ಸುದ್ದಿಮೂಲ ವಾರ್ತೆ
ಧಾರವಾಡ,ಏ.25: ಹಿಂದೆ ವರ್ಷಗಳಾದರೂ ರೈತರಿಗೆ ಬೆಳೆ ನಾಶಕ್ಕೆ ಪರಿಹಾರ ಬರುತ್ತಿರಲಿಲ್ಲ. ನಮ್ಮ ಕಾಲದಲ್ಲಿ ಕೇವಲ ಒಂದು ತಿಂಗಳ ಒಳಗೆ ಪರಿಹಾರ ನೇರವಾಗಿ ಡಿಬಿಟಿ ಮೂಲಕ ರೈತರ ಅಕೌಂಟ್ ಗೆ ಸೇರುತ್ತಿದೆ. ಇದು ಸಾಧ್ಯವಾಗಿದ್ದು ಡಬಲ್ ಎಂಜಿನ್ ಸರ್ಕಾರದಿಂದ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅವರು ಇಂದು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದರು.
ಧಾರವಾಡ ಗ್ರಾಮಾಂತರ ಜನತೆ ರಾಜಕೀಯವಾಗಿ ಬಹಳ ಬುದ್ಧಿವಂತರಿದ್ದಾರೆ. ಕರಡಿಗುಡ್ಡದ ಗ್ರಾಮಸ್ಥರು ಏನು ತೀರ್ಮಾನ ಮಾಡುತ್ತಾರೆ ಅದು ಇಡೀ ಕ್ಷೇತ್ರದಲ್ಲಿ ಅದು ನಿಲ್ಲುತ್ತದೆ. ಅಮೃತ ದೇಸಾಯಿ ಅವರು ಎರಡು ಬಾರಿ ಚುನಾವಣೆ ನಿಂತು ಸೋತಿದ್ದಾರೆ. ಇಷ್ಟು ವರ್ಷದಲ್ಲಿ ಜನ ಪಟ್ಟಿರುವ ಕಷ್ಟವನ್ನು ಈ ಬಾರಿ ತಾನು ತೀರಿಸಬೇಕು ಎಂದು ಅಮೃತ ದೇಸಾಯಿ ಅವರು ಹಗಲು ರಾತ್ರಿ ಕಷ್ಟಪಟ್ಟಿದ್ದಾರೆ. ದೊಡ್ಡ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಕರಡಿಗುಡ್ಡದ ಮಲ್ಲಿಕಾರ್ಜುನ ದೇವಸ್ಥಾನ ಅಭಿವೃದ್ಧಿ ಆಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರೈತರ ಸಂಕಷ್ಟಕ್ಕೆ ಸಕಾಲದಲ್ಲಿ ನಾವು ಧಾವಿಸುತ್ತೇವೆ
ಪ್ರವಾಹದಲ್ಲಿ ಬೆಳೆ ನಾಶ ಮತ್ತು ಮನೆ ಹಾನಿಗೊಳಗಾಗಿತ್ತು. ಇದಕ್ಕೆ ಪರಿಹಾರವನ್ನು ಎರಡು ಲಕ್ಷದಿಂದ ಐದು ಲಕ್ಷಕ್ಕೆ ಹೆಚ್ಚಳ ಮಾಡಿದ್ದೇವೆ. ನಾನು ಮುಖ್ಯಮಂತ್ರಿ ಆದ ಮೇಲೆ ಮತ್ತೆ ಬಂದ ಪ್ರವಾಹದಲ್ಲಿ ಆದ ಬೆಳೆ ಹಾನಿಗೆ ನಾವು ಕೇಂದ್ರ ಸರ್ಕಾರದ ಪರಿಹಾರಕ್ಕೆ ಸಮನಾದ ಮೊತ್ತ ಸೇರಿಸಿ ಡಬಲ್ ಪರಿಹಾರ ನೀಡಿದ್ದೇವೆ. ರೈತರು ಸಂಕಷ್ಟದಲ್ಲಿದ್ದಾಗ ಅವರ ಪರವಾಗಿ ಧಾವಿಸುವವರು ನಾವು. ಅಕ್ಕಿ, ರಾಗಿ, ಜೋಳ, ತೊಗರಿ ಬೇಳೆ, ಭತ್ತದ ಬೆಲೆ ಕುಸಿದಾಗ ಬೆಂಬಲ ಬೆಲೆ ನೀಡಿ ಖರೀದಿ ಮಾಡಿದ್ದೇವೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 54 ಲಕ್ಷ ರೈತರಿಗೆ 16000 ಕೋಟಿ ರೂ. ನೇರ ಡಿಬಿಟಿ ಮಾಡಿದ್ದೇವೆ. ಪ್ರವಾಹ ಸಂದರ್ಭದಲ್ಲಿ ರೂ 2800 ಕೋಟಿ ಗಳನ್ನು 47 ಲಕ್ಷ ರೈತರಿಗೆ ಡಿಬಿಟಿ ಮೂಲಕ ಪರಿಹಾರ ನೀಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಾಮಾಜಿಕ ನ್ಯಾಯದ ಭಾಷಣ ಮಾತ್ರ ಮಾಡಿದರು
ಸಿದ್ದರಾಮಯ್ಯ ಅವರು ಎಲ್ಲಿ ಹೋದರೂ ಸಾಮಾಜಿಕ ನ್ಯಾಯ ಎಂದು ಭಾಷಣ ಮಾಡುತ್ತಿದ್ದರು. ಆದರೆ ಅವರು ಮಾತ್ರ ಮುಂದೆ ಹೋಗಿ ಉಳಿದವರನ್ನು ಹಿಂದೆ ಬಿಟ್ಟರು. ಸಿದ್ದರಾಮಯ್ಯ ಶಾದಿ ಭಾಗ್ಯ ನೀಡುವುದಾಗಿ ಮುಸಲ್ಮಾನ ಬಾಂಧವರನ್ನು ಓಡಾಡಿಸಿದರು. ಹಣ ಮಾತ್ರ ಫಲಾನುಭವಿಗಳಿಗೆ ಸಿಕ್ಕಿಲ್ಲ. ಇಡೀ ರಾಜ್ಯಕ್ಕೆ ಕಾಂಗ್ರೆಸ್ ದೌರ್ಭಾಗ್ಯ ಆಗಿದ್ದರಿಂದ 2018 ರಲ್ಲಿ ಜನ ಅವರನ್ನು ಮನೆಗೆ ಕಳಿಸಿದರು ಎಂದು ಸಿಎಂ ಬೊಮ್ಮಾಯಿ ಹೇಳಿದರು.
10 ಕೆಜಿ ಅಕ್ಕಿ ನಾಟಕ ಶುರು ಮಾಡಿದ್ದಾರೆ
ಕಾಂಗ್ರೆಸ್ ಅವರು ಈಗ ಹೊಸ ನಾಟಕ ಶುರು ಮಾಡಿದ್ದಾರೆ. 10 ಕೆಜಿ ಅಕ್ಕಿ ಉಚಿತವಾಗಿ ಕೊಡುವುದಾಗಿ ಗ್ಯಾರಂಟಿ ಕಾರ್ಡ್ ಕೊಡ್ತಿದ್ದಾರೆ. ಅವರು ಅಧಿಕಾರಕ್ಕೆ ಬರುವ ಮೊದಲೇ ಬಿಜೆಪಿ ಸರ್ಕಾರ 10 ಕೆಜಿ ಅಕ್ಕಿ ಕೊಡುತ್ತಿದ್ದೆವು. ಇವರು ಐದು ಕೆಜಿಗೆ ಇಳಿಸಿ, ಮತ್ತೆ ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಡ್ ಕೊಡಲು ಬಂದಿದ್ದಾರೆ. ಜನರಿಗೆ ಅವರ ಮೇಲೆ ನಂಬಿಕೆ ಇಲ್ಲ. ಅವರ ಎಲ್ಲಾ ಗ್ಯಾರಂಟಿ ಕಾರ್ಡ್ ಹೀಗೇ ಇದೆ. ಜನ ಬಹಳ ಬುದ್ಧಿವಂತರಿದ್ದಾರೆ. ನಾನು ಇಡೀ ಕರ್ನಾಟಕ ಸುತ್ತಿದ್ದೇನೆ. ಕಾಂಗ್ರೆಸ್ ಅವರಿಗೆ ಗಂಟೆ ಬಾರಿಸಿ ಮನೆಗೆ ಕಳಿಸಲು ಜನ ತಯಾರಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬಸವಣ್ಣ ಮಾತನ್ನು ಕಾರ್ಯ ರೂಪಕ್ಕೆ ತಂದಿದ್ದೇನೆ
