ಸುದ್ದಿಮೂಲ ವಾರ್ತೆ
ಮೈಸೂರು, ಸೆ.22: ಸುಪ್ರೀಂಕೋರ್ಟ್ನಿಂದಲೂ ಕಾವೇರಿ ಕೂಗಿಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವಡೆ ಕಾವೇರಿ ಹೋರಾಟ ತೀವ್ರಗೊಂಡಿದೆ.
ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದ ಸ್ವಾಮೀಜಿ ಶುಕ್ರವಾರ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿದರು.ಇದು ಕಾವೇರಿ ಹೋರಾಟದ ಕಿಚ್ಚಿನ ಕಾವನ್ನು ಹೆಚ್ಚಿಸಿದಂತಾಗಿದೆ. ಅಲ್ಲದೆ ಅಭಿಷೇಕ ಅಂಬರೀಷ್ ಅವರು ಕೂಡ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ರಕ್ತ ತಡೆ ನಡೆಸಿದರಲ್ಲದೇ, ಮೈಸೂರಿನಲ್ಲಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಟೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಆದೇಶ ನೀಡುವ ಮುನ್ನ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆಯುತ್ತಿರುವ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು, ಮಳೆ ಕಡಿಮೆ ಆದ ಸಂಧರ್ಭದಲ್ಲಿ ಸಂಕಷ್ಟ ಸೂತ್ರ ರಚಿಸಬೇಕಿತ್ತು. ಬೆಳೆ ಒಣಗುವುದು ಒಂದೆಡೆಯಾದರೆ, ಮತ್ತೊಂದು ಕಡೆ ಮನುಷ್ಯನೇ ಒಣಗಿ ಹೋಗುತ್ತಿದ್ದಾನೆ. ಮನುಷ್ಯನ ಅಸ್ಥಿತ್ವವೇ ಈಗ ಪ್ರಶ್ನೆ ಆಗಿದೆ. ನ್ಯಾಯಾಧೀಶರು ಆದೇಶ ನೀಡುವ ಮುನ್ನ ನಮ್ಮ ನೋವನ್ನು ಕೇಳಬೇಕಿತ್ತು ಎಂದು ಹೇಳಿದರು.
ಪ್ರತಿದಿನ 5 ಸಾವಿರ ಕ್ಯೂಸೆಕ್ ಹರಿಸಲಾಗಿದೆ. ಈಗ ಮತ್ತೆ 5 ಸಾವಿರ ಕ್ಯೂಸೆಕ್ 15 ದಿನ ಹರಿಸಲು ಸೂಚನೆ ನೀಡಿದ್ದಾರೆ. ಆದೇಶದಂತೆ ನೀರು ಹರಿದರೆ ಡ್ಯಾಂನಲ್ಲಿ ನೀರು ಉಳಿಯುವುದಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನ್ಯಾಯಾಲಯದಲ್ಲಿ ಸರಿಯಾಗಿ ಮನವರಿಕೆ ಮಾಡಬೇಕು. ನಮ್ಮ ರೈತರ ಹಿತ ಕಾಯಬೇಕು. ಈಗಿನ ಆದೇಶ ಪಾಲನೆ ಮಾಡಬೇಕು, ಪಾಲನೆ ಮಾಡಿದ್ರೆ ರೈತರ ಬದುಕು ಬೀದಿಗೆ ಬರಲಿದೆ. ಸದ್ಯ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹೇಳಿದರು.
ದೇವೇಗೌಡರು ಧುಮುಕಬೇಕು
ಅನ್ನದಾತರನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಇಂತಹ ಸಂಧರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಎಸ್ಎಂ ಕೃಷ್ಣ ಹೋರಾಟ ಬರಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಬೆಂಗಳೂರಿಗರ ವಿರುದ್ಧ ಆಕ್ರೋಶ
ಈ ಮಧ್ಯೆ ಕಾವೇರಿ ಪರ ಧ್ವನಿ ಎತ್ತದ ಬೆಂಗಳೂರಿಗರಿಗೆ ನೀರು ಹರಿಸಬೇಡಿ ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆ ಹಾಗೂ ಕಾವೇರಿ ಹೋರಾಟ ಸಮಿತಿಯು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿಕೆ ಹಳ್ಳಿಯ ನೀರು ಸಂಸ್ಕರಣಾ ಘಟಕದ ಬಳಿ ಪ್ರತಿಭಟನೆ ನಡೆಸಿತು ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಬಳಿ ಇರುವ ಪಂಪ್ ಹೌಸ್ ಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರು, ಕಾವೇರಿ ಪರ ಧ್ವನಿ ಎತ್ತದ ಬೆಂಗಳೂರಿಗರ ವಿರುದ್ದ ಕಿಡಿಕಾರಿದರು. ಬೆಂಗಳೂರು ಜನರಿಗೆ ಕಾವೇರಿ ನೀರು ಹರಿಸಬೇಡಿ. ಕಾವೇರಿ ನೀರು ಕುಡಿದು ಪ್ರತಿಭಟಿಸದವರಿಗೆ ನೀರು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.