ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಜು.11: ಚಿಕ್ಕಬಳ್ಳಾಪುರ ವಿಜನ್ ನ ಗ್ರೀನ್ ಅಂಡ್ ಕ್ಲೀನ್ ಪರಿಕಲ್ಪನೆಯ ಅಡಿ ಜಿಲ್ಲೆಯ ಎಲ್ಲ ನಗರಗಳಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರವೀಂದ್ರ ತಿಳಿಸಿದರು.
ಅವರು ಮಂಗಳವಾರ ಚಿಕ್ಕಬಳ್ಳಾಪುರ ನಗರದ ಬಿ.ಬಿ ರಸ್ತೆಯಲ್ಲಿನ ಇಕ್ಕೆಲಗಳಲ್ಲಿ ತ್ಯಾಜ್ಯವನ್ನು ತೆಗೆದು ಸ್ವಚ್ಚಗೊಳಿಸುವ ಮೂಲಕ ಗ್ರೀನ್ ಅಂಡ್ ಕ್ಲೀನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವ್ಯವಸ್ಥೆಯಡಿ ಲಭ್ಯವಿರುವ ಮಾನವ ಸಂಪನ್ಮೂಲ ಹಾಗೂ ಯಾಂತ್ರಿಕ ಸವಲತ್ತನ್ನು ಬಳಸಿಕೊಂಡು ಜಿಲ್ಲೆಯಾದ್ಯಂತ ನಗರಗಳಲ್ಲಿ ಪ್ರಮುಖ ರಸ್ತೆಗಳನ್ನು ಗುರುತಿಸಿ 2 ಕಿಲೋ ಮೀಟರ್ ಉದ್ದದ ರಸ್ತೆಯನ್ನು ಸ್ವಚ್ಚತೆಗೊಳಿಸಲಾಗಿದೆ. ಇದೇ ರೀತಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿನ ರಸ್ತೆಗಳನ್ನು ಸ್ವಚ್ಚತೆಯನ್ನು ಮಾಡಲಾಗಿದೆ. ಈ ಕಾರ್ಯ ಹೀಗೆ ಮುಂದುವರಿಯಲಿದೆ ಎಂದರು.
ಚರಂಡಿಗಳನ್ನು ಕಸದ ಬುಟ್ಟಿ ಮಾಡಬೇಡಿ
ನಗರ, ಗ್ರಾಮಗಳ ಸ್ಥಳೀಯಾಡಳಿತ ಸಂಸ್ಥೆಗಳ ತ್ಯಾಜ್ಯ ಸಂಗ್ರಹಣೆ ವಾಹನಗಳು ಬಂದಾಗ ತ್ಯಾಜ್ಯವನ್ನು ನೀಡಬೇಕು,ಯಾವುದೇ ಕಾರಣಕ್ಕೂ ನೀರು ಹೋಗಲಿಕ್ಕೆ ನಿರ್ಮಿಸಿರುವ ಚರಂಡಿಗಳಗೆ ಎಸೆದು ಕಸದ ಬುಟ್ಟಿಯಾಗಿಸಬಾರದು. ಇದರಿಂದ ವಾತಾವರಣ ಮಲಿನಗೊಂಡು ರೋಗ ರುಜಿನಗಳಿಗೆ ಕಾರಣವಾಗುತ್ತದೆ. ಜೊತೆಗೆ ಮಳೆನೀರು ಮುಂದೆ ಸಾಗದೆ ರಸ್ತೆಗಳಿಗೆ ನುಗ್ಗಿ ಅಪಘಾತ ಉಂಟಾಗುವ ಸಾಧ್ಯತೆಗಳು ಇರುತ್ತವೆ ಎಂದರು.
ಈ ಸಂಧರ್ಭದಲ್ಲಿ ನಗರಸಭೆಯ ಪೌರಾಯುಕ್ತ ಪಂಪಾಶ್ರೀ, ಇಂಜಿನಿಯರ್ ಉಮಾಕಾಂತ್, ಪೌರ ಕಾರ್ಮಿಕರು, ಸಾರ್ವಜನಿಕರು ಹಾಜರಿದ್ದರು.