ಸುದ್ದಿಮೂಲ ವಾರ್ತೆ
ಮೈಸೂರು, ಅ.7: ಬಿಹಾರದ ಸಿಎಂ ನಿತೀಶ್ಕುಮಾರ್ ಅವರು ಜಾತಿಗಣತಿ ವರದಿ ಬಿಡುಗಡೆ ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿಯೂ ಸಹ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಿ ಅದನ್ನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದಾರೆ.
ಜಾತಿಗಣತಿ ಸಮಾಜವನ್ನು ವಿಂಗಡಿಸುವುದಿಲ್ಲ. ಯೋಜನೆಗಳನ್ನು ಸಿದ್ದಪಡಿಸಲು ಅವಶ್ಯ, ಯಾವ ಸಮುದಾಯ ಎಷ್ಷಿದೆ ಎಂಬುದು ತಿಳಿಯುತ್ತದೆ. ಇದರಿಂದ ಸಮರ್ಪಕವಾಗಿ ಯೋಜನೆಗಳನ್ನು ತಯಾರಿಸಿ ಅನುಷ್ಠಾನಗೊಳಿಸಬಹುದು ಎಂದು ಶನಿವಾರ ಮೈಸೂರಿನ ಏರ್ಪೋರ್ಟ್ನಲ್ಲಿ ಹೇಳುವ ಮೂಲಕ ಜಾತಿಗಣತಿ ವರದಿ ಬಿಡುಗಡೆ ಮಾಡಿ, ಜಾರಿಗೊಳಿಸುವ ಬಗ್ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು.
ಬರುವ ನವೆಂಬರ್ನಲ್ಲಿ ಕರ್ನಾಟಕದ ಜಾತಿಗಣತಿ ವರದಿ ನನ್ನ ಕೈ ಸೇರಬಹುದು. ನಂತರ ಪರಿಶೀಲಿಸಿ ತೀರ್ಮಾನ ಮಾಡಲಾಗುವುದು. ಸಮಿತಿ ಅಧ್ಯಕ್ಷರು ಬದಲಾಗಿದ್ದಾರೆ. ಕಾಂತರಾಜು ಅಧ್ಯಕ್ಷರಾಗಿದ್ದಾಗ ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವರದಿ ನೀಡಿದ್ದರು. ಆಗ ಜಾತಿ ಗಣತಿ ವರದಿ ಸ್ವೀಕರಿಸಲಿಲ್ಲ ಎಂದರು.
ಈಗ ಸಮಿತಿಯ ಅಧ್ಯಕ್ಷರು ಬದಲಾಗಿದ್ದಾರೆ. ಯಾವ ಸಮುದಾಯ ಎಷ್ಟಿದೆ ಎಂಬುದು ಅಂಕಿ ಅಂಶಗಳು ಸರ್ಕಾರಕ್ಕೆ ಬೇಕು. ನಮ್ಮದು ಜಾತಿ ವ್ಯವಸ್ಥೆ ಆಧಾರಿತ ಸಮಾಜ. ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ ಕೊಡಬೇಕು. ಅದಕ್ಕೆ ಜಾತಿವಾರು ಅಂಕಿ ಅಂಶಗಳು ಬೇಕು ಎಂದು ಪ್ರತಿಪಾದಿಸಿದರು.
ಹೊಸ ಮದ್ಯದಂಗಡಿಗಳು ಇಲ್ಲ:
ರಾಜ್ಯಾದ್ಯಂತ ಗ್ರಾಮ ಪಂಚಾಯ್ತಿಗಳಲ್ಲಿ ಮದ್ಯದಂಗಡಿಗಳನ್ನು ತೆರೆಯುವುದಕ್ಕಿಂತ ನಮಗೆ ಸಾರ್ವಜನಿಕರ ಅಭಿಪ್ರಾಯ ಮುಖ್ಯ. ಹೊಸ ಮದ್ಯಂದಗಡಿಗಳನ್ನು ತೆರೆಯಲು ಅವಕಾಶವಿಲ್ಲ ಎಂದ ಸಿಎಂ, ಮದ್ಯದಂಗಡಿ ತೆರೆಯುವ ವಿಚಾರ ಸಂಬಂಧ ಕುಡಿಯುವವರನ್ನ ತಡೆಯೋದಕ್ಕೆ ಆಗುತ್ತಾ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಹೊಸದಾಗಿ ಮದ್ಯದಂಗಡಿ ತೆರೆಯಲು ಅನುಮತಿ ಕೊಡ್ತೀವಿ ಅಂತ ಹೇಳಿದ್ದಾರಾ? ಎಂದು ಮರು ಪ್ರಶ್ನೆ ಹಾಕಿದರು.
