ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.25: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಕೆಲ ಸಚಿವರು ಮಳೆ ಬಾಧಿತ ಜಿಲ್ಲೆಗಳತ್ತ ತೆರಳಿದ್ದಾರೆ. ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಿಗೆ ತೆರಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಬಿರುಸು ಪಡೆದುಕೊಂಡಿದ್ದು ಜನಜೀವನ ಭಾಧಿತಗೊಂಡಿದೆ. ಅನೇಕ ಕಡೆ ಮನೆಗಳ ಗೋಡೆಗಳು ಮತ್ತು ಮೇಲ್ಚಾವಣಿ ಕುಸಿದಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ರೈತರ ಬೆಳೆಗಳಿಗೆ ಹಾನಿಯಾಗಿದೆ. ಹಲವು ಜಿಲ್ಲೆಗಳಲ್ಲಿ ಮಳೆಯ ಕಾರಣ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಪಶ್ಚಿಮಘಟ್ಟ ಪ್ರದೇಶ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.
ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಹಾವೇರಿಗೆ ಸಿಎಂ ಭೇಟಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹಾವೇರಿ ಜಿಲ್ಲೆ ಪ್ರವಾಸ ಕೈಗೊಂಡಿದ್ದರು. ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಮತ್ತು ಪ್ರವಾಹದಿಂದ ತೊಂದರೆಗೆ ಒಳಗಾದ ಜಿಲ್ಲೆಗಳಲ್ಲಿ ಪರಿಶೀಲನಾ ಸಭೆ ನಡೆಸುವುದಾಗಿ ಹೇಳಿದ್ದಾರೆ.
ಉಡುಪಿ, ಮಂಗಳೂರು ಹಾಗೂ ಉತ್ತರಕನ್ನಡ ಜಿಲ್ಲೆ ಸೇರಿದಂತೆ ಮಳೆಯಿಂದ ಹೆಚ್ಚು ತೊಂದರೆಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಸಚಿವರಿಗಳಿಗೂ ಜಿಲ್ಲೆಗಳಿಗೆ ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ. ಜೂನ್ ತಿಂಗಳಲ್ಲಿ ಮಳೆಯ ಕೊರತೆಯಾಗಿತ್ತು. ಆದರೆ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆಯಾಗಿದೆ ಎಂದರು.
ಕೊಡಗು ಜಿಲ್ಲೆಗೆ ಸಚಿವರ ಭೇಟಿ:
ಕೊಡಗು ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್ ಬೋಸರಾಜ್ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿ ಪರಿಹಾರ ಕಾರ್ಯ ಪರಿಶೀಲಿಸಿದರು. ಮುಂಬರುವ ದಿನಗಳಲ್ಲಿ ಮಳೆಯಿಂದ ಹೆಚ್ಚಿನ ಅನಾಹುತವಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಭಾರೀ ಮಳೆಯಿಂದ ಉಂಟಾಗುವ ವಿಕೋಪಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಬೋಸರಾಜ್ ಮಡಿಕೇರಿಯಲ್ಲಿಂದು ಸುದ್ದಿಗಾರರಿಗೆ ತಿಳಿಸಿದರು.
ಕರಾವಳಿಯಲ್ಲಿ ಭಾರಿ ಮಳೆ ಮುನ್ಸೂಚನೆ:
ಕರಾವಳಿಯಲ್ಲಿ ನಾಳೆಯವರೆಗೆ ಬಲವಾದ ಗಾಳಿ ಬೀಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಹಾಗೂ ಪಾಣೆಮಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 50ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಕಡಬದಲ್ಲಿ 10 ಮಂದಿಗೆ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆಯಿಂದಾಗಿ 19 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಿರಂತರ ಮಳೆಯಿಂದಾಗಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಭಾರೀ ಗಾಳಿಯಿಂದಾಗಿ ಅಲ್ಲಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿವೆ. ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ತೋಟಗಾರಿಕೆ ಹಾಗೂ ಕೃಷಿ ಬೆಳೆಗೆ ತೀವ್ರ ಹಾನಿಯಾಗಿದೆ. ನದಿ ಪಾತ್ರದ ತೋಟ ಮತ್ತು ಗದ್ದೆಗಳು ಜಲಾವೃತಗೊಂಡಿವೆ.
