ಸುದ್ದಿಮೂಲ ವಾರ್ತೆ
ಹೊಸಕೋಟೆ, ನ.15 : ಮಕ್ಕಳಲ್ಲಿ ಕ್ರಿಯಾತ್ಮಕ ಆಲೋಚನೆ ಹಾಗೂ ಸಾಮಾಜಿಕ ಕಳಕಳಿ ಹೆಚ್ಚಿರುತ್ತದೆ. ಇದನ್ನು ಪ್ರೌಢಶಾಲಾ ಮಕ್ಕಳು ಮತ್ತೊಮ್ಮೆ ಸಾಬೀತು ಪಡಿಸಿದ್ದು ಈ ಮೊದಲು ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತಿದ್ದರು. ಆದರೆ, ಈ ಬಾರಿ
ಗಂಡುಮಕ್ಕಳ ಸಂಖ್ಯೆಯೂ ಹೆಚ್ಚಿದ್ದು ಉತ್ತಮ ಬೆಳವಣಿಗೆ ಎಂದು ಓವಂ ಆಸ್ಪತ್ರೆ ಮಕ್ಕಳ ತಜ್ಞ ಹಾಗೂ ಯುವ ಸೇನ ಸಂಘಟನೆ ಮುಖ್ಯಸ್ಥ ಡಾ ಅಭಿಶೇಕ್ ತಿಳಿಸಿದರು.
ಹೊಸಕೋಟೆ ನಗರದ ಮಿಲೇನಿಯಂ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಓವಂ ಆಸ್ಪತ್ರೆ ಹಾಗೂ ಯುವ ಸೇನೆ ಸಂಘಟನೆವತಿಯಿಂದ ಯುವ 2023 ಕಾರ್ಯಕ್ರಮದಲ್ಲಿ “ಜಾಗತಿಕ ತಾಪಮಾನ”
ವಿಚಾರವಾಗಿ ಭಾಷಣ ಸ್ಪರ್ಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ತಾಲೂಕಿನ 9 ಪ್ರೌಡ ಶಾಲೆಯ 74
ವಿದ್ಯಾರ್ಥಿಗಳು ಭಾಗವಹಿಸಿದ್ದರು.
“ಯುವ 2023 – ಜಾಗತಿಕ ತಾಪಮಾನ ಹಾಗೂ ಅದರ ದುಷ್ಪರಿಣಾಮ ಹಾಗೂ ತಡೆಗಟ್ಟುವಿಕೆ” ವಿಚಾರವಾಗಿ ಭಾಷಣ ಸ್ಪರ್ದೆ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳಿಂದ 10 ಜನ ವಿದ್ಯಾರ್ಥಿನಿಯರು ಕನ್ನಡದಲ್ಲಿ ಭಾಷಣ ಹಾಗೂ 11 ವಿದ್ಯಾರ್ಥಿಗಳು ಆಂಗ್ಲ ಬಾಷೆಯಲ್ಲಿ ತಮ್ಮ ಬಾಷಣ ಪ್ರಸ್ತುತಪಡಿಸಿದರು.
ಇದರಲ್ಲಿ ಆಂಗ್ಲ ಭಾಷೆಯಲ್ಲಿ ಭಾಷಣ ಮಂಡಿಸಿ ಮೊದಲ ಸ್ಥಾನ ನಗರದ ಮಿಲೇನಿಯಂ ಶಾಲೆ ರೋಹಿತ್,ಎರಡನೆ ಸ್ಥಾನ ಓಂಶ್ರೀ ಶಾಲೆಯ ಜಾನ್ಸಿ ಹಾಗೂ ಕನ್ನಡ ಬಾಷೆಯಲ್ಲಿ ಭಾಷಣ ಮಂಡಿಸಿ ಮೊದಲ ಸ್ಥಾನ ಮಿಲೇನಿಯಂ ಪಬ್ಲಿಕ್ ಶಾಲೆಯ ರುಚಿತಾ, ದ್ವಿತೀಯ ಸ್ಥಾನದಲ್ಲಿ ಅನುಗ್ರಹ ಶಾಲೆಯ ಸಮನ್ವಿತಾರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯುವ ಸೇನಾ ಸಂಘಟನೆ ಸ್ಥಾಪಿಸಿ ಮಕ್ಕಳಲ್ಲಿನ ಆಸಕ್ತಿಯನ್ನು ಹಾಗು ಅವರ ಕನಸನ್ನು ಹೊರತೆಗೆಯುವ ಪ್ರಯತ್ನದ ಜೊತೆ ಪ್ರೋತ್ಸಾಹಿಸುವ ಕೆಲಸ ಮಾಡುತಿದ್ದು ಮುಂದಿನ ಪೀಳಿಗೆಗೆ ಸಹಕಾರಿಯಾಗಲಿದೆ ಎಂದರು.
ಸ್ಪರ್ಧೆಯಲ್ಲಿ ತೀರ್ಪುಗಾರರಾದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತಾಲೂಕು ಮಾಜಿ ಅಧ್ಯಕ್ಷ ಡಾ.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜಾಗತಿಕ ತಾಪಮಾನಕ್ಕೆ ಕಾರಣ ಹಾಗೂ ನಾವುಗಳು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಮಕ್ಕಳಲ್ಲಿನ ಕ್ರಿಯಾತ್ಮಕ ಆಲೋಚನೆಗಳನ್ನು ಹೊರತರುವ ಈ ಕಾರ್ಯಕ್ರಮ ತುಂಬಾ ಉಪಯುಕ್ತವಾದದ್ದು, ಭಾಷಣದಲ್ಲಿ ಇಂದಿನ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಕಾಣಬಹುದು ಎಂದರು.
ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ನುಸ್ರತ್ ಭಾನು ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಶಕ್ತಿ ಹೆಚ್ಚುವುದರ ಜೊತೆ ಉತ್ತಮ ಪ್ರತಿಕ್ರಿಯೆ ಪಡೆಯಬಹುದಾಗಿದೆ ಎಂದರು.
ತೀರ್ಪುಗಾರರಾದ ಪತ್ರಿಕಾ ವರದಿಗಾರ ಎಸ್. ಸಿ ಮಂಜುನಾಥ ಮಾತನಾಡಿ, ಓವಂ ಆಸ್ಪತ್ರೆ ಸಹಯೋಗದಲ್ಲಿ ತಾಲೂಕಿನ ಖಾಸಗಿ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಜ್ಞಾನ ಹಾಗೂ ಜವಾಬ್ದಾರಿ ಮೂಡಿಸಲು ಉತ್ತಮ ಸ್ಪರ್ಧಾ ಕಾರ್ಯಕ್ರಮವಾಗಿದ್ದು. ಸೋಲು ಗೆಲುವಿನ ಬಗ್ಗೆ ಯೋಚಿಸದೆ, ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದಲ್ಲಿ ಹೆಚ್ಚಿನ ಜ್ಞಾನ ಸಂಪಾದನೆ ಜೊತೆ ಸ್ಪರ್ಧಾತ್ಮಕ ಜಗತ್ತಿನ ಪರಿಚಯದ ಜೊತೆ ಸ್ಪರ್ಧೆ ಎದುರಿಸುವ ಬಗ್ಗೆ ತಿಳಿಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯುವಸೇನೆ ತಂಡದ ಸದಸ್ಯರುಗಳಾದ ವಿವೇಕ್, ವಿಶ್ವಾಸ್,ವಿಶಾಕ್, ಮಾಧುರಿ ಹಾಜರಿದ್ದರು.