ಸುದ್ದಿಮೂಲ ವಾರ್ತೆ
ಮೈಸೂರು, ಅ.24: ದಸರಾ ಮಹೋತ್ಸವದ ಜಂಬೂ ಸವಾರಿಗೆ ಚಾಲನೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪ್ರದಾಯದಂತೆ ಅರಮನೆ ಆವರಣದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಈ ವೇಳೆ ವೀರಗಾಸೆ ಮತ್ತು ಮಂಗಳವಾದ್ಯಗಳು ಮೊಳಗಿದವು.
ನಂತರ ಎಂದಿನಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉತ್ತಮ ಮಳೆ, ಬೆಳೆ ಆಗಿ ನಾಡು ಸಮೃದ್ಧಿಯನ್ನು ಹೊಂದಲಿ, ಜನರು ಸುಖ, ಸಂತೋಷದಿಂದ ಇರಲಿ ಎಂದು ದೇವರಲ್ಲಿ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.
ಜಂಬೂಸವಾರಿ ನೋಡಲು ರಾಜ್ಯ ಮತ್ತು ದೇಶ ವಿದೇಶಗಳಿಂದ ಜನರು ಆಗಮಿಸಿದ್ದಾರೆ. ಈ ದಸರಾ ಉತ್ಸವವನ್ನು ವಿಜಯನಗರ ಅರಸರು ಆಚರಿಸುತ್ತಿದ್ದರು. ಆನಂತರ ಮೈಸೂರು ಅರಸರು ನವರಾತ್ರಿ ಸಂದರ್ಭದಲ್ಲಿ ದಸರಾ ಮಹೋತ್ಸವವನ್ನು ಆರಂಭಿಸಿದರು ಎಂದು ಹೇಳಿದರು.
ರಾಜಪ್ರಭುತ್ವದಲ್ಲಿ ಅಂಬಾರಿಯಲ್ಲಿ ರಾಜರು ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಪ್ರಜಾ ರಾಜ್ಯ ಬಂದ ನಂತರ ಮೈಸೂರಿನಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ವಿಜಯದಶಮಿಯ ದಿನದಂದು ನಾಡ ಅದಿದೇವತೆ ಚಾಮುಂಡೇಶ್ವರಿ ದೇವಿಯನ್ನು ಕುಳ್ಳಿರಿಸಿ ಪುಷ್ಪಾರ್ಚನೆ ಮಾಡಿ ನಂತರ ಮೆರವಣಿಗೆ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದಸರಾ ವೀಕ್ಷಣೆಗೆ ಆಗಮಿಸಿದ್ದಾರೆ. ಕಾರಣ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ತಂದಿರುವುದು ಎಂದು ಹೇಳಿದರು.
ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ಮೈಸೂರು ದಸರಾ ಒಂದು ರಾಷ್ಟ್ರೀಯ ಹಬ್ಬವಾಗಿದೆ. ಈ ಸಂದರ್ಭದಲ್ಲಿ ನಾಡಿನ ಜನತೆ ನೆಮ್ಮದಿ ಶಾಂತಿ ಸುಖದಿಂದ ಇರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.
ತೆರೆದ ವಾಹನದಲ್ಲಿ
ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುಲಿದ ನಂತರ ತೆರೆದ ವಾಹನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ,ಡಿಸಿಎಂ ಡಿ.ಕೆ.ಶಿವಕುಮಾರ್,ಸಚಿವರಾದ ಹೆಚ್.ಸಿ.ಮಹದೇವಪ್ಪ,ಕೆ.ಎಚ್.ಮುನಿಯಪ್ಪ,ಮೈಸೂರು ಮೇಯರ್ ಶಿವಕುಮಾರ್ ಮತ್ತಿತರರೊಂದಿಗೆ ತೆರೆದ ವಾಹನದಲ್ಲಿ ಅರಮನೆ ಆವರಣದಲ್ಲಿ ಉದ್ದಕ್ಕೂ ತೆರಳಿ ಜನತೆಯತ್ತ ಕೈ ಬೀಸಿ ಅಭಿನಂದನೆ ಸಲ್ಲಿಸಿದರು.