ಬೆಂಗಳೂರು, ಜು, 17; ಮುಂಬರುವ ದಿನಗಳಲ್ಲಿ ಹವಾಮಾನ ವೈಪರಿತ್ಯ, ಗ್ರಾಮೀಣ – ನಗರ ಪ್ರದೇಶದ ವಲಸೆ ಮತ್ತು ಡಿಜಿಟಲ್ ಅಸಮಾನತೆಯಂತಹ ಸಮಸ್ಯೆಗಳನ್ನು ಬಗೆಹರಿಸುವತ್ತ ನಬಾರ್ಡ್ ಗಮನಹರಿಸಬೇಕು ಎಂದು ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ಡಾ.ಈ.ವಿ. ರಮಣ ರೆಡ್ಡಿ ಕರೆ ನೀಡಿದ್ದಾರೆ.
ನಬಾರ್ಡ್ ಸಂಸ್ಥೆಯ 42 ನೇ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಸಿರಿಧಾನ್ಯ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮೂರು ರೈತ ಉತ್ಪಾದಕ ಸಂಸ್ಥೆಗಳು ಮತ್ತು ಮೂರು ಮಂದಿ ರೈತರನ್ನು ಸನ್ಮಾನಿಸಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿರುವ ಈ ಸಂದರ್ಭದಲ್ಲಿ ನಬಾರ್ಡ್ ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡಿದೆ. ಇದನ್ನು ಮುಖ್ಯ ಆಹಾರವಾಗಿ ಪರಿವರ್ತಿಸಲು ಸರ್ಕಾರದ ಕ್ರಮಗಳಿಗೆ ನಬಾರ್ಡ್ ನೆರವು ನೀಡುತ್ತಿದೆ. ಇದಕ್ಕಾಗಿ 38 ರೈತ ಉತ್ಪಾದನಾ ಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು, ಈ ಮೂಲಕ ಆಹಾರ ಭದ್ರತೆ, ಸುಸ್ಥಿರ ಅಭಿವೃದ್ಧಿಗೆ ನಾಂದಿಹಾಡಿದೆ ಎಂದು ಹೇಳಿದರು.
ಗ್ರಾಮೀಣ ಭಾರತದ ಪರಿವರ್ತನೆಗೆ ನಬಾರ್ಡ್ ಕಾರಣವಾಗಿದ್ದು, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ನಿರ್ಮಿಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಆರ್.ಐ.ಡಿ.ಎಫ್ ನಿಧಿಯಿಂದ ಹೆಚ್ಚುವರಿಯಾಗಿ 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಸೌಲಭ್ಯ, 45, ಸಾವಿರ ಕಿಲೋಮೀಟರ್ ಗ್ರಾಮೀಣ ರಸ್ತೆ, ಗೋದಾಮುಗಳು, ಪಶು ಆಸ್ಪತ್ರೆಗಳನ್ನು ನಿರ್ಮಿಸಿದೆ. ಇದು ಕೃಷಿ ಉತ್ಪಾದಕತೆ ಹೆಚ್ಚಿಸಲು ಪ್ರಮುಖವಾಗಿ ಕಾರಣವಾಗಿದ್ದು, ಕೃಷಿ ಉತ್ಪನ್ನ ನಷ್ಟವಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದರು.
ರಾಜ್ಯದಲ್ಲಿ ಈ ಬಾರಿ 3.5 ಲಕ್ಷ ಕೋಟಿ ರೂ ಕೃಷಿ ಸಾಲ ನೀಡುವ ಗುರಿ ಹೊಂದಿದ್ದು, ರಾಜ್ಯ ಸರ್ಕಾರ ಕೂಡ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಪ್ರಮಾಣವನ್ನು 3 ರಿಂದ 5 ಲಕ್ಷಕ್ಕೆ ಏರಿಕೆ ಮಾಡಿದೆ. ಗ್ರಾಮೀಣ ಹಣಕಾಸು ಸಂಸ್ಥೆಗಳು, ವಿಶೇಷವಾಗಿ ಸಹಕಾರ ಸಂಸ್ಥೆಗಳ ಬಲರ್ವಧೆನಗೆ ನಬಾರ್ಡ್ ನೆರವಾಗುತ್ತಿದ್ದು, ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದೆ ಎಂದು ಡಾ.ಈ.ವಿ. ರಮಣ ರೆಡ್ಡಿ ಹೇಳಿದರು.