ಮಗು ಸಾವು, ಮನೆ ಕುಸಿತ:
ದಾವಣಗೆರೆ ಜಿಲ್ಲೆಯಲ್ಲಿ ಸತತ ಮಳೆಯಿಂದ ಜೀವ ಹಾನಿ ಸಂಭವಿಸಿದೆ. ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಒಂದು ವರ್ಷದ ಮಗು ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಹರಿಹರ ತಹಶೀಲ್ದಾರ್ ಮತ್ತು ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಹೊನ್ನಾಳಿ, ನ್ಯಾಮತಿ, ಜಗಳೂರು ತಾಲ್ಲೂಕುಗಳಲ್ಲಿ 15 ಕ್ಕೂ ಹೆಚ್ಚು ಮನೆಗಳು ಕುಸಿದು 10 ಲಕ್ಷ ರೂಪಾಯಿ ಅಧಿಕ ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ. ಹಾಸನ ತಾಲೂಕಿನ ಗೊರೂರು ಹೇಮಾವತಿ ಜಲಾಯಶಕ್ಕೆ ಇಂದು 25 ಸಾವಿರದ 888 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಡ್ಯಾಂ ಭರ್ತಿಯಾಗಲು ಇನ್ನು ಕೇವಲ 16 ಅಡಿ ಮಾತ್ರ ಬಾಕಿಯಿದೆ.
ಹಾಸನ, ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಹೇಮಾವತಿ ನದಿಗೆ ಒಳಹರಿವಿನಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು ಮಳೆ ಇನ್ನು ಮುಂದುವರೆದಿದೆ. ಚಿಕ್ಕಮಗಳೂರು ಜಿಲ್ಲೆ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದೆ. ನಿರಂತರ ಮಳೆಯಿಂದ ಮುಳ್ಳಯ್ಯನಗಿರಿ, ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ ಮುಣ್ಣು ಕುಸಿದಿದೆ. ನದಿಗಳು ಜಲಪಾತಗಳು ತುಂಬಿ ಹರಿಯುತ್ತಿರುವ ಕಾರಣ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಜನರು ಪ್ರವಾಸ ಮುಂದೂಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮನವಿ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯ ಶಹಾಪುರ ತಾಲ್ಲೂಕಿನ ಮದ್ರಿಕಿ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ಮನೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಶಹಾಪುರ ತಾಲ್ಲೂಕಿನಲ್ಲಿ ಮಳೆಯಿಂದ 27 ಮನೆಗಳಿಗೆ ಹಾನಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಿದ್ದರೂ ಪ್ರಮುಖ ನದಿಗಳ ಇಕ್ಕೆಲಗಳಲ್ಲಿ ಪ್ರವಾಹ ಭೀತಿ ತಲೆದೋರಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಇಂದು ಸಹ ಶಾಲಾ ಕಾಲೇಜುಗಳಲ್ಲಿ ರಜೆ ಘೋಷಿಸಲಾಗಿದೆ. ಕದ್ರಾ, ಕೊಡಸಳ್ಳಿ ಜಲಾಶಯಗಳು ಭರ್ತಿಯಾಗಿದ್ದು, ನಿರಂತರವಾಗಿ ನೀರನ್ನು ಹೊರಬಿಡಲಾಗುತ್ತಿದೆ. ಪರಿಣಾಮ ಜಲಾಶಯಗಳ ಕೆಳಭಾಗದ ಅನೇಕ ಗ್ರಾಮಗಳು ಜಲಾವೃತವಾಗಿದೆ. ಕಾಳಿ, ಗಂಗಾವಳಿ, ಅಘನಾಶಿನಿ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಕೆಲವೆಡೆ ಹೊಲಗದ್ದೆಗಳು ಜಲಾವೃತಗೊಂಡು, ರೈತರ ಬೆಳೆಗೆ ಹಾನಿಯಾಗಿದೆ. ವ್ಯಾಪಕ ಮಳೆಗೆ ಶಿರಸಿ – ಕುಮಟಾ ರಾಜ್ಯ ಹೆದ್ದಾರಿಯ ರಾಗಿಹೊಸಳ್ಳಿ ಬಳಿ ಮಣ್ಣು ಕುಸಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.