ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.26: ಸಹಕಾರ ಸಂಘಗಳು ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಸದಸ್ಯರು ಪ್ರಯೋಜನ ಪಡೆದು ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಸುರೇಶ್ ಹೇಳಿದರು.
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ನಡೆದ 2022-23ನೇ ಸಾಲಿನ ಸರ್ವ ಸದಸ್ಯರ 48ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರಿಗೆ ಸರಕಾರ ನೇರವಾಗಿ ಸವಲತ್ತುಗಳು ನೀಡಲು ಸಾಧ್ಯವಿಲ್ಲವೆಂಬುದನ್ನು ಅರಿತು ಸಹಕಾರ ಸಂಘಗಳ ಮುಖೇನ ರೈತರ ಬೇಡಿಕೆಗಳಿಗೆ ತಕ್ಕಂತೆ, ಯೋಜನೆ ರೂಪಿಸಿ, ರೈತ ಕುಟುಂಬಗಳನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಪ್ರಯತ್ನ ಮಾಡುತ್ತಿವೆ. ಸತತ ರೈತರ ಸೇವೆಯಲ್ಲಿ ತೊಡಗಿರುವ ನಮ್ಮ ಬ್ಯಾಂಕ್ ಲಾಭ ಗಳಿಸುವುದರಲ್ಲಿ ಮುಂದಿದೆ. ಆಡಳಿತ ಮಂಡಳಿ ಹಾಗೂ ಷೇರುದಾರರು ಸಂಘದ ಏಳಿಗೆಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಆರ್. ರಾಜಣ್ಣ ಮಾತನಾಡಿ, ಸಂಘದ ವ್ಯಾಪ್ತಿಗೆ 59 ಹಳ್ಳಿಗಳು ಒಳಪಟ್ಟಿದ್ದು, 5624 ಷೇರು ಸದಸ್ಯರನ್ನು ಹೊಂದಿದೆ. 2022-23ನೇ ಸಾಲಿನಲ್ಲಿ ಸಂಘದ ವಹಿವಾಟು 6.72 ಕೋಟಿ ರೂ.ಗಳ ವಹಿವಾಟು ನಡೆದಿದೆ. ವ್ಯಾಪಾರ ಲಾಭ 25.80 ಲಕ್ಷ ರೂ. ಪಡೆದು, ನಿವ್ವಳ ಲಾಭ 27.58 ಲಕ್ಷ ರೂ. ಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಸಿಎಸ್ನ ಉಪಾಧ್ಯಕ್ಷ ರಾಮಚಂದ್ರಪ್ಪ, ನಿರ್ದೇಶಕರಾದ ಎಂ. ಭತ್ಯಪ್ಪ, ಎಂ.ಮುನಿಅಣ್ಣಯ್ಯ, ಜೆ.ಎಂ.ನಟರಾಜ್, ಎಸ್.ರಮೇಶ್, ಕರಿಯಪ್ಪ, ಸರ್ದಾರ್ ಬೇಗ್, ಚಿಕ್ಕ ನಾರಾಯಣಸ್ವಾಮಿ, ವಿ.ನಾರಾಯಣಪ್ಪ, ಶಿಲ್ಪ, ಜಯಲಕ್ಷ್ಮಿ ಹಾಗೂ ಷೇರುದಾರರು ಭಾಗವಹಿಸಿದ್ದರು.