ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.8: ಶಾಸಕರ ಅತೃಪ್ತಿ ಮಣಿಸಲು ಸ್ವತಃ ಜಿಲ್ಲಾವಾರು ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಆರು ಜಿಲ್ಲೆಗಳ 50 ಶಾಸಕರ ಬೇಡಿಕೆ ಮತ್ತು ಸಲಹೆಗಳನ್ನು ಅತ್ಯಂತ ಸಹನೆಯಿಂದ ಕೇಳಿ ಭರವಸೆ ನೀಡಿದರು.
ರಾಯಚೂರು, ವಿಜಯಪುರ, ಕೊಪ್ಪಳ, ಹಾವೇರಿ, ಬೆಳಗಾವಿ, ಕಲಬುರಗಿ ಜಿಲ್ಲೆಗಳ ಶಾಸಕರು ಮತ್ತು ಜಿಲ್ಲಾ ಸಚಿವರುಗಳು ಹಾಗೂ ಕಾರ್ಯದರ್ಶಿಗಳ ಜತೆ ಸರಣಿ ಸಭೆಗಳನ್ನು ನಡೆಸಿದರು. ಮಧ್ಯಾಹ್ನ ಊಟದ ಬಿಡುವೂ ಇಲ್ಲದಂತೆ ಸಭೆ ನಡೆಸುತ್ತಲೇ ಊಟ ಮಾಡಿದ ಪ್ರಸಂಗ ನಡೆಯಿತು.
ಕ್ಷೇತ್ರದ ಕೆಲಸಗಳು, ಅಗತ್ಯ ಅನುದಾನ, ಪರಸ್ಪರ ಸಮನ್ವಯತೆ ಮತ್ತು ಲೋಕಸಭಾ ಚುನಾವಣೆ ಬಗ್ಗೆ ಸಚಿವರು, ಶಾಸಕರೊಂದಿಗೆ ಸಿಎಂ ಚರ್ಚಿಸಿ ಹಲವು ಮಹತ್ವದ ಸಲಹೆ ಸೂಚನೆಗಳನ್ನು ನೀಡಿದರು.
ಆಗಸ್ಟ್ 20 ರಂದು ರಾಜ್ಯದಲ್ಲಿ ಉದ್ಘಾಟನೆಗೊಳ್ಳಲಿರುವ ದೇಶದ ಚರಿತ್ರೆಯಲ್ಲೇ ಅತ್ಯಂತ ದೊಡ್ಡ ಜನೋಪಯೋಗಿ ಯೋಜನೆ ‘ಗೃಹ ಲಕ್ಷ್ಮಿ’ ಕಾರ್ಯಕ್ರಮದ ಯಶಸ್ವಿಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಜತೆ ವಿಡಿಯೊ ಸಂವಾದ ನಡೆಸಿದರು.
ಬೆಳಗ್ಗೆ 10 ಗಂಟೆಗೆ ತಮ್ಮ ನಿವಾಸದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸುವ ಮೂಲಕ ದಿನಚರಿ ಆರಂಭಿಸಿದ ಮುಖ್ಯಮಂತ್ರಿಗಳು ರಾತ್ರಿ 9 ಗಂಟೆವರೆಗೂ (11 ಗಂಟೆಗಳ ಕಾಲ) ಸರಣಿ ಸಭೆಗಳನ್ನು ಬಿಡುವಿಲ್ಲದಂತೆ ನಡೆಸಿದರು.
ಮಂತ್ರಿ ಸ್ಥಾನ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಕಲಬುರ್ಗಿಯಲ್ಲಿ ಇತ್ತೀಚೆಗೆ ಜರುಗಿದ ಗೃಹಜ್ಯೋತಿ ಕಾರ್ಯಕ್ರಮದಿಂದಲೂ ಸಹ ದೂರ ಉಳಿದಿದ್ದರು. ಆದರೆ, ಇಂದು ಮುಖ್ಯಮಂತ್ರಿಗಳು ಕರೆದ ಸಭೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.