ ಬಟನ್ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದ್ದೇವೆ. ಅಗತ್ಯ ಇರುವೆಡೆ ಹೊಸ ಬಸ್ಸುಗಳನ್ನು ಒದಗಿಸಲು ಸಿದ್ಧರಿದ್ದೇವೆ. ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿದ್ದೇವೆ.
ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಾರ್ವಜನಿಕರಿಗೆ ಸುಸಜ್ಜಿತ ಬಡಾವಣೆಯಲ್ಲಿ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಒದಗಿಸಲು ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಬಳ್ಳಾರಿ, ಕಲಬುರಗಿ, ಮಂಗಳೂರು ಮತ್ತು ಬೆಳಗಾವಿಯಲ್ಲಿ ವಸತಿ ಬಡಾವಣೆ ಯೋಜನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಭ್ರಷ್ಟಾಚಾರ ನಿವಾರಿಸುತ್ತೇವೆ:
ಭ್ರಷ್ಟಾಚಾರವು ಸಾಂಸ್ಥೀಕರಣಗೊಳ್ಳುವ ಮಟ್ಟಿಗೆ ಬೆಳೆದಿದೆ. ಇದನ್ನು ಹಂತ ಹಂತವಾಗಿ ನಿವಾರಿಸುವ ಕೆಲಸ ಮಾಡಲು ಪಣತೊಟ್ಟಿದ್ದೇವೆ. ಈ ಹಿಂದೆ ನಡೆದಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ಆದೇಶಗಳನ್ನು ಹೊರಡಿಸಿದೆ. ತಪ್ಪಿತಸ್ಥರ ವಿರುದ್ಧ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ದೃಢ ನಿಲುವು ತಾಳಿದೆ ಎಂದು ಹೇಳಿದರು.
ನಾವು ನಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಇದೇ ವ್ಯವಸ್ಥೆಯನ್ನೇ ಬಳಸುತ್ತಿದ್ದೇವೆ. ವರ್ಷಕ್ಕೆ 50 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, ನಯಾಪೈಸೆಯಷ್ಟು ಭ್ರಷ್ಟಾಚಾರದ ಸೋಂಕು ಇಲ್ಲದೆ ನೇರವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಇಂದು ನಾವು ವಿಲಕ್ಷಣವಾದ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಆಧುನಿಕ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆಯು (AI) ಮನುಷ್ಯರ ಘನತೆಯನ್ನು ಕುಗ್ಗಿಸದಂತೆ, ಅವರ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳದಂತೆ ಮಾಡಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ನಾವು ಕಾರ್ಯಯೋಜನೆಯನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.
ಅನೈತಿಕ ದಬ್ಬಾಳಿಕೆ ಸಹಿಸುವುದಿಲ್ಲ:
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು-ಸುದ್ದಿ ಹರಡುವ, ಸಾಮರಸ್ಯ ಕದಡುವ ಯತ್ನ ಮತ್ತು ‘ಮತೀಯ ಗೂಂಡಾಗಿರಿ ಅಥವಾ ನೈತಿಕ ಪೊಲೀಸ್ ಗಿರಿʼ ಹೆಸರಿನಲ್ಲಿ ನಡೆಯುವ ಅನೈತಿಕ ದಬ್ಬಾಳಿಕೆಯನ್ನು ನಮ್ಮ ಸರ್ಕಾರ ಖಂಡಿತ ಸಹಿಸುವುದಿಲ್ಲ. ನಾಡ ಜನರು, ವಿಶೇಷವಾಗಿ ಯುವಜನರು ಇಂತಹ ವಿಚ್ಛಿದ್ರಕಾರಿ ಶಕ್ತಿಗಳ ಪ್ರಚೋದನೆಗೆ ಒಳಗಾಗದೆ ಸಾಮರಸ್ಯ, ಸಹಬಾಳ್ವೆಯ ಮಹತ್ವವನ್ನು ಎತ್ತಿ ಹಿಡಿಯಬೇಕೆಂದು ಮನವಿ ಮಾಡುತ್ತೇನೆ ಎಂದರು.
ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಸುಮಾರು 4 ಲಕ್ಷ ಕೋಟಿಗೂ ಹೆಚ್ಚಿನ ವಿವಿಧ ತೆರಿಗೆಗಳನ್ನು ಕೇಂದ್ರಕ್ಕೆ ಪಾವತಿಸುತ್ತಿದೆ. ಅದರೆ ನಮಗೆ ವಾಪಸ್ಸು ಬರುತ್ತಿರುವುದು 50 ಸಾವಿರ ಕೋಟಿ ರೂ. ಮಾತ್ರ. ನಮಗೆ ನ್ಯಾಯಯುತವಾಗಿ ಬರಬೇಕಾದಷ್ಟು ಸಂಪನ್ಮೂಲಗಳು ಕೇಂದ್ರದಿಂದ ಮರಳಿ ಬಂದರೆ ರಾಜ್ಯವು ಅತ್ಯಂತ ಶ್ರೀಮಂತ ರಾಜ್ಯವಾಗುವುದು. ಇಷ್ಟರ ನಡುವೆಯೂ ನಾವು ಆರ್ಥಿಕ ಶಿಸ್ತನ್ನು ಸರಿಯಾಗಿ ಪಾಲಿಸುತ್ತಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ನೈಜ ದೇಶಪ್ರೇಮಿಗಳಿಗೆ ಇದು ಅರ್ಥವಾಗುತ್ತದೆ ಎಂದರು.
ಬಿಜೆಪಿಗೆ ಕುಟುಕಿದ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯೋತ್ಸವ ಭಾಷಣದ ವೇಳೆಯೂ ಬಿಜೆಪಿಗೆ ಕಟುಕುವುದನ್ನು ಮರೆಯಲಿಲ್ಲ.
ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ನಮ್ಮ ಜನರಿಗೆ ಅರ್ಥವಾಗಿರುವುದರಿಂದ ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಜನರೇ ಸಾಬೀತು ಮಾಡಿದ್ದಾರೆ. ಕರ್ನಾಟಕದ ಜನರು ಒಡೆದಾಳುವವರ ವಿರುದ್ಧ ನಿಂತಿದ್ದಾರೆ. ಇವನಾರವನೆನ್ನದೆ ಒಳಗೊಂಡು ಆಡಳಿತ ಮಾಡುವ ನಮ್ಮನ್ನು ಆರಿಸಿದ್ದಾರೆ. ಈ ಸ್ವಾತಂತ್ರ್ಯ ದಿನದಂದು ನಾನು ನೀಡುವ ಭರವಸೆಯಲ್ಲಿ ಬಹಳ ಮುಖ್ಯವಾದುದು ಈ ಒಳಗೊಂಡು ಬಾಳುವ, ಎಲ್ಲರ ಅಭಿವೃದ್ಧಿಯನ್ನು ಬಯಸುವ ಕರ್ನಾಟಕದ ಹೊಸ ಮಾದರಿಗಳನ್ನು ಪ್ರಬಲಗೊಳಿಸುವ ಭರವಸೆಯೇ ಆಗಿದೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ ರಸ್ತೆ ಸಂಪರ್ಕ
ಹುಮನಾಬಾದ್-ಕಲಬುರಗಿ ಮತ್ತು ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿ ನಡುವೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಎಕ್ಸಪ್ರೆಸ್-ವೇ ನಿರ್ಮಿಸುವ ಮೂಲಕ ಕಲ್ಯಾಣ ಕರ್ನಾಟಕ ಮತ್ತು ಬೆಂಗಳೂರು ನಡುವಣ ರಸ್ತೆ ಸಂಪರ್ಕ ಇನ್ನಷ್ಟು ಉತ್ತಮ ಪಡಿಸಲಾಗುವುದು.
ನಮ್ಮ ಸರ್ಕಾರವು ಪ್ರಾದೇಶಿಕ ಅಸಮಾನತೆ ನಿವಾರಿಸಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಪುನರುಚ್ಛರಿಸಿದರು.