ಸುದ್ದಿಮೂಲ ವಾರ್ತೆ
ಆನೇಕಲ್,ನ.5 : ಸಾಂಸ್ಕೃತಿಕ ಉತ್ಸವಗಳು ದೇಶದ ಜನರನ್ನು ನೆಮ್ಮದಿಯ ಕಡೆಗೆ ಕೊಂಡುಯುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆದೂರು ಪ್ರಕಾಶ್ ತಿಳಿಸಿದರು.
ಸಮಂದೂರು ಪಂಚಾಯತಿಯ ಸಬ್ ಮಂಗಲ ಗೇಟ್ ಬಳಿಯಿರುವ ರಂಗಮಂದಿರದಲ್ಲಿ ಸಂಸ ಥಿಯೇಟರ್, ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಗತ್ತಿನ ಯಾವ ದೇಶದಲ್ಲಿ ಸಂಸ್ಕೃತಿ ಹಾಗೂ ವೈಚಾರಿಕತೆ ಬೆಳೆದಿದೆಯೊ ಆ ದೇಶ ಅಭಿವೃದ್ಧಿ ಹೊಂದುತ್ತದೆ. ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಕಥೆ, ಕವನ, ನೀತಿ ಪಾಠಗಳು ಕಣ್ಮರೆಯಾಗಿ ಬಣ್ಣದ ಪ್ರಪಂಚವನ್ನು ಸೃಷ್ಟಿಸುವ ಬೋಧನೆಗಳು ನಡೆಯುತ್ತಿರುವುದು ಮನುಷ್ಯನ ನೆಮ್ಮದಿಗೆ ಭಂಗಉಂಟು ಮಾಡಿದೆ ಎಂದರು.
ಯುವ ಸಾಹಿತಿ ಕಾಟಿ ಮುರಳಿ ಮಾತನಾಡಿ, ಮನುಷ್ಯ ಕೌಟುಂಬಿಕ ಜೀವನವನ್ನು ಪ್ರಾರಂಭಿಸಿದ ನಂತರ ಆನೇಕಲ್ ನಲ್ಲಿ ಸಿಲ್ಕ್ ರೂಟ್ ಹಾಗೂ ಕಬ್ಬಿಣದ ಉತ್ಪನ್ನವನ್ನು ಮಾಡಿದ್ದು ಇಂತಹ ಅಮೂಲ್ಯ ಇತಿಹಾಸ ಇರುವ ಆನೇಕಲ್ ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸಲು ಇಂತಹ ಸಾಂಸ್ಕೃತಿಕ ಉತ್ಸವಗಳು ನೆರವಾಗುತ್ತದೆ ಎಂದು ಹೇಳಿದರು.
ಜಾನಪದ ಗಾಯಕ ಸಿ.ಎಂ ನರಸಿಂಹಮೂರ್ತಿ ಮಾತನಾಡಿ, ಯುವ ಪೀಳಿಗೆ ಓದುವ ಸಂಸ್ಕೃತಿಯನ್ನು ಮರೆತು ಹಣದ ವ್ಯಾಮೋಹದಲ್ಲಿ ತಲ್ಲಿನರಾಗಿರುವುದು ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಇಂತಹ ಸಾಂಸ್ಕೃತಿಕ ಉತ್ಸವಗಳು ಪ್ರತಿ ಹಳ್ಳಿಯಲ್ಲಿ ನಡೆದು ಅದರ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟಾಗ ಸಮಾಜ ಉತ್ತಮ ರೀತಿಯಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಂಸ ಥಿಯೇಟರ್ ಸುರೇಶ್ ಮಾತನಾಡಿ, ಸರ್ಕಾರಗಳು ನಾಡಿನ ಸಂಸ್ಕೃತಿಯ ಬೆಳವಣಿಗೆಗೆ ಬೇಕಾಗುವಷ್ಟು ಅನುದಾನಗಳನ್ನು ಮೀಸಲಿಟ್ಟು ಗಡಿ ಗ್ರಾಮಗಳಲ್ಲಿ ಜನರಿಗೆ ಸಂಸ್ಕೃತಿ ಆಚಾರ ವಿಚಾರಗಳ ಜಾಗೃತಿಯನ್ನು ಕಾರ್ಯಕ್ರಮಗಳ ಮೂಲಕ ಮಾಡಲು ಮುಂದಾಗಿದೆ. ಯುವ ಪೀಳಿಗೆ ಇದನ್ನು ಬಳಸಿಕೊಂಡು ನೆಲ ಜಲ ಭಾಷೆಯ ವಿಚಾರವಾಗಿ ಕಾರ್ಯಕ್ರಮ ಗ್ರೂಪಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಬಲ ವಾದಕರಾದ ಎಲ್ಲಪ್ಪ ಎನ್.ಕೆ ಜಾನಪದ ಗಾಯಕರಾದ ನಾಗನಾಯಕನಹಳ್ಳಿ ರಾಜೇಶ್ ಕೆ ಎಸ್ ಮಂಜುನಾಥ್, ಕೀಬೋರ್ಡ್ ವಾದಕ ಪುಣ್ಯೇಶ್, ವಕೀಲರಾದ ಪುರುಷೋತ್ತಮ್ ಕನ್ನಯ್ಯ ಕುಮಾರ್ ಹಾಗೂ ಧಾತ್ರಿ ಕಲಾ ಸಂಸ್ಥೆಯ ಕಲಾವಿದರು ಹಾಜರಿದ್ದರು.