ಸುದ್ದಿಮೂಲ ವಾರ್ತೆ
ಕಲಬುರಗಿ,ಸೆ.17: ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಬೆಳವಣಿಗೆಗೆ ನೀಲನಕ್ಷೆ ಸಿದ್ಧಪಡಿಸಲು ಸೂಚಿಸಲಾಗಿದ್ದು ನಕ್ಷೆ ಸಿದ್ದಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಅವರು ಇಂದು ಕಲಬುರಗಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬುವಂತೆ ಸೂಚಿಸಲಾಗಿದೆ. ಶಿಕ್ಷಣಕ್ಕೆ ಒತ್ತು ನೀಡಬೇಕು. ಕೆ.ಕೆ ಆರ್.ಡಿ.ಬಿ ವ್ಯಾಪ್ತಿಯ ಯಾವ ಹುದ್ದೆಯೂ ಖಾಲಿ ಇರಬಾರದು. ಈಗಾಗಲೇ 2618 ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಇನ್ನೂ ಹುದ್ದೆಗಳು ಖಾಲಿ ಇದ್ದರೆ ನೇಮಕಾತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಸರ್ವಪಕ್ಷ ನಿಯೋಗಕ್ಕೆ ತಿಂಗಳಾದರೂ ಪ್ರಧಾನ ಮಂತ್ರಿಗಳು ಸಮಯ ಕೊಟ್ಟಿಲ್ಲ
ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಎಫ್ ಮಾನದಂಡಗಳನ್ನು ಬದಲಾಯಿಸಬೇಕೆಂದು ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದು ತಿಂಗಳಾಗಿದೆ. ಸರ್ವಪಕ್ಷ ನಿಯೋಗ ದೆಹಲಿಗೆ ತೆರಳಲು ಪತ್ರ ಬರೆದಿದ್ದು, ಈವರೆಗೆ ಒಂದು ತಿಂಗಳಾದರೂ ಪ್ರಧಾನ ಮಂತ್ರಿಗಳು ಸಮಯ ಕೊಟ್ಟಿಲ್ಲ. ಪುನಃ ಪತ್ರ ಬರೆಯುತ್ತಿದ್ದೇನೆ. ಜಂಟಿ ಸಮೀಕ್ಷೆ ಯ ನಂತರ ಎಷ್ಟು ಪರಿಹಾರ ನೀಡಬೇಕೆಂದು ತಿಳಿಯಲಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ಜನ-ಜಾನುವಾರು ಕಾಪಾಡಲು ಕೋಟಿ ರೂ.ಗಳ ತುರ್ತು ಯೋಜನೆ
ಬೆಳೆ ಪರಿಹಾರ ನೀಡುವ ಸಂಬಂಧ ಈಗಾಗಲೇ ಆದೇಶ ಹೊರಡಿಸಿದ್ದು ಜಾನುವಾರುಗಳಿಗೆ ಸದ್ಯಕ್ಕೆ ಮೇವಿನ ತೊಂದರೆ ಇಲ್ಲ. ಮುಂದೆ ತೊಂದರೆಯಾಗಬಹುದು ಎಂದು ತುರ್ತು ಯೋಜನೆ ತಯಾರು ಮಾಡಿದ್ದು, 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಜಂಟಿ ಸಮೀಕ್ಷೆ ಗಳನ್ನು ನಡೆಸಿದಾಗ 161 ತಾಲ್ಲೂಕುಗಳು ತೀವ್ರ ಬರಗಾಲಕ್ಕೆ ತುತ್ತಾಗಿವೆ. 34 ತಾಲ್ಲೂಕುಗಳಲ್ಲಿ ಸಾಧಾರಣ ಬರಗಾಲ. ಒಟ್ಟು 195 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದೆ. ಬೆಲೆ ಪರಿಹಾರ, ಕುಡಿಯುವ ನೀರು, ಜನ ಗುಳೆ ಹೋಗುವುದನ್ನು ತಡೆಯುತ್ತೇವೆ ಎಂದರು.
ಇಂಜಿನಿಯರಿಂಗ್ ವಿಭಾಗ
ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ರೂ.ಗಳನ್ನು ಒದಗಿಸಿದ್ದು, ಇಂಜಿನಿಯರಿಂಗ್ ವಿಭಾಗ ಆಗಬೇಕೆಂಬ ಬೇಡಿಕೆಯಿದ್ದು, ಈ ಬಗ್ಗೆ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.
ಕಲಬುರಗಿ ಯಲ್ಲಿ 371 ಜೆ ಕೋಶ ಸ್ಥಾಪನೆ ಮಾಡಲು ಪ್ರಾಮಾಣಿಕ ಪ್ರಯತ್ನ
ಕಲ್ಯಾಣ ಕರ್ನಾಟಕ ಭಾಗದ ಮುಂಬಡ್ತಿ, ನೇಮಕಾತಿಗೆ ಸಂಬಂಧಿಸಿದಂತೆ 371 (ಜೆ) ಕೋಶ ಬೆಂಗಳೂರಿನಲ್ಲಿದೆ. ಕಲಬುರಗಿ ಯಲ್ಲಿ ಸ್ಥಾಪನೆಯಾಗಬೇಕೆಂದು ಹಿಂದಿನ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದರು ಆದರೆ ಪಾಲಿಸಲಿಲ್ಲ. ಆದರೆ ಅದನ್ನು ಜಾರಿ ಮಾಡಲು ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದರು.
