ಸುದ್ದಿಮೂಲ ವಾರ್ತೆ
ಬೆಂಗಳೂರು, ನ. 07 : ನಗರದ ದಕ್ಷಿಣ ವಲಯದ ವ್ಯಾಪ್ತಿಗೆ ಬರುವ ಜಯನಗರ ವಿಭಾಗದ ಜಯನಗರ ವಾಣಿಜ್ಯ ಸಂಕೀರ್ಣದ 9ನೇ ಮುಖ್ಯರಸ್ತೆ, 10ನೇ ಮುಖ್ಯಸ್ತೆ ಹಾಗೂ 27ನೇ ಅಡ್ಡರಸ್ತೆ, 27ನೇ ಎ ಅಡ್ಡರಸ್ತೆ, 30ನೇ ಅಡ್ಡರಸ್ತೆ ಸುತ್ತಮುತ್ತಲಿನ ರಸ್ತೆಗಳ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಚರಣೆಯನ್ನು ನಡೆಸಲಾಯಿತು.
ಉಚ್ಛ ನ್ಯಾಯಾಲಯ ಹೊರಡಿಸಿರುವ ಆದೇಶದನುಸಾರ ಮತ್ತು ಮುಖ್ಯ ಆಯುಕ್ತರು ಬಿಬಿಎಂಪಿ ರವರ ಆದೇಶದಂತೆ ಪಾದಚಾರಿ ಮಾರ್ಗದಲ್ಲಿ ಇಟ್ಟಿರುವ ಅನಧಿಕೃತ ಪೆಟ್ಟಿ ಅಂಗಡಿ, ಅಂಗಡಿ ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅನುವುಮಾಡಲಾಯಿತು.
ಕಾರ್ಯಾಚರಣೆ ನಡೆಯುವ ಮುನ್ನ ವ್ಯಾಪಾರಿಗಳ ಗಮನಕ್ಕೆ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡದಂತೆ ಧ್ವನಿವರ್ಧಕ ಮುಖಾಂತರ ತಿಳಿಸಲಾಗಿದ್ದರೂ ಕೂಡ ರಸ್ತೆಗಳಲ್ಲಿ ಸುಮಾರು 1ಕೀ. ಮೀಟರ್ ರಷ್ಟು ಉದ್ದದ ಪಾದಚಾರಿ ಹಾಗೂ ರಸ್ತೆಯಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಈ ವೇಳೆ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಆರೋಗ್ಯಾಧಿಕಾರಿಗಳು, ಮಾರುಕಟ್ಟೆ ವಿಭಾಗದ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ಸಂಚಾರಿ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಮಾರ್ಷಲ್ಗಳು, ಗ್ಯಾಂಗ್ಮನ್ಗಳು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.