ಸುದ್ದಿಮೂಲ ವಾರ್ತೆ
ಬಳ್ಳಾರಿ, ಏ. ೭: ಇತಿಹಾಸವನ್ನು ಅರ್ಥೈಸಿಕೊಂಡರೆ ಮಾತ್ರ ವಿದ್ಯಾರ್ಥಿಗಳಿಗೆ ಇತಿಹಾಸ ಸೃಷ್ಟಿಸುವ ಧೈರ್ಯ ಬರುತ್ತದೆ. ಪೂರ್ವ ಮತ್ತು ನಂತರದ ಇತಿಹಾಸವನ್ನು ತಿಳಿಸಿಕೊಟ್ಟಾಗ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಶಕ್ತಿಯುತರಾಗಿ ಬೆಳೆಯುವುದರ ಜೊತೆಗೆ ವಸ್ತು ವಿಷಯ ರೂಪಿಸುವರು ಎಂದು ಕಲಿ-ಕಲಿಸು ಕಲಾ ಅಂತರ್ಗತ ಯೋಜನೆಯ ಯೋಜನಾ ನಿರ್ದೇಶಕ ರಿಯಾಜ್ ಸಿಹಿಮೊಗೆ ಅವರು ಹೇಳಿದ್ದಾರೆ.
ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಬರ್ಟ್ ಬ್ರೂಸ್ಫ್ರೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯ ಇವರ ಸಂಯುಕ್ತಾಶ್ರಯದಲ್ಲಿ ಡಾ.ರಾಜ್ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯದಲ್ಲಿ ಜೈನ್ ಮಾರ್ಕೆಟ್ನ ಸರ್ಕಾರಿ ಹಿಂದಿ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಏರ್ಪಡಿಸಿದ್ದ ಕಲಾ ಅಂತರ್ಗತ ಕಲಿಕೆಯ ಅನುಸಂಧಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಸ್ತು ಸಂಗ್ರಹಾಲಯಗಳು ವಿಸ್ಮಯ ಮತ್ತು ಕುತೂಹಲ ಉಂಟು ಮಾಡುವಂತಹ ವಿಭಿನ್ನ ಜಗತ್ತಾಗಿದೆ. ವಿದ್ಯಾರ್ಥಿಗಳಿಗೆ ವಸ್ತುಸಂಗ್ರಹಾಲಯಗಳಲ್ಲಿ ಶೇಖರಿಸಿಡಲಾಗಿರುವ ಪಳೆಯುಳಿಕೆಗಳನ್ನು ಪರಿಚಯಿಸಿ ಕೊಡುವುದರ ಮೂಲಕ ಇತಿಹಾಸವನ್ನು ಪಠ್ಯದ ಮೂಲಕ ಕಲಿಯುವುದರ ಬದಲು ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಿ ಅವುಗಳನ್ನು ಅಧ್ಯಯನ ಮಾಡುತ್ತ ಕಲಿಯುವ ಒಂದು ವಿಶೇಷವಾದ ಕಲಿಕಾ ವಿಧಾನವಾಗಿದೆ ಎಂದರು.