ಆ ರೀತಿಯ ಯಾವುದೇ ಪ್ರಸ್ತಾಪ ಇಲ್ಲ. ಹೊಸ ಲಿಕ್ಕರ್ ಶಾಪ್ ತೆರೆಯಲು ಅವಕಾಶವಿಲ್ಲ. ಹೊಸ ಬಾರ್ ಲೈಸೆನ್ಸ್ ಕೊಡುವ ವಿಚಾರ ಸರ್ಕಾರದ ಮುಂದೆ ಸದ್ಯಕ್ಕೆ ಇಲ್ಲ ಎಂದು ಹೇಳಿದರು.
ನಕಾರ
ಇದೇ ವೇಳೆ ಮುಖ್ಯಮಂತ್ರಿಗಳು, ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಮಹಿಷಾ ಆಚರಣಗೆ ಅನುಮತಿ ನೀಡಿಲ್ಲ
ಮಹಿಷಾ ದಸರಾ ಆಚರಣೆ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ, ಈ ಹಿಂದೆಯೂ ಮಹಿಷಾ ದಸರ ಆಚರಣೆ ಮಾಡಿದ್ದಾರೆ. ಮಹಿಷಾ ದಸರ ಆಚರಿಸುವುದನ್ನ ಜಿಲ್ಲಾಡಳಿತ ತೀರ್ಮಾನ ಮಾಡುತ್ತದೆ. ಸರ್ಕಾರದಿಂದ ಈವರಗೆ ಯಾವುದೇ ಅನುಮತಿ ನೀಡಿಲ್ಲ. ಮೈಸೂರು ಜಿಲ್ಲಾಡಳಿತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಎಲ್ಲಾ ಹಳ್ಳಿಯ ಜನರನ್ನು ಖುದ್ದಾಗಿ ಭೇಟಿ ಮಾಡಿ ಸಮಸ್ಯೆ ಆಲಿಸಿ ಅಂಥಾ ಕೇಂದ್ರ ತಂಡಕ್ಕೆ ಮನವಿ ಮಾಡಲಾಗಿದೆ. ಅ ಕಡೇ ಈ ಕಡೆ ಬನ್ನಿ ಎಂದು ನಿರ್ದೇಶನ ಮಾಡಲು ಸಾಧ್ಯವಿಲ್ಲ. ಹೊಲದಲ್ಲಿ ಹಸಿರು ಇದ್ದ ಕಾರಣಕ್ಕೆ ಅದು ಫಲ ಎಂಬ ಅರ್ಥ ಅಲ್ಲ. ಬೆಳೆ ಬರಬೇಕು ಹೀಗಾಗಿ ಹಸಿರನ್ನು ನೋಡಿ ತೀರ್ಮಾನವಾಗಬಾರದು ಎಂದು ಹೇಳಿದರು.
4500 ಕೋಟಿ ಬರ ಪರಿಹಾರ ಕೇಳಿದ್ದೇವೆ. ಕೇಂದ್ರ ತಂಡ ಇಲ್ಲಿಂದ ಹೀಗಿ ವರದಿ ಕೊಡುತ್ತದೆ. ವರದಿ ಆಧಾರದ ಮೇಲೆ ತೀರ್ಮಾನ ಆಗುತ್ತದೆ. ಬರಕ್ಕೂ ಗ್ಯಾರೆಂಟಿ ಯೋಜನೆಗಳಿಗೆ ಸಂಬಂಧ ಇಲ್ಲ. ಬರದ ಪರಿಸ್ಥಿತಿ ಇದ್ದರು ಗ್ಯಾರೆಂಟಿಗಳು ಎಂದಿನಂತೆ ನಡೆಯುತ್ತದೆ ಎಂದು ಹೇಳಿದರು.