ಬಸವಣ್ಣನ ಸಮಾನತೆಯನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡಿದ್ದೇನೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇನೆ. ಹಾಗಾಗಿ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದೆ. ಜೇನು ಗೂಡಿಗೆ ಕೈ ಹಾಕಬೇಡಿ ಎಂದು ಹೇಳಿದ್ದರು. ಆದರೂ ನನಗೆ ಜೇನು ಕಚ್ಚಿದರೂ ಪರವಾಗಿಲ್ಲ ಎಂದು ದೀನ ದಲಿತರಿಗೆ ಜೇನು ಕೊಟ್ಟಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಧಾರವಾಡದಲ್ಲಿ ಕೈಗಾರಿಕಾ ಕ್ರಾಂತಿ ಆಗುತ್ತಿದೆ.
ಧಾರವಾಡ ಗ್ರಾಮಾಂತರ ಸಮಗ್ರ ಅಭಿವೃದ್ಧಿ ಆಗಬೇಕಿದೆ. ಧಾರವಾಡದಲ್ಲಿ ಎಫ್ ಎಂ ಸಿಜಿ ಕ್ಲಸ್ಟರ್ ಜಾರಿಗೆ ತಂದಿದ್ದೇವೆ. ಧಾರವಾಡ ಗ್ರಾಮಾಂತರದ 1 ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಸಮಗ್ರ ಧಾರವಾಡದಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡುತ್ತೇವೆ. ಮುಂದಿನ 3 ವರ್ಷದಲ್ಲಿ ಧಾರವಾಡ ತಾಲ್ಲೂಕಿನ ಪ್ರತಿ ಮನೆಯ ಯುವಕರಿಗೆ ಉದ್ಯೋಗ ನೀಡುತ್ತೇವೆ. ಈ ಮೂಲಕ ದೊಡ್ಡ ಕೈಗಾರಿಕೆ ಮತ್ತು ಉದ್ಯೋಗ ಕ್ರಾಂತಿ ಮಾಡುತ್ತಿದ್ದೇವೆ. ಜತೆಗೆ ದೊಡ್ಡ ಮಾದರಿ ನಗರವನ್ನು ಇಲ್ಲಿ ಸೃಷ್ಟಿ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಎಲ್ಲಿ ಶಾಂತಿ ಸುವ್ಯವಸ್ಥೆ ಇರುತ್ತದೆ ಅಲ್ಲಿ ಅಭಿವೃದ್ಧಿ ಇರುತ್ತದೆ. ನಮ್ಮ ಯುವಕರ ಭವಿಷ್ಯ ಬರೆಯಲು ಸಾಧ್ಯ. ಡಬಲ್ ಎಂಜಿನ್ ಸರ್ಕಾರದಿಂದ ಹತ್ತಾರು ಅತ್ಯುತ್ತಮ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದನ್ನು ಮನೆಮನೆಗೆ ತಲುಪಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಒಂದುಗೂಡಿ ಶಾಂತಿಯುತವಾಗಿ ಪ್ರಚಾರ ಮಾಡಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.