ಐತಿಹಾಸಿಕವಾಗಿ ಮತ್ತು ಸಂಶೋಧನಾತ್ಮಕವಾಗಿ ಸಂಗನಕಲ್ಲು ಪಾರಂಪರಿಕ ಪ್ರದೇಶವಾಗುತ್ತದೆ. ಇದನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರ ಜೊತೆಗೆ ಇಲ್ಲಿನ ಪೂರ್ವೇತಿಹಾಸದ ಸಂಸ್ಕೃತಿ, ಆಹಾರ ಪದ್ಧತಿ, ಆಚರಣೆ, ಬದುಕಿನ ವಿಧಾನ, ಪ್ರಾಣಿ, ಪಕ್ಷಿ, ಆಟಿಕೆಗಳು ಮತ್ತು ವೈವಿಧ್ಯತೆಗಳನ್ನೆಲ್ಲ ವಸ್ತುಸಂಗ್ರಹಾಲಯಗಳ ಮೂಲಕ ಅರಿಯುವುದರ ಜೊತೆಗೆ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಕಲ್ಪನಾಶಕ್ತಿಯನ್ನು ಬೆಳೆಸಿ ಅವರ ಜ್ಞಾನವನ್ನು ವಸ್ತುಸಂಗ್ರಹಾಲಯಗಳ ವೀಕ್ಷಣೆ ಮತ್ತು ಅಧ್ಯಯನದ ಮೂಲಕ ಹೊಸ ಹುಡುಕಾಟಗಳೊಂದಿಗೆ ರೂಪಾಂತರಗೊಳಿಸಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳ ಆಲೋಚನಾ ಶಕ್ತಿ ಮತ್ತು ಕಲ್ಪನಾಶಕ್ತಿಯನ್ನು ಇಮ್ಮಡಿಗೊಳಿಸಿ ವಸ್ತುಸಂಗ್ರಹಾಲಯಗಳಲ್ಲಿ ಶೇಖರಿಸಿಟ್ಟಿರುವ ಪುರಾತನವಾದ ಪಳೆಯುಳಿಕೆಗಳನ್ನು ವಿದ್ಯಾರ್ಥಿಗಳು ಮುಟ್ಟಿ ಅದನ್ನು ಅನುಭವಿಸಿ ಅದರ ಮೂಲಕ ವಿದ್ಯಾರ್ಥಿಗಳ ಆಲೋಚನೆಗಳಿಗೆ ಪುಷ್ಟಿ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.
ರಾಬರ್ಟ್ ಬ್ರೂಸ್ ಫ್ರೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ಕಮಿಟಿ ಸದಸ್ಯ, ಪತ್ರಕರ್ತ ಎಂ. ಅಹಿರಾಜ್ ಅವರು ಮಾತನಾಡಿ, ಜಿಲ್ಲಾಡಳಿತ ಸಹಯೋಗದೊಂದಿಗೆ ಪ್ರಾಗೈತಿಹಾಸ ತಜ್ಞ ಪ್ರೊ.ರವಿ ಕೊರಿಶೆಟ್ಟರ್ ಅವರು ಜನರಿಗೆ, ಅದರಲ್ಲೂ ಮಕ್ಕಳಿಗೆ, ತಮ್ಮ ಇತಿಹಾಸ ಹಾಗೂ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ವಸ್ತುಸಂಗ್ರಹಾಲಯ ಸ್ಥಾಪಿಸಿದರು. ಇಂತಹ ಕಾರ್ಯಗಾರಗಳನ್ನು ಆಯೋಜಿಸುವ ಮೂಲಕ ವಸ್ತು ಸಂಗ್ರಹಾಲಯವು ತನ್ನ ಉದ್ದೇಶವನ್ನು ಸಾಧಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ವಿದ್ಯಾರ್ಥಿಗಳು ರಾಬರ್ಟ್ ಬ್ರೂಸ್ ಫ್ರೂಟ್ ವಸ್ತು ಸಂಗ್ರಹಾಲಯದಲ್ಲಿರುವ ಪ್ರಾಚೀನಯುಗದ ವಿವಿಧ ಮಡಿಕೆ ಮತ್ತು ಇತರೆ ಆಯುಧಗಳ ಪ್ರತಿರೂಪವಾಗಿ ಮಣ್ಣಿನಿಂದ ಸ್ವತಃ ತಾವೇ ತಯಾರಿಸಿ ನೋಡುಗರಿಗೆ ಪ್ರದರ್ಶನಕ್ಕಿರಿಸಲಾಗಿತ್ತು.
ರಾಬರ್ಟ್ ಬ್ರೂಸ್ ಫ್ರೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ತಾಂತ್ರಿಕ ಸಹಾಯಕಿ ಗೌರಿ, ಜೈನ್ ಮಾರ್ಕೆಟ್ನ ಸರ್ಕಾರಿ ಹಿಂದಿ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ರಘುರಾಂ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ನಾಗರಾಜ, ಸಹನಾ.ಪಿ ಸೇರಿದಂತೆ ಶಾಲಾ ಮಕ್ಕಳು, ಸಿಬ್ಬಂದಿಗಳು ಇದ್ದರು.