ಚಿಕ್ಕಬಳ್ಳಾಪುರ: ಯುವಜನರಿಗೆ ಆಧುನಿಕ ಉದ್ಯೋಗಗಳಿಗೆ ಬೇಕಾದ ಕೌಶಲಗಳನ್ನು ಕಲಿಸಲು ಸರಕಾರ ಗುಣಮಟ್ಟದ ಶಿಕ್ಷಣಕ್ಕೆ ಸಂಕಲ್ಪ ಮಾಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಐಟಿಐ ಮತ್ತು ಪಾಲಿಟೆಕ್ನಿಕ್ ಶಿಕ್ಷಣಗಳನ್ನು ಸಮಗ್ರವಾಗಿ ಉನ್ನತೀಕರಿಸಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ರಾಜ್ಯ ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಕೌಶಲ್ಯಾಭಿವೃದ್ಧಿ ನಿಗಮಗಳು ಡಾ.ಕೆ ಸುಧಾಕರ್ ಪ್ರತಿಷ್ಠಾನದ ಜತೆಗೂಡಿ ಇಲ್ಲಿನ ಎಸ್.ಜೆ.ಸಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ಉದ್ಯೋಗ ಮೇಳವನ್ನು ಏರ್ಪಡಿಸಿದ್ದವು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಆಸಕ್ತಿಯಿಂದಾಗಿ ಇಂದು ಪಾಲಿಟೆಕ್ನಿಕ್ ಕೋರ್ಸಿಗೆ ಭಾರೀ ಬೇಡಿಕೆ ಬಂದಿದೆ. ಜತೆಗೆ ಟಾಟಾ ಸಮೂಹದ ನೆರವಿನೊಂದಿಗೆ 150 ಸರಕಾರಿ ಐಟಿಐಗಳನ್ನು ವಿಶ್ವ ಮಟ್ಟಕ್ಕೆ ಉನ್ನತೀಕರಿಸಲಾಗಿದೆ ಎಂದು ಅವರು ವಿವರಿಸಿದರು.
ಸ್ವಾಮಿ ವಿವೇಕಾನಂದರು ಕಂಡ ಸ್ವಾವಲಂಬಿ ಭಾರತ ಈಗ ಕಂಡುಬರುತ್ತಿದೆ. ರಾಜ್ಯದಲ್ಲಿ ಕೆಜಿಟಿಟಿಐ, ಜಿಟಿಟಿಸಿ ಸಂಸ್ಥೆಗಳು ಯುವಜನರಿಗೆ ಆಧುನಿಕ ಕೌಶಲಗಳನ್ನು ಕಲಿಸಿ ಕೊಡುತ್ತಿವೆ. ಹೀಗಾಗಿ ರಾಜ್ಯದಲ್ಲಿ ಇಂದು ಎರಡೂವರೆ ಲಕ್ಷ ವಿದ್ಯಾರ್ಥಿಗಳು ಮೂರು ವರ್ಷದ ಪಾಲಿಟೆಕ್ನಿಕ್ ಓದುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ದೇಶವು ಹಿಂದಿನ ಮೂರು ಕೈಗಾರಿಕಾ ಕ್ರಾಂತಿಗಳಿಂದ ವಂಚಿತವಾಗಿದೆ. ಆದರೆ ಈಗ ನಡೆಯುತ್ತಿರುವ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಡಾ.ಕೆ ಸುಧಾಕರ್ ಮಾತನಾಡಿ, “ಅಶ್ವತ್ಥ ನಾರಾಯಣ ಅವರು ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವರಾದ ಬಳಿಕ ಹೊಸತನ ಮೂಡಿದೆ. ಇಂದಿನ ಉದ್ಯೋಗ ಮೇಳದಲ್ಲಿ ಒಟ್ಟು 4,100ಕ್ಕೂ ಹೆಚ್ಚು ಯುವಜನರಿಗೆ ಉದ್ಯೋಗ ಸಿಕ್ಕಿದೆ” ಎಂದರು.
ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಟ್ಟು 135 ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಂಡಿವೆ. ಕಲಿಕೆ ಮತ್ತು ಕೌಶಲಗಳನ್ನು ಒಟ್ಟಾಗಿ ಕಲಿತು ಕೊಳ್ಳುವುದು ಈಗಿನ ತುರ್ತಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಾಗರಾಜ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.