ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ಅ.9: ಕಲ್ಯಾಣಿ, ಕೆರೆಕಟ್ಟೆಗಳನ್ನು ನಿರ್ಲಕ್ಷಿಸಿರುವ ಕಾರಣ ಅಂತರ್ಜಲಮಟ್ಟ ಕುಸಿಯುತ್ತಿದೆ. ಕೆರೆ, ಬಾವಿ, ಕಲ್ಯಾಣಿಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ. ಹೆಚ್. ಜಿ. ಗೋವಿಂದ ಗೌಡ ತಿಳಿಸಿದರು.
ಎನ್ ಎಸ್ ಎಸ್ ಪ್ರಾದೇಶಿಕ ಕೇಂದ್ರ, ಬೆಂಗಳೂರು ನಗರ ವಿಶ್ವವಿದ್ಯಾಲಯ, ಯಲಹಂಕ ಉಪನಗರದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತಾಶ್ರಯದಲ್ಲಿ ನಗರದ ಪುರತಾನ ಕಾಲದ ಶಾಮಣ್ಣ ಭಾವಿ ಕಲ್ಯಾಣಿಯಲ್ಲಿ ಗಿಡ, ಹೂಳು ಹಾಗೂ ಕಲ್ಲು ಮಣ್ಣುಗಳಿಂದ ತುಂಬಿ ಹೋಗಿ ನಿರ್ಲಕ್ಷಿತವಾಗಿತ್ತು. ಕಲ್ಯಾಣಿಯನ್ನು ಸ್ವಚ್ಛ ಮತ್ತು ಪುನಶ್ಚೇತನ ಅಭಿಯಾನಕ್ಕೆ ಕಳೆದ ವಾರ ಚಾಲನೆ ನೀಡಲಾಯಿತು. ಸಮಯದ ಭಾವದಿಂದ ಅರ್ಧಕ್ಕೆ ನಿಂತಿದ್ದ ಸ್ವಚ್ಛತಾ ಅಭಿಯಾನಕ್ಕೆ ಇಂದು ಪುನಃ ಪ್ರಾರಂಭಿಸಲಾಯಿತು.
ಡಾ. ಹೆಚ್. ಜಿ. ಗೋವಿಂದ ಗೌಡ ಪುರಾತನ ಕಾಲದಲ್ಲಿ ನಿರ್ಮಿಸುತ್ತಿದ್ದ ಕಲ್ಯಾಣಿ, ಕೆರೆಕಟ್ಟೆಗಳು, ಕುಡಿಯುವ ನೀರಿನ ಸಾಮೂಹಿಕ ಮೂಲವಾಗುವ ಜತೆಗೆ ಮಳೆ ನೀರು ಸಂಗ್ರಹ ಮಾಡಿ, ಅಂತರ್ಜಲ ಹೆಚ್ಚಿಸಲು ವೈಜ್ಞಾನಿಕವಾಗಿ ನಿರ್ಮಾಣವಾಗಿದ್ದವು. ಆದರೆ ನಾವು ಇವುಗಳನ್ನು ನಿರ್ಲಕ್ಷಿಸಿರುವ ಕಾರಣ ಅಂತರ್ಜಲಮಟ್ಟ ಕುಸಿಯುತ್ತಿದೆ ಎಂದರು.
ಯಲಹಂಕ ಉಪನಗರದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ನವೀನ್ ಕುಮಾರ್, ಭವಿಷ್ಯದ ದಿನಗಳಲ್ಲಿ ಎದುರಾಗಲಿರುವ ಸಮಸ್ಯೆಯನ್ನು ಅರಿತ ನಮ್ಮ ಎನ್ ಎಸ್ ಎಸ್ ತಂಡ, ಕಲ್ಯಾಣಿಗಳನ್ನು ಶ್ರಮದಾನಗಳ ಮೂಲಕ ಸ್ವಚ್ಛಗೊಳಿಸಿ ಪುನಶ್ಚೇತನ ನೀಡುವ ಕಾರ್ಯಕ್ಕೆ ಮುಂದಾಗಿದ್ದೇವೆ, ಇದೇ ರೀತಿ ತಿಂಗಳಿಗೆ ಒಂದು ಪುರಾತನ ಕಾಲದ ದೇವಾಲಯಗಳು ಮತ್ತು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಪುನಶ್ಚೇತನ ಗೊಳಿಸುವ ಯೋಜನೆಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಡ್ಲಘಟ್ಟ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸುನಿಲ್, ಮೋಹನ್ ಶಶಾಂಕ್ ಪ್ರಭಾಕರ್, ಜನಾರ್ಧನ್ ಮುಂತಾದವರ ಹಾಜರಿದ್ದರು.