ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.22: ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕೈಗಾರಿಕೋದ್ಯಮಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಭೆ ನಡೆಸಲಿದ್ದಾರೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣ ಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಸಣ್ಣ ಕೈಗಾರಿಕೆಗಳಿಂದ ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದರು. ರಾಜ್ಯದ ಕೆಲವೆಡೆ ಸಣ್ಣ ಕೈಗಾರಿಕೆಗಳ ಸಂಘ ಪ್ರತಿಭಟನೆ ಮಾಡುತ್ತಿದ್ದಾರೆ. ಕೆಇಆರ್ಸಿ ವಿದ್ಯುತ್ ದರ ಹೆಚ್ಚಿಸಿದೆ. ವಿಧಾನಸಭೆ ಚುನಾವಣೆ ವೇಳೆ ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಜೊತೆ ನಾಳೆ ಸಭೆ ಕರೆಯಲಾಗಿದೆ ಎಂದರು.
‘ಸಭೆಯಲ್ಲಿ ಕೈಗಾರಿಕೆಗಳೋದ್ಯಮಿಗಳು ಭಾಗಿಯಾಗಲಿದ್ದಾರೆ. ಕಾಸಿಯಾ, ಎಫ್ಕೆಸಿಸಿಐ ಪ್ರತಿನಿಧಿಗಳು ಕೂಡಾ ಇರಲಿದ್ದಾರೆ. ಸಮಸ್ಯೆ, ಬೇಡಿಕೆಗಳನ್ನು ಆಲಿಸಲಾಗುವುದು. ಅಂತಿಮವಾಗಿ ಪರಿಹಾರಕ್ಕೆ ಬರಲಾಗುವುದು. ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ” ಎಂದು ಹೇಳಿದರು.
ಸಭೆ ನಡೆಸಿದ ಬಳಿಕ ಕೈಗಾರಿಕೋದ್ಯಮಿಗಳಿಗೆ ಸಮಾಧಾನ ಸಿಗುವ ಭರವಸೆ ಇದೆ. ಅವರ ಬೇಡಿಕೆಗಳನ್ನು ಆಲಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಕೈಗಾರಿಕೆಗಳ ಉಳಿವಿಗೆ ಏನೆಲ್ಲ ಮಾಡಬೇಕು ಅದನ್ನೆಲ್ಲವನ್ನೂ ಮಾಡಲಾಗುವುದು. ಕೈಗಾರಿಕೆಗಳು ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುತ್ತವೆ. ಹಾಗಾಗಿ ಸರ್ಕಾರದ ಮೇಲೆ ಸಾಕಷ್ಟು ಜವಾಬ್ದಾರಿ ಇದೆೆ. ಈ ನಿಟ್ಟಿನಲ್ಲಿ ಸಿಎಂ ನೇತೃತ್ವದ ಸಭೆಯಲ್ಲಿ ಪರಿಹಾರ ಹುಡುಕುತ್ತೇವೆ” ಎಂದು ಮಾಹಿತಿ ನೀಡಿದರು.