ಸುದ್ದಿಮೂಲ ವಾರ್ತೆ
ಕೋಲಾರ, ಸೆ.30: ಮೋಡ ಬಿತ್ತನೆ ಆಯಾಯ ಜಿಲ್ಲೆಗಳ ನಿರ್ಧಾರಕ್ಕೆ ಬಿಡಲಾಗಿದೆ. ರಾಜ್ಯಮಟ್ಟದಿಂದ ಅಂತಹ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಚಿವರು, ಬರ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ. ಮುಂದಿನ ವಾರ ಕೇಂದ್ರ ನಿಯೋಗ ಬರುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಾಂತ್ರಿಕ ಸಮಿತಿ ನಮಗೆ ಅನ್ಯಾಯ ಮಾಡುತ್ತಿದೆ. ನಾವು ನೀರು ಬಿಡಲು ಆಗಲ್ಲ ಅನ್ನುವ ವಾದ ಮಾಡುತ್ತಾ ಬಂದಿದ್ದೇವೆ. ನಮ್ಮ ಕಾನೂನು ಹಾಗೂ ತಾಂತ್ರಿಕ ತಂಡ ಸತತ ಪ್ರಯತ್ನ ಮಾಡುತ್ತಿದೆ. ನಾವು ಸಹ ಹಲವು ಬಾರಿ ಮನವಿ ಮಾಡಿದ್ದೇವೆ, ಈಗ ನಾವು ಮೇಲ್ಮನವಿ ಹೋಗುತ್ತಿದ್ದೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಒಂದು ವರದಿ ನೀಡಿದರೆ ನಮಗೆ ಬಹಳ ಅನುಕೂಲ ವಾಗಲಿದೆ. ರಾಜ್ಯ ಸರ್ಕಾರ ಇತಿ ಮಿತಿಯಲ್ಲಿ ಏನೆಲ್ಲಾ ಮಾಡಬೇಕು ಅದನ್ನ ಮಾಡುತ್ತಿದೆ ಎಂದು ಕೃಷಿ ಸಚಿವರು ಹೇಳಿದರು.
ಬಳಿಕ ಕೃಷಿ ಸಚಿವರು ಕೋಲಾರ ತಾಲ್ಲೂಕು ಪುರಹಳ್ಳಿ ಗ್ರಾಮದಲ್ಲಿ ಮಳೆಯ ಕೊರತೆಯಿಂದ ಹಾನಿಗೀಡಾಗಿರುವ ರಾಗಿ ಬೆಳೆ ತಾಕಿಗೆ ಭೇಟಿ ನೀಡಿ ಪರಿಶೀಲಿಸಿ ರೈತರ ಅಹವಾಲು ಆಲಿಸಿದರು.
ಪ್ರತಿ ಬಾರಿ ತಪ್ಪದೆ ಬೆಳೆ ವಿಮೆ ಮಾಡಿಸುವಂತೆ ರೈತರಿಗೆ ಸಲಹೆ ನೀಡುವ ಮೂಲಕ ಅದರಿಂದ ಆಗುವ ಅನುಕೂಲಗಳನ್ನು ವಿವರಿಸಿದರು.
ನಂತರ ಸಚಿವರು ಸೀತಿ ಗ್ರಾಮದ ಪ್ರಗತಿ ಪರ ರೈತರು ಬರದ ನಡುವೆಯೂ ಯಶಸ್ವಿಯಾಗಿ ಬಿತ್ತನೆ ಮೂಲಕ ಬೆಳೆದಿರುವ ರಾಗಿ ಬೆಳೆ ಪ್ರದೇಶಕ್ಕೆ ಭೇಟಿ ನೀಡದರು. ಇದೇ ವೇಳೆ ಸಚಿವರು ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆ ನಡೆಸಿ ಸ್ವತಃ ಸಮೀಕ್ಷೆ ಕಾರ್ಯ ನಡೆಸಿದರು.
ತದ ನಂತರ ಸಚಿವರು ಕೃಷ್ಣಾಪುರ ಗ್ರಾಮದಲಿ ಸಮಗ್ರ ಕೃಷಿ ಪದ್ದತಿ ಅಳವಡಿಸಿ ಕೊಂಡು ಉತ್ತಮ ಲಾಭ ಗಳಿಸುತ್ತಿರುವ ರೈತ ರಾಜಣ್ಣ ಅವರು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ರೈತರೊಂದಿಗೆ ಸಂವಾದ ನಡೆಸಿದರು.
ಶಾಸಕರಾದ ಕೊತ್ನೂರು ಮಂಜುನಾಥ್, ನಂಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್, ವಿಧಾನ ಪರಿಷತ್ ಮಾಜಿ ಸಭಾಪತಿ ಸುದರ್ಶನ್, ಕೃಷಿ ಹಾಗೂ ಜಲಾನಯನ ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.