ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಸೆ.19 : ಸಹಕಾರ ಸಂಘಗಳು ರೈತರ ಜೀವನಾಡಿಯಾಗಿ ಕೆಲಸ ನಿರ್ವಹಿಸುತ್ತಿವೆ. ಕೇಂದ್ರ ಸರಕಾರ ಹೊಸದಾಗಿ ದೇಶದ ಎಲ್ಲೆಡೆ ಸಹಕಾರ ಸಂಘಗಳ ಹೆಸರನ್ನು ಬದಲಾವಣೆ ಮಾಡಿದ್ದು, ವ್ಯವಸಾಯ ಸೇವಾ ಸಹಕಾರ ಸಂಘದ ಹೆಸರಿನ ಬದಲಿಗೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘ ಎಂದು ಹೆಸರಿಡಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ವೃತ್ತಿಪರ ನಿರ್ದೇಶಕ ಕಾಮೇನಹಳ್ಳಿ ರಮೇಶ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕುಂದಾಣ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಮಾನ್ಯ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳು ರೈತರ ಜೀವನಾಡಿ. ಗ್ರಾಮೀಣ ಪ್ರದೇಶಗಳಲ್ಲಿರುವ ಸಹಕಾರ ಸಂಘಗಳು ಬಲಿಷ್ಠವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ವ ಸದಸ್ಯರು ಒಗ್ಗೂಡಿ ಸಂಘದ ಅಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸಬೇಕು. ಪ್ರತಿಯೊಬ್ಬರು ಸಹಕಾರ ಸಂಘದಲ್ಲಿ ಶೂನ್ಯ ಬಡ್ಡ್ಡಿಯಲ್ಲಿ ರೂ.5ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ ಎಂದರು.
ಸರ್ಕಾರಿ ಜಾಗ ಯಾವುದಾದರು ಇದ್ದರೆ ಗುರುತಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿ, ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಿಕೊಳ್ಳಬೇಕು. ಈಗಾಗಲೇ ಮಂಡಿಬೆಲೆ ಸಂಘದಲ್ಲಿ ಜಾಗವನ್ನು ಗುರುತಿಸಿ ಸಂಘಕ್ಕೆ ಮಂಜೂರು ಮಾಡಿಕೊಂಡಿರುತ್ತಾರೆ. ಕುಂದಾಣ ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹೀಗೆ ಮುಂದುವರೆದುಕೊಂಡು ಹೋಗಬೇಕು ಎಂದು ಹೇಳಿದರು.
ಕುಂದಾಣ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಡಿ.ಜಿ.ಪ್ರಭಾಕರ್ ಮಾತನಾಡಿ, ಸಂಘದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರನ್ನು ಒಳಗೊಂಡಂತೆ ಉತ್ತಮವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. 2022-23ನೇ ಸಾಲಿನ ವಾರ್ಷಿಕ ವರದಿಯನ್ನು ಮಹಾಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ರಮೇಶ್ ಮಂಡಿಸಿದ್ದಾರೆ. ಸಾಲ ಸೌಲಭ್ಯವನ್ನು ಪಡೆದವರು ಮರು ಪಾವತಿಯನ್ನು ಸಕಾಲದಲ್ಲಿ ಮಾಡಿದರೆ ಮತ್ತಷ್ಟು ಸಂಘವನ್ನು ಅಭಿವೃದ್ಧಿ ಪಡಿಸಲು ಮತ್ತು ಸಾಲ ಸೌಲಭ್ಯದ ಮೌಲ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.
ಇದೇ ವೇಳೆ ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಲಕ್ಷಣ್, ಶ್ರೀನಿವಾಸ್, ನಾಗೇಶ್, ಸಂಘದ ಉಪಾಧ್ಯಕ್ಷೆ ಸುಶೀಲಮ್ಮ, ನಿರ್ದೇಶಕರಾದ ದಿನ್ನೂರು ರಾಮಣ್ಣ, ಬಿ.ವಿ.ಚನ್ನಕೃಷ್ಣಪ್ಪ, ಎನ್.ಮಂಜುನಾಥ್, ಹೆಚ್.ಬಸವರಾಜ್, ಡಿ.ಎನ್.ಮಧು, ಎಸ್.ವಿ.ಮಲ್ಲಪ್ಪ, ಎಂ.ವಿಜಯ್, ಭಾಗ್ಯ, ಚಿಕ್ಕಮುನಿಶಾಮಪ್ಪ, ಗೋವಿಂದರಾಜು, ಡಿಸಿಸಿ ಬ್ಯಾಂಕ್ ಪ್ರತಿನಿಧಿ, ಮುಖ್ಯಕಾರ್ಯನಿರ್ವಣಾಧಿಕಾರಿ ಕೆ.ರಮೇಶ್, ಗುಮಾಸ್ಥ ಕೆ.ಎಂ.ಸುಮ, ಸಹಾಯಕ ತಿಮ್ಮರಾಯಪ್ಪ, ಸದಸ್ಯರು ಇದ್ದರು.