ಸುದ್ದಿಮೂಲ ವಾರ್ತೆ
ಮೈಸೂರು, ಸೆ.26:ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ ಎಂದು ನೂತನ ಡಿವೈಎಸ್ಪಿ ಮತ್ತು ಅಬಕಾರಿ ಡಿವೈಎಸ್ಪಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಮಂಗಳವಾರ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ 37ನೇ ತಂಡದ ಪ್ರೊಬೆಷನರಿ ಪೊಲೀಸ್ ಉಪಾಧೀಕ್ಷಕರು ಮತ್ತು ಅಬಕಾರಿ ಉಪಾಧೀಕ್ಷಕರು ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸುಳ್ಳು ಮತ್ತು ದ್ವೇಷದ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಅತ್ಯಂತ ನಿಷ್ಠುರವಾಗಿ ವರ್ತಿಸಿ ಪ್ರತಿಯೊಬ್ಬರ ಸಂವಿಧಾನ ಬದ್ದ ಹಕ್ಕುಗಳನ್ನು ರಕ್ಷಿಸುವ ಸವಾಲು ನಿಮ್ಮ ಮೇಲಿದೆ. ದ್ವೇಷ ಕಾರುವವರಿಗೆ ಎಷ್ಟೇ ರಾಜಕೀಯ ಶಕ್ತಿ ಇದ್ದರೂ ಅವರನ್ನು ಮಟ್ಟ ಹಾಕದಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕ ಪೊಲೀಸ್ ಅಕಾಡೆಮಿ ತರಬೇತಿಯಲ್ಲಿ ಉನ್ನತ ಪ್ರತಿಷ್ಠೆ ಗಳಿಸಿದೆ. ಇಲ್ಲಿ ಶಿಸ್ತಿನ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು ಪ್ರಶಿಕ್ಷಣಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ,ಸಾರ್ವಜನಿಕ ಜೀವನದಲ್ಲಿ ಇರುವವರೆಗೆ ನಾವು ಸಾಮಾಜಿಕ ಜವಾಬ್ದಾರಿಯನ್ನು, ಜನಸ್ನೇಹಿಗಳಾಗಿರುವುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಗೃಹ ಸಚಿವ ಜಿ.ಪರಮೇಶ್ವರ್ ಅವರು ಅಧ್ಯಕ್ಷತೆ ವಹಿಸಿದ್ದರು.