ನಬಾರ್ಡ್ ನ ಪ್ರಧಾನ ವ್ಯವಸ್ಥಾಪಕ ಟಿ. ರಮೇಶ್ ಮಾತನಾಡಿ, 1982 ರಲ್ಲಿ ನಬಾರ್ಡ್ 1982 ಕೋಟಿ ರೂ ನಿಂದ ತನ್ನ ಚಟುವಟಿಕೆ ಆರಂಭಿಸಿದ್ದು, ಇದೀಗ 8 ಲಕ್ಷ ಕೋಟಿ ರೂಪಾಯಿಗೆ ತನ್ನ ಬೆಳವಣಿಗೆ ದಾಖಲಿಸಿದೆ. ಸಂಚಿತ ಪುನರ್ಧನವಾಗಿ 20 ಲಕ್ಷ ಕೋಟಿ ರೂಪಾಯಿ ನೀಡಿದ್ದು, ಇದರಲ್ಲಿ 8 ಲಕ್ಷ ಕೋಟಿ ರೂಪಾಯಿ ಕೃಷಿ ಬಂಡವಾಳ ರಚನೆಗೆ ನಿಯೋಜಿಸಲಾಗಿದೆ. ಇದು ದೇಶದ ಕೃಷಿ, ಗ್ರಾಮೀಣ ವಲಯದ ಸಮೃದ್ಧಿಗೆ ಪೂರಕವಾಗಿದೆ. ಸಹಕಾರಿ ವಲಯದ ಬಲವರ್ಧನೆಗೆ “ಸಹಕಾರದಿಂದ ಸಮೃದ್ಧಿ” ಪರಿಕಲ್ಪನೆಗೆ ಅನುಗುಣವಾಗಿ ಮತ್ತು ಆಹಾರ ಭದ್ರತೆಯನ್ನು ಬಲಪಡಿಸಲು ಸಾಧ್ಯವಾಗಿದೆ. ಕಳೆದ ಮೂರು ವರ್ಷಗಳಲ್ಲಿ 35 ಸಾವಿರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳನ್ನು ಬಹು ಬಹು ಸೇವಾ ಕೇಂದ್ರಗಳನನ್ನಾಗಿ ಪರಿವರ್ತಿಸಲಾಗಿದೆ. 5491 ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಣ ಮಾಡಲು ಗುರುತಿಸಲಾಗಿದೆ ಎಂದರು.
ಆರ್.ಬಿ.ಐ ಮುಖ್ಯ ಮಹಾ ವ್ಯವಸ್ಥಾಪಕರಾದ ಪಿ.ಎನ್. ರಘುನಾಥ್ ಮಾತನಾಡಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ, ಉತ್ಪಾದನೆ ಮತ್ತು ಆದಾಯ ಹೆಚ್ಚಳಕ್ಕೆ ನಬಾರ್ಡ್ ನೆರವಾಗಿದೆ. ಕೃಷಿಗೆ ಸಾಲ ಸೌಲಭ್ಯ ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ಒಗ್ಗೂಡಿ ಕಾರ್ಯನಿರ್ವಹಿಸಿದ್ದು, ಆರ್ಥಿಕ ಸಾಕ್ಷರತೆ ಮತ್ತು ಎಲ್ಲವನ್ನೊಳಗೊಂಡ ಅಭಿವೃದ್ಧಿ ಸಾಧಿಸುವ ಗುರಿ ಹೊಂದಿದೆ ಎಂದು ಹೇಳಿದರು.
ನಬಾರ್ಡ್ ಸಂಸ್ಥೆಯ 42 ನೇ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಸಿರಿಧಾನ್ಯ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮೂರು ರೈತ ಉತ್ಪಾದಕ ಸಂಸ್ಥೆಗಳು ಮತ್ತು ಮೂರು ಮಂದಿ ರೈತರನ್ನು ಅಭಿವೃದ್ಧಿ ಆಯುಕ್ತ ಡಾ.ಈ.ವಿ. ರಮಣ ರೆಡ್ಡಿ ಸನ್ಮಾನಿಸಿದರು. ನಬಾರ್ಡ್ ನ ಪ್ರಧಾನ ವ್ಯವಸ್ಥಾಪಕ ಟಿ. ರಮೇಶ್, ಆರ್.ಬಿ.ಐ ಮುಖ್ಯ ಮಹಾ ವ್ಯವಸ್ಥಾಪಕರಾದ ಪಿ.ಎನ್. ರಘುನಾಥ್ ಮತ್ತಿತರರು ಉಪಸ್ಥಿತರಿದ್ದರು.*