ಸಮಸ್ಯೆಗಳಿಗೆ ಪರಿಹಾರ ದೊರಕಬೇಕು
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕೆಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಸಚಿವ ಸಂಪುಟ ಸಭೆಯನ್ನೂ ನಡೆಸುತ್ತೇವೆ. ಆದರೆ ಸಭೆ ನಡೆಸುವುದಕ್ಕಿಂತ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರಕುವುದು ನಮ್ಮ ಆದ್ಯರೆಯಾಗಿದೆ ಎಂದರು.
ಅತಿಥಿ ಶಿಕ್ಷಕರಿಗೆ ಕಡಿಮೆ ಸಂಬಳ ಪಾವತಿಯಾಗುತ್ತಿರುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಗ್ಯಾರಂಟಿ ಯೋಜನೆಗಳ ಪ್ರಭಾವ: ತೆಲಂಗಾಣ, ರಾಜಸ್ತಾನ ದಲ್ಲಿಯೂ ಘೋಷಣೆ
ಗ್ಯಾರಂಟಿ ಯೋಜನೆಗಳ ಪ್ರಭಾವದಿಂದ ತೆಲಂಗಾಣ, ರಾಜಸ್ಥಾನ ರಾಜ್ಯಗಳಲ್ಲಿಯೂ ಗೃಹಲಕ್ಷ್ಮೀ ಯೋಜನೆಯಂಥ ಯೋಜನೆಗಳು ಘೋಷಣೆಯಾಗುತ್ತಿವೆ. ಜಾಗತಿಕ ಮೂಲ ಆದಾಯ ಎಂಬ ಪರಿಕಲ್ಪನೆ ಯನ್ನು ನಾವು ಅಳವಡಿಸಿಕೊಂಡು ಜನರಿಗೆ ದುಡ್ಡು ಕೊಡುತ್ತಿದ್ದೇವೆ. ಖರೀದಿಸುವ ಸಾಮರ್ಥ್ಯ ಹೆಚ್ಚಾದರೆ ಆರ್ಥಿಕ ಚಟುವಟಿಕೆಗಳು ಮತ್ತು ತಲಾದಾಯ ಹೆಚ್ಚಳವಾಗಿ, ಜಿಡಿಪಿ ಹೆಚ್ಚಾಗಲಿದೆ. ಇದರಿಂದ ರಾಜ್ಯ ಅಭಿವೃದ್ಧಿಯಾಗಲಿದೆ ಎಂದರು.
ಕೆಕೆ ಆರ್.ಡಿಬಿ ಯಲ್ಲಿ ಅವ್ಯವಹಾರ: ಸೂಕ್ತ ಕ್ರಮ
ಕೆ.ಕೆ.ಆರ್.ಡಿ.ಬಿ ಯಲ್ಲಿ ಅವ್ಯವಹಾರ ವಾಗಿರುವ ಬಗ್ಗೆ ಮಾತನಾಡಿ ತನಿಖೆ ಜಾರಿಯಲ್ಲಿದೆ, ಅಭಿವೃದ್ಧಿ ಆಯುಕ್ತರ ವರದಿ ಬರಬೇಕಿದೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
26000 ಹುದ್ದೆಗಳ ಹಂತ ಹಂತವಾಗಿ ಭರ್ತಿ
ಕಲ್ಯಾಣ ಕರ್ನಾಟಕದಲ್ಲಿ ಖಾಲಿಯಿರುವ 26000 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಶಿಕ್ಷಕರು, ವೈದ್ಯರು, ಸುಮಾರು 40 ಸಾವಿರ ಜನರಿದ್ದಾರೆ. ನಮ್ಮ ಅವಧಿಯಲ್ಲಿಯೇ 70 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ವಿವರಿಸಿದರು.
ಹೊಸದಾಗಿ 8 ವಿಶ್ವವಿದ್ಯಾಲಯ ಪ್ರಾರಂಭ ಮಾಡುವುದು ಜನಪರ ನಿರ್ಣಯವಲ್ಲ
ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ವಿಶ್ವವಿದ್ಯಾಲಯದ ಯೋಜನೆ ಕುರಿತು ಮಾತನಾಡಿ, ಹೊಸದಾಗಿ 8 ವಿಶ್ವವಿದ್ಯಾಲಯ ಪ್ರಾರಂಭ ಮಾಡುವುದು ಜನಪರ ನಿರ್ಣಯವಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇರುವ ವಿವಿಗಳಿಗೆ ಮೂಲಸೌಕರ್ಯ ನೀಡಲು ಆಗಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.