ಸುದ್ದಿಮೂಲ ವಾರ್ತೆ
ಕಲಬುರಗಿ, ಏ.20: ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳ ಹಾಗೂ ಒಳಮೀಸಲಾತಿ ಜಾರಿಗೊಳಿಸಿರುವುದರಿಂದ ಜನರು ಖುಷಿಯಲ್ಲಿ ಇರುವಾಗ, ಕಾಂಗ್ರೆಸ್ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಶೋಷಿತ ಸಮುದಾಯಗಳಿಗೆ ನ್ಯಾಯ ಬದ್ದ ಮೀಸಲಾತಿ ಕಲ್ಪಿಸಿರುವ ರಾಜ್ಯ ಬಿಜೆಪಿ ಸರ್ಕಾರದ ಮೀಸಲಾತಿಗೆ ಕಾಂಗ್ರೆಸ್ ವಿರೋಧವಿದ್ದು, ಹೀಗಾಗಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೀಳುವ ಒಂದೊಂದು ಮತವೂ ಒಳ ಮೀಸಲಾತಿ ರದ್ದುಗೊಳ್ಳಲು ಸಹಾಯ ಮಾಡಿದಂತಾಗುತ್ತದೆ. ಹೀಗಾಗಿ ಯೋಚಿಸಿ ಮತ ಹಾಕಿ ಎಂದು ಜನತೆಗೆ ಕರೆ ನೀಡಿದರು.
ಕಾಂಗ್ರೆಸ್ ಎಂದಿಗೂ ಸಾಮಾಜಿಕ ನ್ಯಾಯದ ಪರ ಇರಲಿಲ್ಲ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಕೇವಲ 1000 ಕೋಟಿ ರೂ ಹಂಚಿಕೆ ಮಾಡಿ, ಅದರಲ್ಲಿ ಬರೀ 300 ಕೋಟಿ ಬಿಡುಗಡೆ ಮಾಡಿದ್ದರು. ನಾವು 3000 ಕೋಟಿ ಘೋಷಣೆ ಮಾಡಿ ಅಷ್ಟೂ ಹಣ ಬಿಡುಗಡೆ ಮಾಡಿದ್ದೇವೆ,
ಈ ವರ್ಷ ಬಜೆಟ್ ನಲ್ಲಿ ಕೆಕೆಆರ್ಡಿಬಿಗೆ 5 ಸಾವಿರ ಕೋಟಿ ರೂ ಮೀಸಲು ಇಟ್ಟಿದ್ದೆವೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಂದು ಹುದ್ದೆಯನ್ನೂ ಭರ್ತಿ ಮಾಡಲಿಲ್ಲ. ನಾವು 14000 ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಿದ್ದೇವೆ. ಈ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರ ಶಾಲಾ ಕೋಣೆಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಅಲ್ಲದೇ, ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಮೆಗಾ ಟೆಕ್ಸ್ ಟೈಲ್ ಪಾರ್ಕ್ ತರಲಾಗಿದೆ. ಹೀಗಾಗಿ ಬಿಜೆಪಿಗೆ ಬೆಂಬಲಿಸಬೇಕು ಎಂದರು.
ಪಕ್ಷದ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಕ್ಷೇತ್ರದ ಕೆಲ ತುಕಡೆ ತುಕಡೆ
ಗ್ಯಾಂಗ್ ಗಳು ನಮ್ಮ ಮನೆ ಒಡೆಯುವ ಹುನ್ನಾರ ಮಾಡಿದ್ದಾರೆ. ಆದರೆ ನಮ್ಮ ಭದ್ರಕೋಟೆ ಒಡೆಯಲು ಸಾಧ್ಯವಿಲ್ಲ. ನನ್ನ ಸಹೋದರನ್ನ ದಾರಿ ತಪ್ಪಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಆದರೂ ನನ್ನ ಗೆಲವು ನೂರಕ್ಕೆ ನೂರರಷ್ಟು ಖಚಿತ ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ, ಜಾರ್ಖಂಡ್ ಸಂಸದ ನಿಶಿಕಾಂತ ದುಬೆ, ಶಾಸಕ ಸುಭಾಷ್ ಗುತ್ತೇದಾರ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್, ಕಲಬುರಗಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಾಧ್ಯಕ್ಷ ಅಶೋಕ ಬಗಲಿ, ಅವ್ವಣ್ಣ ಮ್ಯಾಕೇರಿ, ಬಿಜೆಪಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಚಂದಮ್ಮ ಪಾಟೀಲ್, ಶಿವಕಾಂತ ಮಹಾಜನ್ ಸೇರಿದಂತೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.